ಸಾಮಾಜಿಕ ಜಾಲತಾಣಗಳು ಒಳ್ಳೆಯದ್ದೋ ಕೆಟ್ಟದ್ದೋ ಎಂಬುರ ಕುರಿತಾಗಿ ಪರ ವಿರೋಧ ಚರ್ಚೆಗಳು ಇಂದಿಗೂ ನಡೆಯುತ್ತಿದೆ. ಒಳ್ಳೆಯದಾದರೂ ಹಾಳಾದರೂ ಜನರನ್ನು ತಲುಪಲು ಸಾಮಾಜಿಕ ಜಾಲತಾಣವು ಶಕ್ತಿಶಾಲೀ ಮಾಧ್ಯಮ ಎನ್ನುವುದನ್ನಂತೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅಂತರ್ಜಾಲವು ತುಟ್ಟಿಯಾಗಿರುವ ಈ ಕಾಲಘಟ್ಟದಲ್ಲಂತೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದ ವ್ಯಕ್ತಿಗಳು ಇಲ್ಲವೇ ಇಲ್ಲವೆನ್ನಬಹುದಾದಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಒಂದಂತೂ ಸತ್ಯ ಮಾಧ್ಯಮಗಳ ಜಾಗವನ್ನು ನಿಧಾನವಾಗಿ ಸಾಮಾಜಿಕ ಜಾಲತಾಣಗಳು ತುಂಬುತ್ತಿವೆ. ಟ್ವಿಟ್ಟರ್, ಫೇಸ್ಬುಕ್. ಲಿಂಕ್ಡ್ಇನ್, ಇನ್ಸ್ಟಾಗ್ರಾಮ್ ಹೀಗೆ ಹತ್ತು ಹಲವು ಜಾಲತಾಣಗಳು ವಿಶ್ವದೆಲ್ಲೆಡೆ ಸಕ್ರಿಯವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.
ಟ್ವಿಟ್ಟರ್ನಲ್ಲಿ ಬರೆಯಬಹುದಾದ ವಿಚಾರಗಳಿಗೆ ಪದಬಳಕೆಯ ಮಿತಿಗಳಿವೆ, ಆದರೆ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಗಳನ್ನೂ ನೀವು ಟ್ಯಾಗ್ ಮಾಡಬಹುದು. ಆದರೆ ಫೇಸ್ಬುಕ್ನಲ್ಲಿ ಹಾಗಲ್ಲ , ಇಲ್ಲಿ ಪದಬಳಕೆಗೆ ಮಿತಿಯಿಲ್ಲ ಆದರೆ ನಿಮ್ಮ ಸ್ನೇಹಿತರಲ್ಲದ ವ್ಯಕ್ತಿಯನ್ನು ನೀವು ಟ್ಯಾಗ್ ಮಾಡಲು ಸಾಧ್ಯವಿಲ್ಲ. ಟ್ವಿಟ್ಟರ್ ಬಳಕೆ ಮಾಡುವ ಎಲ್ಲರಿಗೂ ಹ್ಯಾಶ್ಟ್ಯಾಗ್ಗಳ ಬಳಕೆಗಳ ಕುರಿತಾಗಿ ಅರಿವಿರಬಹುದು, ಒಂದೇ ಹ್ಯಾಶ್ಟ್ಯಾಗ್ ಅನ್ನು ಬಹಳಷ್ಟು ಜನರು ಬಳಸಿದಾಗ ಅದು ಟ್ರೆಂಡ್ ಒಂದನ್ನು ಸೂಚಿಸುತ್ತದೆ, ಇದನ್ನೇ ಟ್ವಿಟ್ಟರ್ ಟ್ರೆಂಡ್ ಅಥವಾ ಟ್ವಿಟ್ಟರ್ ಟ್ರೆಂಡಿಂಗ್ ಎಂದು ಕರೆಯಲಾಗುತ್ತದೆ. ಈ ಟ್ವಿಟ್ಟರ್ ಟ್ರೆಂಡಿಂಗ್ ಒಳ್ಳೆಯದೋ ಕೆಟ್ಟದ್ದೋ ಎಂಬುದು ಕೂಡಾ ಒಂದು ವಿವಾದಾತ್ಮಕ ವಿಚಾರ. ಯಾಕೆಂದರೆ ಇದರ ಮೂಲಕ ಕೆಟ್ಟದ್ದನ್ನೂ ಟ್ರೆಂಡ್ ಮಾಡಬಹುದು ಮತ್ತು ಒಳ್ಳೆಯ ವಿಚಾರಗಳನ್ನೂ ಬಹಳ ಜನರ ಗಮನಕ್ಕೆ ತರಬಹುದು.
ಉದಾಹರಣೆಗೆ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ಕುರಿತಾಗಿ ತನಿಖೆ ನಡೆಸುವಂತೆ ಒತ್ತಾಯಿಸಲು ಅವರ ಅಭಿಮಾನಿಗಳು ಸುಶಾಂತ್ ಸಿಂಗ್ಗೆ ನ್ಯಾಯ ಕೊಡಿ ಎನ್ನುವ ಹ್ಯಾಶ್ಟ್ಯಾಗ್ ಅನ್ನು ಬಹಳಷ್ಟು ಜನಪ್ರಿಯಗೊಳಿಸಿದರು. ಇದರ ಪರಿಣಾಮವಾಗಿ ಈ ವಿಚಾರವು ಕಾಡ್ಗಿಚ್ಚಿನಂತೆ ಹರಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಈ ರೀತಿಯ ಬಹಳಷ್ಟು ಉದಾಹರಣೆಗಳು ಲಭ್ಯವಿದೆ, ಅರ್ನಬ್ ಗೋಸ್ವಾಮಿಯ ಪರವಾಗಿ, ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ… ಹೀಗೆ ಅನೇಕ ವಿಚಾರಗಳಲ್ಲಿ ಈ ಟ್ವಿಟ್ಟರ್ ಟ್ರೆಂಡಿಂಗ್ ಎಂಬುದು ಧನಾತ್ಮಕ ಪರಿಣಾಮಗಳನ್ನು ನೀಡಿದೆ. ಆದರೆ, ಅನೇಕ ಸುಳ್ಳು ಸುದ್ದಿಗಳನ್ನು ಹರಡಲು ಟ್ವಿಟ್ಟರ್ ಟ್ರೆಂಡಿಂಗ್ ಅನ್ನು ವ್ಯವಸ್ಥಿತವಾಗಿ ಬಳಸುವ ತಂತ್ರಗಳನ್ನೂ ರೂಪಿಸಲಾಗುತ್ತದೆ. ಉದಾಹರಣೆಗೆ ನಿನ್ನೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರ ತಮಿಳು ನಾಡಿನ ಭೇಟಿಯ ಸಂದರ್ಭದಲ್ಲಿ ಅಮಿತ್ ಷಾ ಹಿಂತಿರುಗಿ ಎಂಬ ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ಈ ಟ್ವೀಟ್ಗಳನ್ನೂ ತಮಿಳುನಾಡಿನವರೇ ಮಾಡಿದ್ದಾರೆ, ತಮಿಳುನಾಡಿನ ಜನರು ಗೃಹ ಸಚಿವರನ್ನು ದ್ವೇಷಿಸುತ್ತಾರೆ ಎಂಬ ಸಂದೇಶವನ್ನು ಸಾರುವ ಉದ್ದೇಶವನ್ನು ಈ ಟ್ರೆಂಡ್ ತೋರಿಸಿತ್ತು. ಆದರೆ ಅಮಿತ್ ಷಾ ಚೆನೈನಲ್ಲಿ ಇಳಿದಾಗದಿಂದ ಪ್ರಾರಂಭವಾಗಿ, ಮಾರ್ಗದ ಇಕ್ಕೆಲಗಳಲ್ಲಿ ಸೇರಿದ್ದ ಜನಸ್ತೋಮವು ಟ್ವಿಟ್ಟರ್ ಟ್ರೆಂಡಿಂಗ್ ಸುಳ್ಳು ಹಾಗೂ ವ್ಯವಸ್ಥಿತವಾಗಿ ಮಾಡಲಾದ ಕುತಂತ್ರ ಎಂಬುದನ್ನು ಸಾಕ್ಷ್ಯ ಸಮೇತ ಸಾರುತ್ತಿತ್ತು.
ಕೆಲವು ದಿನಗಳ ಹಿಂದೆ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾದ ಸ್ವಲ್ಪ ಸಮಯದಲ್ಲೇ ಲೈಕ್ಗಳಿಗಿಂತ ಡಿಸ್ ಲೈಕ್ಗಳು ಹೆಚ್ಚಾದವು, ಇದನ್ನು ಕಂಡ ಗುಲಾಮರು ಜನರು ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದರು, ಆದರೆ ಒಂದು ಬಾರಿ ಆಲೋಚಿಸಿ ನೋಡಿ, ಅವರೇನು ಮಾತನಾಡುತ್ತಾರೆ ಎಂದು ಕೇಳುವ ಮುನ್ನವೇ ಡಿಸ್ಲೈಕ್ ಒತ್ತಲು ಅದು ಹೇಗೆ ಸಾಧ್ಯ, ಇಷ್ಟವಿದೆಯೋ ಇಲ್ಲವೋ ಎಂದು ಭಾವನೆಯನ್ನು ವ್ಯಕ್ತಪಡಿಸಲು ಅವರೇನೆಂದು ಹೇಳುತ್ತಿದ್ದಾರೆ ಎಂದು ಕೇಳಬೇಕಲ್ಲವೇ? ಈ ಮೇಲಿನ ಎರಡು ಘಟನೆಗಳಿಂದ ಒಂದಂತೂ ಸ್ಪಷ್ಟವಾಗುತ್ತದೆ ಈ ಡಿಸ್ಲೈಕ್ ಮತ್ತು ಟ್ವಿಟ್ಟರ್ ಟ್ರೆಂಡಿಂಗ್ಗಳು ಪೂರ್ವ ನಿರ್ಧಾರಿತ. ಕೆಲವು ವರದಿಗಳ ಪ್ರಕಾರ ಡಿಸ್ಲೈಕ್ಗಳು ಹಾಗೂ ಹ್ಯಾಶ್ಟ್ಯಾಗ್ನ ಬಳಕೆಗಳು ವಿದೇಶದಿಂದ ಚಲಾವಣೆಯಾಗುವ ಖಾತೆಗಳಿಂದ ಬರುತ್ತಿದೆ ಎಂಬುದು, ಒಂದು ಬಾರಿ ಖಾತೆಗಳ ಮೂಲ ಪಾಕಿಸ್ಥಾನ ಎಂಬುದಾಗಿಯೂ ವರದಿಯಾಗಿತ್ತು.
ಕೆಲವು ವರ್ಷಗಳಿಗೂ ಮುನ್ನ, ಕೊಲ್ಲಿರಾಷ್ಟ್ರದಲ್ಲಿ ಇದೇ ರೀತಿಯಾಗಿ ಮೋಸದಿಂದ ಹ್ಯಾಶ್ಟ್ಯಾಗ್ ಒಂದನ್ನು ಟ್ರೆಂಡಿಂಗ್ನಲ್ಲಿ ಇರಿಸಲಾಗಿತ್ತು. ಬ್ರಾಂಡ್ ಒಂದನ್ನು ಪ್ರಾಖ್ಯಾತಪಡಿಸಲು, ಅವರು ಕಂಡುಕೊಂಡಿದ್ದ ಸುಲಭೋಪಾಯ ಇದಾಗಿತ್ತು, ಮಾತ್ರವಲ್ಲ ಈ ರೀತಿ ಕಾರ್ಯಕ್ರಮ ನಡೆಸಲು ಅವರು ಹಣವನ್ನೂ ಖರ್ಚು ಮಾಡಿದ್ದರು. ಆ ದೇಶದಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವ ಜನರ ಸಂಖ್ಯೆಗೂ ಹೆಚ್ಚಾಗಿ ಬಂಡ ಹ್ಯಾಶ್ಟ್ಯಾಗ್ಗಳ ಸಂಖ್ಯೆಯು ಸಂಶಯ ಮೂಡಲು ಪ್ರಮುಖ ಕಾರಣವಾಗಿತ್ತು. ಈ ಕುರಿತಾಗಿ ಅನೇಕ ತನಿಖೆಗಳು ನಡೆದವು ಎಂಬುದಾಗಿ ಬಿಬಿಸಿ ಪತ್ರಿಕೆಯಲ್ಲೂ ವರದಿಯಾಗಿತ್ತು. ವಿದೇಶದಲ್ಲಿದ್ದ ಈ ಪ್ರಕ್ರಿಯೆಯು ಇದೀಗ ನಮ್ಮ ದೇಶದಲ್ಲೂ ಕಾಲಿರಿಸಿದೆ.
ಇದನ್ನು ಸರಿಪಡಿಸಲು ನಾವೇನು ಮಾಡಬಹುದು ಎಂಬುದು ಆಲೋಚಿಸಬೇಕಾದ ಪ್ರಮುಖ ವಿಚಾರ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಇರುವಂತಹ, ಅಥವಾ ಹೆಚ್ಚಾಗಿ ಬಳಕೆಯಲ್ಲಿರುವ ವಿಚಾರವನ್ನು ಅಂಧರಾಗಿ ಹಿಂಬಾಲಿಸಲು ಹೋಗದೆ, ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಯಾವುದೋ ಒಂದು ಲೇಖನ ಬಹಳ ಸದ್ದು ಮಾಡುತ್ತಿದೆ ಬಹಳಷ್ಟು ಜನರು ಶೇರ್ ಮಾಡಿದ್ದಾರೆ ಬಹಳಷ್ಟು ಜನ ಲೈಕ್ ಒತ್ತಿದ್ದಾರೆ ಎಂದ ಮಾತ್ರಕ್ಕೆ ಆ ಲೇಖನದಲ್ಲಿ ಬರೆದದ್ದೆಲ್ಲವೂ ಸತ್ಯವಿರಬೇಕೆಂದೇನಿಲ್ಲ, ನೀವು ಸಮೂಹ ಸನ್ನಿಗೆ ಒಳಗಾಗಿ ಅದನ್ನು ಹಂಚಿಕೊಳ್ಳುವ ಮುಖಾಂತರ ಆ ವಿಚಾರದ ಕುರಿತಾಗಿ ಸಹಮತ ಹೊಂದಿದ್ದೀರಿ ಎಂಬ ಸಂದೇಶವನ್ನು ನಿಮ್ಮ ಸ್ನೇಹಿತರ ವೃಂದಕ್ಕೆ ನೀಡುತ್ತೀರಿ, ಮತ್ತವರು ನೀವು ಹಂಚಿಕೊಂಡಿದ್ದೀರಿ ಎಂದು ಹಂಚಿಕೊಳ್ಳುತ್ತಾರೆ. ಈ ರೀತಿಯಾಗಿ ಇದೊಂದು ವೃತ್ತದಂತೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಚಾರವನ್ನಾಗಲೀ ಕೇವಲ ಭಾವಚಿತ್ರ ಅಥವಾ ತಲೆಬರಹವನ್ನು ಮಾತ್ರ ಓದಿ ಹಂಚಿಕೊಳ್ಳುವ ತಪ್ಪನ್ನು ಖಂಡಿತಾ ಮಾಡಬಾರದು. ಯಾಕೆಂದರೆ ಇದು ಜನರನ್ನು ಮೂರ್ಖರನ್ನಾಗಿಸುವ ತಂತ್ರವೂ ಆಗಿರಬಹುದಲ್ಲವೇ? ತಲೆಬರಹದ ವಿರುದ್ಧವಾದ ವಿಚಾರ ಲೇಖನದಲ್ಲಿ ಇರಲೂ ಸಾಧ್ಯವಿದೆ. ಟ್ವಿಟ್ಟರ್ನಲ್ಲಿ ಟ್ರೆಂಡಿಗ್ ಇದೆ, ಅನೇಕ ಜನರು ಹಂಚಿಕೊಂಡಿದ್ದಾರೆ ಎಂಬ ಕುತೂಹಲ ಸಹಜವಾದರೂ ಕೂಲಂಕುಷವಾಗಿ ಪರಿಶೀಲಿಸಿ ವಿಶ್ಲೇಷಿಸಬೇಕಾದದ್ದು ಎಲ್ಲರ ಜವಾಬ್ದಾರಿ. ಇಂದಿಗೂ ನಮ್ಮ ಮಧ್ಯ ಅನೇಕ ನಕಲಿ ಖಾತೆಗಳಿವೆ. ಇಂತಹಾ ಖಾತೆಗಳಿಂದ ಸಾಧ್ಯವಾದಷ್ಟು ದೂರವಿದ್ದು, ಅದನ್ನು ಸಾಮಾಜಿಕ ಜಾಲತಾಣ ಸಂಸ್ಥೆಯ ಗಮನಕ್ಕೆ ತರುವುದೂ ಕೂಡಾ ಅಷ್ಟೇ ಮುಖ್ಯವಾಗಿದೆ.
ಪ್ರತಿಯೊಂದು ಬಾರಿಯೂ ನೀರು ಹರಿಯುವ ದಿಕ್ಕಿನಲ್ಲೇ ಸಾಗಬೇಕಾಗಿಲ್ಲ, ವಿರುದ್ಧ ದಿಕ್ಕಿಗೂ ಈಜಬಹುದು. ಯಾಕೆಂದರೆ ನೀರು ನದಿಯನ್ನೋ, ಸಾಗರವನ್ನೂ ಸೇರದೆ, ಚರಂಡಿಯನ್ನೂ ಸೇರುವ ಸಾಧ್ಯತೆಯೂ ಇರುತ್ತದೆ ಅಲ್ಲವೇ?
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.