ಕುಂದಾಪುರ: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎನ್ನುವ ಪುಟ್ಟ ಗ್ರಾಮದ ಜನರು ತಮ್ಮ ಮನೆಯಿಂದ ಹೊರಪ್ರದೇಶಕ್ಕೆ ಹೊಗಬೇಕಾದರೇ ತೋದಳ್ಳಿ ಹೊಳೆ ದಾಟಲೇಬೇಕು. ಆದರೆ ಇಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ಹತ್ತಾರು ವರ್ಷಗಳಿಂದ ಜನರು ಸೇತುವೆಯ ಬದಲಿಗೆ ಕಬ್ಬಿಣದ ನಾಲ್ಕು ರೋಪ್ ಕಟ್ಟಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಈ ಪರ್ಯಾಯ ವ್ಯವಸ್ಥೆಯಿಂದಾಗಿ ಇಲ್ಲಿಯ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೆ. ಈ ಮಧ್ಯೆ ಕೊಂಚ ಯಾಮಾರಿದ್ರೂ ಹರಿಯುವ ಹೊಳೆಗೆ ಬೀಳುವ ಭಯದ ನಡುವೆ ಸಾಗಬೇಕು. ಮಳೆಗಾಲ ಆರಂಭವಾಗುವ ಜೂನ್ನಿಂದ ಆರಂಭಿಸಿ ಜನವರಿ ತಿಂಗಳಿನವರೆಗೂ ಜನರು ನಿತ್ಯ ಯಾತನಾಮಯ ಜೀವನ ಸಾಗಿಸಬೇಕಿದೆ.
ಬೈಂದೂರು ಗ್ರಾ.ಪಂ. ವ್ಯಾಪ್ತಿಯ ಕೊಸಳ್ಳಿ ಜಲಪಾತದಿಂದ ಹರಿದು ಬರುವ ನೀರು ಹಾಗೂ ಬರ್ತಕಲ್ ಫಾಲ್ಸ್ನಿಂದ ಹರಿಯುವ ನೀರು ಒಗ್ಗೂಡಿ ಈ ತೋದಳ್ಳಿ ನದಿ ಹರಿಯುತ್ತದೆ. ಈ ನದಿಯ ಇನ್ನೊಂದು ಭಾಗದಲ್ಲಿರುವ ಪುಟ್ಟ ಊರೇ ದೇವರಗದ್ದೆ. ಸುಮಾರು ಹತ್ತು ಕುಟುಂಬಗಳು ವಾಸಿಸುವ ಈ ಪ್ರದೇಶವಾಗಿದ್ದು ಅನೇಕ ವಿದ್ಯಾರ್ಥಿಗಳು ಪ್ರತಿದಿನ ಬೈಂದೂರು ಭಾಗದ ವಿವಿಧ ಶಾಲೆ-ಕಾಲೇಜಿಗೆ ತೆರಳುತ್ತಾರೆ. ಅವರು ಈ ಹಗ್ಗದ ಮೇಲೆ ನಡೆದೇ ಶಾಲೆ-ಕಾಲೇಜಿಗೆ ಹೋಗಬೇಕು. ಇನ್ನು ಕೆಲವು ವಿದ್ಯಾರ್ಥಿಗಳು ಈ ಸಮಸ್ಯೆಯಿಂದ ಹಾಸ್ಟೆಲ್ ವಸತಿಯನ್ನು ಅವಲಂಭಿಸಿದ್ದಾರೆ. ಈ ಭಾಗದಲ್ಲಿ ಬಾಳೆ, ಅಡಿಕೆ, ತೆಂಗು, ರಬ್ಬರ್ ತೋಟಗಳಿವೆ.
ದೇವರುಗದ್ದೆಯಲ್ಲಿ ವೃದ್ಧರಿದ್ದಾರೆ, ಅಂಗವಿಕಲತೆ ಇರುವ ವ್ಯಕ್ತಿಯೋರ್ವರಿದ್ದಾರೆ. ಅನಾರೋಗ್ಯ ಅಥವಾ ಇನ್ನಾವುದೆ ಅವಘಡ ಸಂಭವಿಸಿದಾಗ ಆಸ್ಪತ್ರೆ ಸಾಗಿಸುವುದು ತುಂಬಾನೇ ಕಷ್ಟ. ಈ ಬಗ್ಗೆ ಇಲ್ಲಿನ ಸ್ಥಳೀಯರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರಿಗೂ ಕಿರು ಸೇತುವೆಯ ನಿರ್ಮಾಣದ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ. ಅಂತೆಯೇ ಕಳೆದ ವರ್ಷ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಶೀಘ್ರ ಕಿರು ಸೇತುವೆ ನಿರ್ಮಾಣದ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ದೇವರುಗದ್ದೆ ಸಂಪರ್ಕಕ್ಕೆ ಕಿರುಸೇತುವೆ ನಿರ್ಮಿಸಬೇಕು, ಇಲ್ಲಿನ ಜನರ ಹಲವು ವರ್ಷಗಳ ಸಮಸ್ಯೆಗೆ ಪರಿಹಾರವನ್ನು ಶೀಘ್ರವೇ ಒದಗಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.