ಬೆಳ್ತಂಗಡಿ : ವಿದ್ಯೆ ನೀಡುವ ಶಿಕ್ಷಣಕ್ಕಿಂತ ವ್ಯಕ್ತಿತ್ವ ವಿಕಸನ ನೀಡುವ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಸ್ನಾತಕೋತ್ತರ ಅಧ್ಯಯನದಲ್ಲಿ ಈ ರೀತಿಯ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದಜೀ ನುಡಿದರು.
ಅವರು ಸೋಮವಾರ ಉಜಿರೆ ಎಸ್ಡಿಎಂ ನ್ಯಾಚುರೋಪತಿ ಕಾಲೇಜಿನ ಸಭಾಂಗಣದಲ್ಲಿ ಉಜಿರೆ ಎಸ್ಡಿಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸದ್ಗುಣ, ಸದಾಚಾರ, ಸದವಿಚಾರಗಳನ್ನು ಮೂಡಿಸುವುದೇ ನಿಜವಾದ ಶಿಕ್ಷಣ. ಮೌಲ್ಯಯುತ ಶಿಕ್ಷಣದಿಂದ ಆದರ್ಶ ವ್ಯಕ್ತಿ ರೂಪುಗೊಳ್ಳುತ್ತದೆ. ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ವಿವೇಕದಿಂದ ವಿಂಗಡಿಸುವುದೇ ನಿಜವಾದ ಬುದ್ದಿವಂತಿಕೆ. ವಿವೇಕ ಮನುಷ್ಯನ ಆತ್ಮಬಲ, ಮಾನವೀಯತೆ, ಇಚ್ಚಾಶಕ್ತಿಯನ್ನು ಉದ್ದೀಪನಗೊಳಿಸಿ ಸದೃಢಗೊಳಿಸುತ್ತದೆ. ಸಮರ್ಪಣಾ ಭಾವದ ಭಗವತ್ ಪ್ರೇಮದಿಂದ ಆನಂದಮಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಗತಿ ಶಿಕ್ಷಣ ಪದವಿ ನೀಡಿದರೆ ಸಮೂಹ ಶಿಕ್ಷಣ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಬದುಕಿನಲ್ಲಿ ಅಪಾರ ಅವಕಾಶಗಳು ನಮಗಾಗಿ ಕಾದಿರುತ್ತದೆ. ಅದನ್ನು ಗುರುತಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ನಮ್ಮ ದೃಷ್ಟಿಗೆ ಮಿತಿ ಇದೆ. ಆದರೆ ನೋಡುವ ದೃಷ್ಟಿಕೋನಕ್ಕೆ ಯಾವುದೇ ಮಿತಿ ಇಲ್ಲ. ಎಷ್ಟೋ ಮಂದಿಗೆ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಇರುತ್ತದೆ. ಹಲವಾರು ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ಭವಿಷ್ಯದ ದೂರದರ್ಶಿತ್ವದಿಂದ ಎಲ್ಲಾ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ| ಎಂ. ವೈ. ಮಂಜುಳ ಸ್ವಾಗತಿಸಿದರು. ಸಿಫಾಲಿ ಎಸ್. ಕೆ. ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಸುವೀರ್ ಜೈನ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.