ದತ್ತೋಪಂಥ ಠೇಂಗಡಿ ಅವರು ಆರ್ಎಸ್ಎಸ್ ನಿಂದ ಬಂದ 20 ನೇ ಶತಮಾನದ ಓರ್ವ ಪ್ರಸಿದ್ಧ ಚಿಂತಕರು. ದೇಶದ ಮೂಲ ಹಿಂದೂ ಧರ್ಮದ ಚಿಂತನೆಗಳ ಆಳವನ್ನು ಉಳಿಸಿಕೊಂಡು, ಅದರ ಮೂಲ ಸೂತ್ರಕ್ಕೆ ಯಾವುದೇ ಚ್ಯುತಿಯಾಗದಂತೆ ನಮ್ಮ ದೇಶದ ಆತ್ಮವನ್ನು ಉಳಿಸಬೇಕಾಗಿದೆ. ಜೊತೆಗೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಜಗತ್ತಿನ ಹೊಸ ಜ್ಞಾನವನ್ನು ಮಿಳಿತಗೊಳಿಸುವತ್ತ ಚಿಂತನೆಗಳನ್ನು ನಡೆಸಬೇಕಾಗಿದೆ. ಹೀಗಾದಲ್ಲಿ ಒಂದು ರಾಷ್ಟ್ರದ ಪುನರ್ನಿರ್ಮಾಣ ಸಾಧ್ಯ ಎಂಬ ಕಲ್ಪನೆಯನ್ನು ಜನಸಾಮಾನ್ಯರ, ಸಾರ್ವಜನಿಕ ವಲಯದಲ್ಲಿ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ.
‘ರಾಷ್ಟ್ರದ ಪುನರ್ನಿರ್ಮಾಣವಾಗಬೇಕೇ ಹೊರತು, ಹೊಸ ರಾಷ್ಟ್ರದ ನಿರ್ಮಾಣವಲ್ಲ’ ಎಂಬುದನ್ನು ಜೀ ಅವರು ಸ್ಪಷ್ಟವಾಗಿ ತಮ್ಮ ರಾಷ್ಟ್ರೀಯ ವಿಚಾರಧಾರೆಯ ಕಲ್ಪನೆಗಳ ಮೂಲಕ ತಿಳಿಸಿದ್ದಾರೆ.
ರಾಷ್ಟ್ರದ ಪರಿಕಲ್ಪನೆಗೆ ಸಂಬಂಧಿಸಿದಂತೆ ಶ್ರೀ ಗುರೂಜಿ (ಗೋಲ್ವಾಲ್ಕರ್) ಮತ್ತು ದತ್ತೋಪಂಥ ಜೀ ಅವರು ಬಹಳ ಸುಂದರವಾದ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಒಂದು ರಾಷ್ಟ್ರ ಎಂದಾಗಬೇಕಾದರೆ, ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ವಾಸಿಸುವ, ಒಂದೇ ಸಂಪ್ರದಾಯ, ಅದೇ ದೇಶದ ಮಕ್ಕಳು ಎಂಬ ಭಾವನೆಯನ್ನಿಟ್ಟುಕೊಂಡು ಬದುಕುವ, ಹಿಂದಿನ ಸಂತೋಷ, ದುಃಖಗಳು, ದ್ವೇಷ, ಸ್ನೇಹ ಮೊದಲಾದ ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿರುವ ಜನರನ್ನೊಳಗೊಂಡ ಪರಿಕಲ್ಪನೆಯಾಗಿದೆ ಎಂದು ಈ ಇಬ್ಬರೂ ಮಹಾತ್ಮರು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯತೆಯ ಗುರಿಯ ಬಗ್ಗೆ ದತ್ತೋಪಂಥ ಜೀ ಅವರ ಅಭಿಪ್ರಾಯದಲ್ಲಿ ಹೇಳುವುದಾದರೆ, ಹಿಂದೂ ರಾಷ್ಟ್ರದ ವೈಭವವೇ ಹಿಂದೂರಾಷ್ಟ್ರದ ಪರಮೋಚ್ಚ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಈ ದೃಷ್ಟಿಯಿಂದ ಗುರಿಯತ್ತ ಸಾಗುವಾಗ ಅವಿಭಜಿತ ಭಾರತ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಜನರಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ, ಒಂದು ವ್ಯವಸ್ಥೆ ಎಂಬ ನಂಬಿಕೆಯೇ ರಾಷ್ಟ್ರೀಯತೆಯ ಪರಮ ಗುರಿ ಎಂಬುದಾಗಿದೆ.
ಸದ್ಯದ ಸ್ಥಿತಿಯಲ್ಲಿ ಭಾರತವೂ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ಹೊಂದುತ್ತಿರುವುದು ನಾವು ಗಮನಿಸಬಹುದಾಗಿದೆ. ಆದರೆ ದತ್ತೋಪಂಥ ಜಿ ಅವರು ಪಾಶ್ಚಾತ್ಯ ವೈಫಲ್ಯದ ಬಗ್ಗೆ ಗಮನ ಸೆಳೆಯುವ, ಆ ಮೂಲಕ ಜಾಗೃತ ಭಾರತೀಯ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಮ್ಮ ಯೋಚನಾ ಲಹರಿಯನ್ನು ಹರಿಯ ಬಿಟ್ಟಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ವೈಫಲ್ಯದ ಬಗೆಗೂ ಗಮನ ಹರಿಸಿರುವ ಅವರು, ಅಂತಹ ಗುರಿಗಳು ಪೂರ್ವದಲ್ಲಿಯೂ ಸಫಲವಾಗುವುದು ಅಸಾಧ್ಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದವರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಶಿಸ್ತು ಎಂಬುದು ಅರಾಜಕತೆಯಾಗುತ್ತಿದೆ. ಇದಕ್ಕೆ ಕಾರಣ ಪಾಶ್ಚಾತ್ಯರು ಏಕೀಕರಣದ ಸಮೀಕರಣವನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಮಹನೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪಶ್ಚಿಮದಲ್ಲಿ ಎಲ್ಲವೂ ಇನ್ನೂ ಪ್ರಯೋಗಶೀಲ ಮನಸ್ಥಿತಿಯಲ್ಲೇ ಇವೆ ಎಂದು ಜೀ ಅವರು ಪಾಶ್ಚಾತ್ಯ ವೈಫಲ್ಯದ ಬಗ್ಗೆ ತಿಳಿಸಿದ್ದಾರೆ.
ಇಂಟಿಗ್ರೇಟೆಡ್ ಹ್ಯುಮನ್ ಫಿಲಾಸಫಿ: ಭಾರತದ ಆಯ್ಕೆ
ಸನಾತನ ಧರ್ಮದ ಮೂಲಭೂತ ತತ್ವಗಳು ಮತ್ತು ಸಮಯ ಸಂದರ್ಭಕ್ಕೆ ಅನುಸಾರವಾಗಿ ಏಕಾತ್ಮ ಮಾನವ ಕಲ್ಪನೆ ನಮ್ಮ ಮೂಲ ತತ್ವವಾಗಿರಬೇಕು. ಕ್ಷೇತ್ರ ಯಾವುದೇ ಇರಲಿ, ಅಲ್ಲಿ ನಮ್ಮ ನೀತಿಗಳು ಸಮಾಜವನ್ನು ಮುನ್ನಡೆಸುವ ಆಶಯವನ್ನು ಹೊಂದಿರಬೇಕು. ನಿಷ್ಠೆ, ಸಾಕ್ಷಾತ್ಕಾರ, ಸಾಮಾಜಿಕ ಜೀವನದಲ್ಲಿ ಏಕತೆ, ಸಹಕಾರ ಮನೋಭಾವ, ಸಾಮರಸ್ಯ ಮೊದಲಾದ ಸಮಾಜಸ್ನೇಹಿ ಗುಣಗಳನ್ನು ಬೆಳೆಸಲು ಇಂಟಿಗ್ರೇಟೆಡ್ ಹ್ಯುಮನ್ ಫಿಲಾಸಫಿ ಸಹಾಯ ಮಾಡುತ್ತದೆ. ಇದು ಅಭಿವೃದ್ಧಿ, ಸ್ಪೂರ್ತಿದಾಯಕ ಜೀವನ ನಡೆಸುವುದಕ್ಕೂ ಪೂರಕ ವಾತಾವರಣ, ಅವಕಾಶ ಕಲ್ಪಿಸುತ್ತದೆ ಎಂದು ಜೀ ತಿಳಿಸಿದ್ದಾರೆ.
ನಮ್ಮ ಭವಿಷ್ಯದ ಕನಸು, ಅಭಿವೃದ್ಧಿಯ ಆಶಯ, ಮಾದರಿ ಭೂತಕಾಲವನ್ನು ಆಧರಿಸಿದಂತಿರಬೇಕು. ಪ್ರಸ್ತುತ ಸಮಾಜದ ಅಗತ್ಯತೆಗಳ ಅರಿವು, ಭವಿಷ್ಯದ ಆಕಾಂಕ್ಷೆಗಳ ಮೇಲೆ ಭರವಸೆ, ಒಂದು ಸ್ಪಷ್ಟ ನೋಟ ನಮ್ಮಲ್ಲಿರಬೇಕು. ನಿರಂತರ ಬದಲಾವಣೆಗಳನ್ನು ಒಪ್ಪಿಕೊಂಡು ಬದುಕು ರೂಪಿಸಿಕೊಳ್ಳುವ, ಆರ್ಥಿಕ ವ್ಯವಸ್ಥೆಗಳ ಬದಲಾವಣೆಗಳನ್ನು ಸರಿದೂಗಿಸುವ ಭಾರತೀಯ ಹಿಂದೂ ಸಂಸ್ಕೃತಿಯ ತಿರುಳನ್ನು ಅರಿತುಕೊಂಡಲ್ಲಿ ಇದು ಸಾಧ್ಯವಾಗುತ್ತದೆ. ಈ ತಿರುಳಿನ ಅರಿವು ನಮ್ಮೊಳಗಿರಬೇಕು. ಅದರ ಹೊರತಾಗಿ ನಮ್ಮ ಸಮಾಜಕ್ಕೆ ಒಗ್ಗಿಕೊಳ್ಳದ ಪರ್ಯಾಯಗಳನ್ನು ಅಳವಡಿಸುವ ಪ್ರಯತ್ನಳಿಂದ ಅಭಿವೃದ್ಧಿ ಅಸಾಧ್ಯ. ಇದು ರಾಷ್ಟ್ರದ ಪುನರ್ನಿರ್ಮಾಣ ಪ್ರಕ್ರಿಯೆಗೂ ಪೂರಕವಲ್ಲ ಎಂದು ದತ್ತೋಪಂಥ ಜೀ ಅವರ ಭಾವನೆ.
ಅಭಿವೃದ್ಧಿ ವಿಚಾರಗಳನ್ನು ಸಮಾಜಕ್ಕೆ ಬಿತ್ತನೆ ಮಾಡುವ ಸಂದರ್ಭದಲ್ಲಿ ಅವುಗಳು ಮೌಲ್ಯಧಾರಿತವಾಗಿರುವುದು ಅತೀ ಮುಖ್ಯ. ಹಾಗಿದ್ದರೆ ಮಾತ್ರ ಪ್ರೇರಣೆ ದೊರೆಯುವುದು ಸಾಧ್ಯ. ಗುರಿಗಳ ಜೊತೆಗೆ ಸಾಗಿದಾಗ ಮಾತ್ರ ಸಶಕ್ತ ರಾಷ್ಟ್ರ ಪುನರ್ನಿರ್ಮಾಣ ಸಾಧ್ಯ ಎಂದು ಅವರು ಹೇಳಿದ್ದಾರೆ. ಜೊತೆಗೆ ಸಾಮಾಜಿಕ ಸ್ವಾಯತ್ತತೆ ಸಹ ರಾಷ್ಟ್ರ ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಮುಖ್ಯವಾಗುತ್ತದೆ. ನೀತಿ ಸಂಹಿತೆಗೆ ಅನುಗುಣವಾದಂತೆ, ಕಾನೂನು, ನಿಬಂಧನೆಗಳಿಗೆ ಅನ್ವಯವಾಗುವಂತೆ ನಮ್ಮ ರಾಷ್ಟ್ರ ಕಟ್ಟುವ ಪ್ರಕ್ರಿಯೆ ಮತ್ತಷ್ಟು ಬಲಿಷ್ಟವಾಗುತ್ತದೆ ಎಂದು ಜೀ ಹೇಳಿದ್ದಾರೆ.
ದತ್ತೋಪಂಥ ಜಿ ಅವರು ರಾಷ್ಟ್ರದ ಪುನರ್ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಚಿಂತನೆಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಅವರು ಸಮತೋಲನ ಮತ್ತು ಸಾಮರಸ್ಯದ ಕಲ್ಪನೆಗಳಲ್ಲಿಯೂ ತಮ್ಮದೇ ಆದ ಸ್ಪಷ್ಟ ನಿಲುವನ್ನು ಹೊಂದಿದ್ದರು. ದೇಶದ ಅತೀ ದೊಡ್ಡ ರೈತ ಸಂಘ ಭಾರತೀಯ ಕಿಸಾನ್ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘದ ನಾಯಕರಾಗಿದ್ದವರು ಜೀ. ಹೀಗಿದ್ದರೂ ಯಾವುದೇ ರೀತಿಯ ಪಕ್ಷಪಾತದ ಚಿಂತನೆ ಹೊಂದಿರಲಿಲ್ಲ. ರಾಷ್ಟ್ರೀಯ ಹಿತಾಸಕ್ತಿ, ಕಾರ್ಮಿಕ ಹಿತಾಸಕ್ತಿ, ಉದ್ಯಮ ಸ್ನೇಹಿ ಹಿತಾಸಕ್ತಿ ಗಳೆಲ್ಲವನ್ನೂ ಜೀ ಹೊಂದಿದ್ದರು. ಗ್ರಾಮವನ್ನು ಕುಟುಂಬ ಎಂದು ಪರಿಗಣಿಸಿ ಕೆಲಸ ಮಾಡಬೇಕು ಎಂಬ ಆದರ್ಶವನ್ನು ಸಹ ಅವರು ಹಾಕಿಕೊಟ್ಟವರು. ಉತ್ಪಾದನೆ, ವಿತರಣೆ, ವೇತನಕ್ಕಾಗಿ ರಾಷ್ಟ್ರೀಯ ಸಮಗ್ರ ಆರ್ಥಿಕ ನೀತಿಯ ಕೆಳಗೆ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಸ್ವದೇಶೀ, ಸ್ವಾವಲಂಬನೆ, ವಿಕೇಂದ್ರೀಕರಣ, ಸುಸ್ಥಿರ ಬಳಕೆ, ಮಾಧ್ಯಮಗಳ ಬಳಕೆ, ಸೂಕ್ತ ತಂತ್ರಜ್ಞಾನ, ಸ್ವ ಉದ್ಯೋಗ, ದೇಶೀಯ ಉದ್ಯಮ, ಗ್ರಾಹಕರ ಆಸಕ್ತಿ ಸೇರಿದಂತೆ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ವಿರೋಧಿಸುವಂತಹ ವಿಚಾರಗಳಿಗೂ ಜೀ ಅವರು ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಜೊತೆಗೆ ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತ ಮನಸ್ಥಿತಿ, ಪ್ರಬುದ್ಧ ಚಿಂತನೆಗಳನ್ನು ಮಾಡುವ ಶಕ್ತಿ ತುಂಬುವ ಕೆಲಸವಾಗಬೇಕು ಎಂಬುದನ್ನು ಜೀ ಮನಗಂಡರು. ಈ ಹಿನ್ನೆಲೆಯಲ್ಲಿಯೂ ಅವರು ಕಾರ್ಯಪ್ರವೃತ್ತರಾದರು. ಸಂಘ, ಸಂಸ್ಥೆಗಳು, ಕಾರ್ಮಿಕರಲ್ಲಿಯೂ ಈ ಜಾಗೃತ ಮನಸ್ಥಿತಿ ರೂಪಿಸಲು ಮುಂದಾದರು. ಅವರು ತುಂಬಿದ ರಾಷ್ಟ್ರೀಯ ಚಿಂತನೆಗಳು, ಪ್ರಬುದ್ಧತೆಯನ್ನು ಸಂಸ್ಥೆಗಳು, ಕಾರ್ಯಕರ್ತರಲ್ಲಿ ನಾವು ಇಂದಿಗೂ ಕಾಣಬಹುದಾಗಿದೆ..
ರಾಷ್ಟ್ರ ಪುನರ್ನಿರ್ಮಾಣದ ಸೂತ್ರಗಳು
ರಾಷ್ಟ್ರ ಪುನರ್ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ದತ್ತೋಪಂಥ ಜೀ ಅವರು ಪ್ರತಿಪಾದಿಸಿದ ಪ್ರಮುಖ ಅಂಶಗಳನ್ನು ನಾವು ಗಮನಿಸಬಹುದು.
* ಭಾರತಕ್ಕೆ ಪ್ರಾಚೀನ ಐತಿಹ್ಯವಿದೆ. ಭಾರತವನ್ನು ಪುನರ್ನಿರ್ಮಾಣ ಮಾಡಬೇಕೇ ಹೊರತು, ಹೊಸ ರಾಷ್ಟ್ರ ನಿರ್ಮಾಣ ಮಾಡಬೇಕಿಲ್ಲ.
* ನಮ್ಮ ಅಂತಿಮ ಗುರಿ ಹಿಂದೂ ರಾಷ್ಟ್ರದ ಪರಮ ವೈಭವ. ಈ ವಿಚಾರದಲ್ಲಿ ನಾವೆಲ್ಲರೂ ಒಂದೇ, ನಮ್ಮೆಲ್ಲರದೂ ಒಂದೇ ಸಂಸ್ಕೃತಿ, ಒಂದು ದೇಶ ಎಂಬ ಏಕತೆಯ ಕಲ್ಪನೆ ಹೊಂದಬೇಕು. ಈ ನಂಬಿಕೆ ನಮ್ಮಲ್ಲಿರಬೇಕು.
* ಪಾಶ್ಚಾತ್ಯ ಅನುಕರಣೆ ಎಂದರೆ ನಮ್ಮತನವನ್ನು ಸಾಯಿಸುವುದು ಎಂದರ್ಥ. ನಮ್ಮತನವನ್ನು ಉಳಿಸಿಕೊಳ್ಳುವ ಮೂಲಕ, ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವ ಮೂಲಕ ಜಗತ್ತಿನ ಹೊಸ ಜ್ಞಾನಗಳಿಗೆ ತೆರೆದುಕೊಳ್ಳೋಣ. ಸಂದರ್ಭಾನುಸಾರ ಅದನ್ನು ಅಳವಡಿಸುವ ಬಗೆಯನ್ನು ಸರಿಯಾಗಿ ಅರ್ಥೈಸಿಕೊಂಡು ರಾಷ್ಟ್ರ ಪುನರ್ನಿರ್ಮಾಣ ಮಾಡೋಣ. ಆಧುನೀಕರಣ ಎಂದರೆ ಪಾಶ್ಚಾತ್ಯ, ಪಾಶ್ಚಿಮಾತ್ಯೀಕರಣವಲ್ಲ ಎಂಬುದನ್ನು ಅರ್ಥೈಸಿಕೊಳ್ಳೋಣ.
* ಭಾರತದ ಧರ್ಮವಾದ ಸನಾತನ ಧರ್ಮದ ಮೂಲಭೂತ ತತ್ವಗಳನ್ನು ಉಳಿಸಿಕೊಂಡು, ಇಂಟಿಗ್ರೇಟೆಡ್ ಹ್ಯುಮನ್ ಫಿಲಾಸಫಿ ಯಂತೆ ತತ್ವ, ನೀತಿಗಳನ್ನು ಬೆಳೆಸೋಣ. ಸಂದರ್ಭಾನುಸಾರ ಅಗತ್ಯಕ್ಕೆ ಪೂರಕವಾಗುವಂತೆ ಬದಲಾವಣೆಗೆಳಿಗೆ ತೆರೆದುಕೊಳ್ಳೋಣ.
* ಭೂತಕಾಲವನ್ನು ಆಧರಿಸಿದಂತೆ, ಭವಿಷ್ಯದ ಆಕಾಂಕ್ಷೆಗಳ ಮೇಲೆ ಗುರಿ ನೆಡೋಣ. ಈ ನಡುವೆ ಪ್ರಸ್ತುತ ಅಗತ್ಯತೆಯ ಪ್ರಜ್ಞೆ ಸಹ ನಮ್ಮಲ್ಲಿರಬೇಕು. ಈ ದೃಷ್ಟಿಕೋನ ನಮ್ಮ ಸಮಾಜದ ಸಾಂಸ್ಕೃತಿಕ ಸಾರಕ್ಕೆ ಹೊಂದಿಕೆಯಾಗುವಂತಿರಬೇಕು.
* ಧರ್ಮವನ್ನು ಆಧರಿಸಿಕೊಂಡು ನಾವು ಸಾಮಾಜಿಕ, ಆರ್ಥಿಕ ರಚನೆಯಲ್ಲಿ ಸೂಕ್ತ ಎನಿಸವ ಬದಲಾವಣೆಗೆ ತೆರೆದುಕೊಳ್ಳಬಹುದು. ಸಮಾಜ ಮತ್ತು ವ್ಯಕ್ತಿಗಳ ಹಿತಗಳ ನಡುವೆ ಸಂಘರ್ಷ ಏರ್ಪಡದಂತೆ ಸಾಮರಸ್ಯ ಮತ್ತು ಸಮನ್ವಯ ಸಾಧಿಸುವಂತೆ ಕಾರ್ಯ ನಿರ್ವಹಿಸುವುದು.
* ಶಿಕ್ಷಣ, ಆರ್ಥಿಕತೆಯ ವಿಚಾರದಲ್ಲಿ ಸಾಧ್ಯವಾದಷ್ಟು ಸ್ವಾಯತ್ತ ಸಾಮಾಜಿಕ ವ್ಯವಸ್ಥೆ, ಆಡಳಿತ ವ್ಯವಸ್ಥೆಯ ಮೇಲೆ ಕನಿಷ್ಠ ಅವಲಂಬನೆ, ಸರ್ಕಾರ ದೇಶದ ಪ್ರಗತಿ ಮಾಡುತ್ತದೆ ಎಂಬುದನ್ನೇ ನಂಬಿ ಕೈಕಟ್ಟಿ ಕೂರದೆ, ನಾವು ಆ ನಿಟ್ಟಿನಲ್ಲಿ ಪೂರಕ ಪ್ರಯತ್ನ ನಡೆಸಬೇಕು ಎಂಬ ನಿಟ್ಟಿನಲ್ಲಿ ಚಿಂತಿಸುವುದು ಮತ್ತು ಆ ನಿಟ್ಟಿನಲ್ಲಿಸಾಗುವುದು.
* ಶೋಷಣೆ ಮುಕ್ತ, ನ್ಯಾಯ ಸಮ್ಮತ ಮತ್ತು ಏಕ ರೂಪದ ಸಮಾಜ ವ್ಯವಸ್ಥೆ ನಿರ್ಮಾಣದತ್ತ ಒಲವು ಹೊಂದುವುದು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು.
* ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯೂನ್ಯತೆಗಳಿಂದ ಮುಕ್ತರಾಗುವುದು ಮತ್ತು ಅದನ್ನು ಭಾರತದ ಸಂಸ್ಕೃತಿಗೆ ಪೂರಕವಾಗುವಂತೆ ಬದಲಾವಣೆ ಮಾಡುವುದು.
* ಸಮಾಜದ ಅಂತರ್ಗತ ಶಕ್ತಿಯ ಪುನರುಜ್ಜೀವವನ, ರಾಷ್ಟ್ರೀಯ ಇಚ್ಛಾಶಕ್ತಿಯ ಏರಿಕೆಯತ್ತ ಒಲವು ಮೂಡಬೇಕು. ಈ ಹಿನ್ನೆಲೆಯಲ್ಲಿ ನಿರಂತರ ಪ್ರಯತ್ನ ಮಾಡುವ ಉತ್ಸಾಹಿ ಕಾರ್ಯಕರ್ತರ ಗುಂಪು ಹೆಚ್ಚು ಮುಖ್ಯವಾಗುತ್ತದೆ.
* ಅಭಿವೃದ್ಧಿಯನ್ನು ಪ್ರಚೋದಿಸುವ, ಉತ್ತೇಜಿಸುವ ಮೌಲ್ಯ, ಪ್ರೇರಣೆಗಳ ಸಾಮರಸ್ಯದ ವ್ಯವಸ್ಥೆ ನಿರ್ಮಾಣ.
* ನಾಗರಿಕರ ಎಲ್ಲಾ ರೀತಿಯ ಮೂಲಭೂತ ಅಗತ್ಯತೆಗಳನ್ನು ಪೂರೈಸುವುದು.
* ಬಡತನ ನಿರ್ಮೂಲನೆ, ನಿರುದ್ಯೋಗ ನಿರ್ಮೂಲನೆ, ಬಂಡವಾಳ. ಪೂರಕ ಆರ್ಥಿಕತೆಯ ಹೊರತಾಗಿ, ಕಾರ್ಮಿಕ ಸ್ನೇಹಿ ಆರ್ಥಿಕತೆಗೆ ಒತ್ತು ನೀಡುವುದು.
* ಹೆಚ್ಚು ಉತ್ಪಾದನೆ, ಸೂಕ್ತ ವಿತರಣೆ, ಸ್ವದೇಶೀ ವ್ಯವಹಾರಕ್ಕೆ ಒತ್ತು
* ಆರ್ಥಿಕ ದೃಷ್ಟಿಕೋನದಿಂದ ಕೃಷಿಗೆ ಆದ್ಯತೆ ನೀಡುವುದು
* ಪಾಶ್ಚಾತ್ಯರ ಕುರುಡು ಅನುಕರಣೆ ಇಲ್ಲದ ಕೈಗಾರಿಕೀಕರಣಕ್ಕೆ ಒತ್ತು. ಪ್ರಕೃತಿಗೆ ಯಾವುದೇ ತೊಂದರೆ, ಶೋಷಣೆಯಾಗದಂತೆ ಸಮತೋಲನವನ್ನು ಕಾಪಾಡಿಕೊಳ್ಳುವುದು
* ನಮ್ಮ ತಂತ್ರಜ್ಞರೇ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮಾಡುವುದು ಮತ್ತು ಕುಶಲಕರ್ಮಿಗಳ ಸಾಮರ್ಥ್ಯ, ಉತ್ಪನ್ನಗಳ ಗುಣಮಟ್ಟಕ್ಕೆ ಪ್ರಾಮುಖ್ಯತೆ, ಅಪಾಯಕಾರಿ ತಂತ್ರಜ್ಞಾನಗಳ ನಿಯಂತ್ರಣ.
* ವರ್ಗ ಹೋರಾಟಗಳ ಬದಲಾಗಿ, ನಾವೆಲ್ಲರೂ ಒಂದೇ ಎಂಬ ಸಮರಸ ಭಾವನೆಯಿಂದ, ನಂಬಿಕೆಯ ಜೊತೆಗೆ ಕಾರ್ಯ ನಿರ್ವಹಿಸುವುದು.
* ಶೋಷಿತರು, ದಮನಿತರು, ನಿರ್ಲಕ್ಷ್ಯಕ್ಕೆ ತುತ್ತಾದವರು, ದಲಿತರ ಉನ್ನತಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.