ಮಂಗಳೂರು: ನ. 5 ರಂದು ಬಿಜೆಪಿಯ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ, ಕೋರ್ ಕಮಿಟಿ ಸಭೆ ಮಂಗಳೂರಿನಲ್ಲಿ ನಡೆಯಲಿದೆ.
ಈ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದು, ಇಂದು ಸಂಜೆ ಅವರು ನಗರಕ್ಕೆ ಬಂದಿಳಿಯಲಿದ್ದಾರೆ. ನಾಳೆ ಕಾರ್ಯಕಾರಿ ಸಭೆಯ ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಅನೇಕ ನಾಯಕರು ಸೇರಿದಂತೆ ಸುಮಾರು 150 ಮಂದಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇನ್ನು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಳ ಮಟ್ಟದಲ್ಲಿಯೇ ಪಕ್ಷದ ಬಲವರ್ಧನೆ ಮಾಡುವ ಸಂಬಂಧ ಈ ಸಭೆ ಮುಖ್ಯವಾಗಿದೆ. ಅಭಿವೃದ್ಧಿ ಪರ ಒತ್ತು ನೀಡುವುದು, ಚರ್ಚೆ ನಡೆಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಪಕ್ಷದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಗಳನ್ನು ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದು ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಕಾರ್ಯಕ್ಕೆ ಸಹಾಯಕವಾಗಲಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಪ್ರವಾಸೋದ್ಯಮ, ವಿವಿಧ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಹೊಸತನಕ್ಕೆ ಆದ್ಯತೆ, ಪಕ್ಷ ಸಂಘಟನೆಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಈ ಸಭೆ ಹೆಚ್ಚು ಪೂರಕ. ಒಟ್ಟಿನಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯ ಆಶಯಗಳ ಜೊತೆಗೆ ಈ ಸಭೆಯನ್ನು ನಡೆಸುವ ದೃಷ್ಟಿಕೋನ ಪಕ್ಷದ್ದಾಗಿದೆ ಎಂದು ಕಟೀಲ್ ಸಭೆಯ ಕುರಿತಂತೆ ಮಾಹಿತಿ ನೀಡಿದ್ದಾರೆ.
ಈ ಸಭೆಯ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿದ್ದು, ಈ ಸಭೆಯು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ವಿಜಯ ಯಾತ್ರೆಗೆ ಮುನ್ನುಡಿಯಾಗಲಿವೆ. ಪಕ್ಷದ ಸಂಘಟನೆ, ಚುನಾವಣಾ ಕಾರ್ಯತಂತ್ರದ ಹಿನ್ನೆಲೆಯಲ್ಲಿಯೂ ಈ ಸಭೆ ಮಹತ್ವಪೂರ್ಣ. ಕಳೆದ 20 ವರ್ಷಗಳ ಬಳಿಕ ಈ ಬಾರಿ ಮಂಗಳೂರಿನಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಮಂಗಳೂರಿನಲ್ಲಿ ಪಕ್ಷದ ಬಲವರ್ಧನೆ ಉದ್ದೇಶದಿಂದ ಈ ನಿರ್ಧಾರ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಚಿಂತನೆ ಅರ್ಥಪೂರ್ಣ ಮತ್ತು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.