“ದೇವರ ಸ್ವಂತ ನಾಡು” ಎಂದು ಕರೆಯಲ್ಪಡುವ ಕೇರಳದಲ್ಲಿ ನಡೆಯುವ ರಾಜಕೀಯ ಮಾತ್ರ ದಾನವ ಸ್ವರೂಪದ್ದು. ಹಲವಾರು ವರುಷಗಳಿಂದಲೂ ಕೇರಳದಲ್ಲಿ ಸಂಘ ಪರಿವಾರದ ಸದಸ್ಯರ ಹಾಗೂ ಬಿಜೆಪಿ ಸದಸ್ಯರ ಮಾರಣ ಹೋಮ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ದೇಶದ ಇತರೆಲ್ಲಾ ರಾಜ್ಯಗಳಿಗಿಂತ ಕೇರಳದ ರಾಜಕೀಯ ತುಂಬಾ ಭಿನ್ನವಾದದ್ದು. ಅಲ್ಲಿನ ಜನರು ಬಹಳ ಧಾರ್ಮಿಕರು ಆದರೆ, ಅಷ್ಟೇ ಕಟ್ಟಾ ಕಮ್ಮ್ಯುನಿಷ್ಟರು. ಕೇರಳದಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿರುವ ಅಂದರೆ ಅಧಿಕಾರವನ್ನು ಕಾಣುವ ರಾಜಕೀಯ ಪಕ್ಷಗಳು ಎರಡು. ಒಂದು ಕಮ್ಯುನಿಸ್ಟ್ ಮತ್ತೊಂದು ಕಾಂಗ್ರೆಸ್ ಅಥವಾ ಎಲ್ಡಿಎಫ್ ಮತ್ತು ಯುಡಿಎಫ್. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಂದರೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು, ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ ಎಂದರೆ ಕಮ್ಯುನಿಸ್ಟ್ ಮತ್ತು ಮಿತ್ರ ಪಕ್ಷಗಳು. ಕಾಂಗ್ರೆಸ್ನೊಂದಿಗೆ ಬಲವಾಗಿ ನಿಂತಿರುವುದು ಮುಸ್ಲಿಂ ಲೀಗ್, ಒಂದು ರೀತಿಯಲ್ಲಿ ಹೇಳಬಹುದಾದರೆ ಮುಸ್ಲಿಂ ಲೀಗ್ನ ಹೊರತಾಗಿ ಕಾಂಗ್ರೆಸ್ಗೆ ಕೇರಳದಲ್ಲಿ ಅಸ್ತಿತ್ವ ಬಹು ಕಷ್ಟ. 1962 ರ ಭಾರತ ಚೀನಾ ಯುದ್ಧದ ಬಳಿಕ ವಿಭಜನೆಗೊಂಡ ಕಮ್ಯುನಿಸ್ಟ್ ಪಕ್ಷಗಳದ್ದು ಇನ್ನೊಂದು ಗುಂಪು.
ಒಂದು ರೀತಿಯಲ್ಲಿ ನೋಡಿದರೆ ಕೇರಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಕೇರಳದಲ್ಲಿ ಸಂಘದ ಶಾಖೆಗೆ ಹೋಗುವವರನ್ನು ಗುರಿಯಾಗಿಸಿ ಹಲ್ಲೆ, ಕೊಲೆ, ಕೊಲೆ ಯತ್ನಗಳು ನಡೆಯುವುದು ಸಾಮಾನ್ಯ. ತನಗಿರುವ ಎರಡೇ ರಾಜ್ಯಗಳಲ್ಲಿ ಒಂದರಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಈ ಕೃತ್ಯಗಳನ್ನು ನಡೆಸುವುದು ಕಮ್ಯುನಿಸ್ಟರೇ ಎಂಬುವುದು ಮುಚ್ಚಿಡಲಾಗದ ಸತ್ಯ. ಕ್ರೌರ್ಯ ನಡೆಸುವುದರಲ್ಲಿ ಮುಸ್ಲಿಂ ಲೀಗ್ ಕೂಡಾ ಹಿಂದುಳಿದಿಲ್ಲ. ಈ ಹಿಂಸಾತ್ಮಾಕ ರಾಜಕೀಯದ ರಾಜಧಾನಿ ಕಣ್ಣೂರು. ಮೂಲತಃ ಕಮ್ಯುನಿಸ್ಟ್ ಕಾರ್ಯಕರ್ತರಾಗಿದ್ದ ಸದಾನಂದ ಮಾಸ್ಟರ್ ಅವರು ಸಂಘ ಪರಿವಾರಕ್ಕೆ ಸೇರಿಕೊಂಡರು ಎಂಬ ಒಂದೇ ಕಾರಣಕ್ಕೆ ಸಿಪಿಐ ಕಾರ್ಯಕರ್ತರು ಅವರ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಿದರು, ಆದ್ಯಾಗೂ ಅವರು ಅವರ ಸಿದ್ಧಾಂತಗಳಲ್ಲಿ ಇಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಈ ಘಟನೆ ನಡೆದಾಗ ಅವರಿಗಿನ್ನೂ 30 ವರ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಂದ ಅವರು ಸ್ಪರ್ಧಿಸಿದ್ದು ಕುಖ್ಯಾತ ಕೂತುಪರಂಬ ಕ್ಷೇತ್ರದಿಂದ.
ಕೇರಳಿಗರು ಪಕ್ಕಾ ಕಮ್ಯುನಿಸ್ಟರು, ಅಲ್ಲಿನ ಕಾಂಗ್ರೆಸ್ಗೆ ಪ್ರಧಾನ ಮತ ಬ್ಯಾಂಕ್ ಅಲ್ಲಿನ ಕ್ರಿಶ್ಚಿಯನ್ನರು. ಅತ್ಯಂತ ಮತೀಯರಾದ ಕೇರಳದ ಕ್ರಿಶ್ಚಿಯನ್ ಸಮುದಾಯವು ಬಹು ವರ್ಷಗಳಿಂದ ಬಿಜೆಪಿಯನ್ನು ದೂರವಿರಿಸಿತ್ತು. ವಿದೇಶಗಳಲ್ಲಿ ಸಿಲುಕಿದ್ದ ಕೆರಳಿಗರನ್ನು ಹರಸಾಹಸ ಮಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶಕ್ಕೆ ಕರೆತಂದರೂ ಅಲ್ಲಿನ ಪ್ರಧಾನ ಪಕ್ಷಗಳೆರಡೂ ಅಲ್ಲಿನ ಜನರ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಶಬರಿಮಲೆಗೆ ಮಹಿಳೆಯರನ್ನು ಕರೆದುಕೊಂಡು ಹೋದರು ಕೂಡಾ ಅಲ್ಲಿನ ಜನ ಬಿಜೆಪಿಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಲಿಲ್ಲ. ಕಾರಣ ಅಲ್ಲಿನ ಜನರ ಮನಸ್ಸಿನಲ್ಲಿ ಅಷ್ಟೊಂದು ಆಳವಾಗಿ ಬಿಜೆಪಿಯ ವಿರುದ್ಧ ವಿಷ ಬೀಜಗಳನ್ನು ಬಿತ್ತಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಬಾರಿ ಕೆ. ಸುರೇಂದ್ರನ್ ಎಂಬ ಬಿಜೆಪಿ ಅಭ್ಯರ್ಥಿಯು ಕೆಲವೇ ವೋಟುಗಳಿಂದ ಪರಾಭವಗೊಂಡಿದ್ದರು. ಚುನಾವಣಾ ಮತದಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಅವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಇವೆಲ್ಲದರ ಮಧ್ಯೆ ಕೇರಳದ ಬಿಜೆಪಿಯ ರಾಜಕೀಯ ಭೀಷ್ಮ ಎಂದೇ ಪ್ರಸಿದ್ಧರಾದ ಓ. ರಾಜಗೋಪಾಲ್ ಅವರು ಕೇರಳದ ಸಂಸತ್ತನ್ನು ಪ್ರವೇಶಿಸಿದ ಮೊದಲ ಬಿಜೆಪಿ ನಾಯಕರಾಗಿ ಇತಿಹಾಸ ನಿರ್ಮಿಸಿದರು.
ಅನೇಕ ಅಡೆತಡೆಗಳು, ಕೊಲೆ ಯತ್ನಗಳು ಇವೆಲ್ಲದರ ನಡುವೆಯೂ ಕೇರಳದ ಬಿಜೆಪಿ ನಾಯಕರ ಜನಪರ ಹೋರಾಟಗಳು ನಿಲ್ಲಲೇ ಇಲ್ಲ, ಕೇರಳದ ಬಿಜೆಪಿ ನಾಯಕರು ಕಾರ್ಯಕರ್ತರೊಂದಿಗೆ ಕಾರ್ಯಕರ್ತರಾಗಿ ಬೆರೆಯುವ ಸರಳ ವ್ಯಕ್ತಿಗಳಾದ್ದರಿಂದ ನಿಧಾನವಾಗಿ ಅನೇಕ ಯುವಕ ಯುವತಿಯರು ಬಿಜೆಪಿಯತ್ತ ಮುಖ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಮುನ್ನುಡಿಯನ್ನು ಬರೆಯುತ್ತಿರುವುದು ಎಬಿವಿಪಿ ಎಂಬ ಅಪ್ಪಟ ದೇಶಭಕ್ತ ಸಂಘಟನೆ. ಕೇರಳದ ಕ್ರೂರ ರಾಜಕೀಯ ಯುವ ಜೀವಗಳನ್ನೂ ಬಿಡಲಿಲ್ಲ, ಎಂಟು ವರ್ಷಗಳ ಮುನ್ನ 2012 ರಲ್ಲಿ 19 ವರ್ಷದ ವಿಶಾಲ್ ಕುಮಾರ್ ಅವರನ್ನು ಕಾಲೇಜಿನಲ್ಲೇ ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆಯ ಸದಸ್ಯರು ಕ್ರೂರವಾಗಿ ದಾಳಿ ನಡೆಸಿ ಹತ್ಯೆಗೈದಿದ್ದರು.
ಒಂದು ಸಂದರ್ಭದಲ್ಲಿ ಕೇರಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸ್ಪರ್ಧಿಗಳೇ ಸಿಗುತ್ತಿರಲಿಲ್ಲ, ಯಾಕೆಂದರೆ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿ ಹಾಗೂ ಆ ವ್ಯಕ್ತಿಯ ಕುಟುಂಬಕ್ಕೆ ಹಾನಿಯುಂಟಾಗುವುದು ಖಂಡಿತಾ ಎಂಬ ಮಾತಿತ್ತು. ಇದೀಗ ಕೇರಳವು ಬದಲಾಗುತ್ತಿದೆ. ಈ ಬಾರಿಯ ಸ್ಥಳೀಯ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿ ಬಳಷ್ಟು ಜನರೂ ಯುವಕ ಯುವತಿಯರು. ಕಾಸರಗೋಡು ಜಿಲ್ಲೆಯಲ್ಲಿ 21 ವರ್ಷದ ಯುವಕನೊಬ್ಬನನ್ನೂ ಅಭ್ಯರ್ಥಿಯಾಗಿ ಆಯ್ಕೆಗೊಳಿಸಲಾಗಿದೆ. ಮಹಿಳಾ ಅಭ್ಯರ್ಥಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಕೇರಳ ಬಿಜೆಪಿಯ ಅಧ್ಯಕ್ಷರಾದ ಕೆ. ಸುರೇಂದ್ರನ್ ದಣಿವರಿಯದ ನಾಯಕರಾಗಿದ್ದಾರೆ. ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು ಹೋರಾಡುವ ಅವರಿಗೆ ಅಭಿಮಾನಿಗಳೂ ಬೆಂಬಲಿಗರೂ ಸಾಕಷ್ಟಿದ್ದಾರೆ. ಕೇರಳದ ಅನಾಗರೀಕ ಭ್ರಷ್ಟಾಚಾರೀ ಸರಕಾರದ ಮುಖವಾದವು ಪ್ರತೀ ದಿನ ಒಂದೊಂದಾಗಿ ಕಳಚುತ್ತಿದೆ, ಹಲವಾರು ಭಯೋತ್ಪಾದಕರ ನಂಟನ್ನು ಹೊಂದಿದ್ದರೆ, ಇನ್ನು ಕೆಲವರು ಭ್ರಷ್ಟಾಚಾರವನ್ನೇ ಹಾಸು ಹೊದ್ದಿದ್ದಾರೆ, ಸ್ವತಃ ಮುಖ್ಯಮಂತ್ರಿ ಹಾಗೂ ಗೃಹಸಚಿವರೇ ಆರೋಪಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕೊಲ್ಲಿ ರಾಷ್ಟ್ರಗಳಿಂದ ಹಿಂತಿರುಗುತ್ತಿರುವ ವಿದ್ಯಾವಂತರಿಗೆ ಇಲ್ಲಿ ಸೂಕ್ತ ಉದ್ಯೋಗಗಳು ದೊರಕುತ್ತಿಲ್ಲ, ಆರ್ಥಿಕತೆ ಹಳ್ಳ ಹಿಡಿಯುತ್ತಿದೆ.
ಅನಾವಶ್ಯಕವಾಗಿ ಹರಡುತ್ತಿರುವ ಕೋಮು ದ್ವೇಷಗಳ ಬಗ್ಗೆ ಹಾಗೂ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಒಡೆದು ಆಳುವ ನೀತಿಗಳ ಬಗ್ಗೆ ಕೇರಳದ ಯುವಕ ಯುವತಿಯರಿಗೆ ಅಸಹ್ಯವುಂಟಾಗುತ್ತಿದೆ. ಅವರು ರಕ್ತ ಸಿಕ್ತ ರಾಜಕೀಯದ ಬದಲಾಗಿ ಭರವಸೆ ಹಾಗೂ ಬೆಳವಣಿಗೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ವತೋಮುಖ ಅಭಿವೃದ್ಧಿಯು ಕೇರಳದ ಯುವ ಮನಸುಗಳ ಕನಸಾಗಿದೆ. ಅದಕ್ಕೆಂದೇ ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿ, ಬಹಳಷ್ಟು ಅಲ್ಪ ಸಂಖ್ಯಾತ ಸ್ಪರ್ಧಿಗಳ ಹೆಸರು ಪಟ್ಟಿಗಳಲ್ಲಿ ಪ್ರಮುಖವಾಗಿ ಕಾಣಿಸುತ್ತಿದೆ. ಮುಸಲ್ಮಾನ ಹೆಣ್ಣು ಮಕ್ಕಳೂ ಕೂಡ ಕಮಲವನ್ನು ಹಿಡಿದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಸ್ಲಿಂ ಲೀಗ್, ಕಮ್ಯುನಿಸ್ಟ್ ಪಕ್ಷಗಳ ಭದ್ರ ಕೋಟೆಗಳಲ್ಲೂ ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅನೇಕ ಕ್ರೈಸ್ತ ಕುಟುಂಬಗಳು ಕೂಡಾ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಬದಲಾವಣೆಯತ್ತ ಮುಖ ಮಾಡುತ್ತಿದ್ದಾರೆ.
ಕಾಸರಗೋಡಿನ ಪ್ರಸಿದ್ಧ ರಾಜಕಾರಣಿಯೊಬ್ಬರು, ಕಾಂಗ್ರೆಸ್ ಪಕ್ಷದ ಪ್ರಮುಖರಾಗಿದ್ದು, ತಮ್ಮ ಪಕ್ಷವು ಮುಸ್ಲಿಂ ಲೀಗ್ನತ್ತ ಬಹುವಾಗಿ ವಾಲುತ್ತಿರುವುದನ್ನು ಮನಗಂಡು ಇದೀಗ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಕಮಲದ ಚಿಹ್ನೆಯ ಪರವಾಗಿ ಸ್ಪರ್ಧಿಸುತ್ತಿರುವುದು ಕಾಸರಗೋಡಿನ ಕಾರ್ಯಕರ್ತರ ಉತ್ಸಾಹವನ್ನು ದುಪ್ಪಟ್ಟಾಗಿಸಿದೆ.
ಮಲಪ್ಪುರಂ ಎಂಬ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಮುಸಲ್ಮಾನ ಹೆಣ್ಣು ಮಗಳೊಬ್ಬಳು “ಖಂಡಿತವಾಗಿಯೂ ಈ ಬಾರಿ ಮಲಪ್ಪುರಂನಲ್ಲಿ ತಾವರೆ ಅರಳಲಿದೆ “ಎಂದು ಆತ್ಮವಿಶ್ವಾಸದಿಂದ ಹೇಳುತ್ತಿರುವ ದೂರದರ್ಶನದ ಸಂದರ್ಶನವೊಂದರ ಭಾಗವು ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಸ್ವತಃ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ಶ್ರೀಮತಿ ಸುಲಫತ್ ಎಂಬ ಮಲಪ್ಪುರಂನ ಒಬ್ಬ ಬಿಜೆಪಿ ಅಭ್ಯರ್ಥಿ ತ್ರಿವಳಿ ತಲಾಕ್ ನಿಷೇಧ ಮತ್ತು ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸುವಂತಹ ಉತ್ತಮ ಕಾರ್ಯಗಳನ್ನು ಮೋದಿಜಿಯಲ್ಲದೆ ಮತ್ತ್ಯಾರು ಕಾರ್ಯಗತಗೊಳಿಸಬಹುದು, ಮೋದಿಜಿಯವರನ್ನು ವರ್ಚಸ್ಸಿನಲ್ಲಿ ಮಾತ್ರವಲ್ಲದೆ ದಕ್ಷತೆ ಮತ್ತು ದೃಢತೆಯಲ್ಲೂ ಸರಿಸಾಟಿಯಾಗಬಲ್ಲ ನಾಯಕ ಪ್ರಸ್ತುತ ರಾಜಕೀಯದಲ್ಲಿ ಮತ್ಯಾರೂ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇರಳದ ಯುವ ಮನಸುಗಳೂ ಬದಲಾವಣೆ ಬಯಸಿದೆ. ಕೇರಳದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಮಲವು ಅರಳುವುದಂತೂ ಸ್ಪಷ್ಟವಾಗಿದೆ. ಕೇರಳದಲ್ಲಿನ ದಾನವ ರಾಜಕೀಯ ಕೊನೆಗೊಂಡು ಉತ್ತಮ ರಾಜಕೀಯ ಬೆಳೆದು ಬರಲು ಇದೊಂದು ಸುಸಂದರ್ಭವಾಗಿದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.