2017ರಲ್ಲಿ ದೇಶದ ‘ಯುವ’ ನಾಯಕ ಎಂದೇ ಪ್ರಸಿದ್ಧರಾಗಿರುವ ರಾಹುಲ್ ಗಾಂಧೀ ಸಂಘವನ್ನು ಟೀಕಿಸುವ ಭರದಲ್ಲಿ, ದೇಶದ ಯಾವುದಾದರೂ ಸಂಘದ ಶಾಖೆಯಲ್ಲಿ ಮಹಿಳೆಯರು ಚಡ್ಡಿಯನ್ನು ಧರಿಸಿ ಪಾಲ್ಗೊಳ್ಳುವುದನ್ನು ನೋಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಸಂಘದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ, ಮಹಿಳೆಯರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ನೋಡಲಾಗುತ್ತದೆ ಎಂಬುದಾಗಿತ್ತು ಅವರ ಮಾತಿನ ಸಾರಾಂಶ. ಆದರೆ ಅಂದಿಗೂ ಇಂದಿಗೂ ಬಹಳಷ್ಟು ಜನರು ಅರಿಯದ ವಿಚಾರವೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವೊಂದು 1936 ನೇ ಇಸವಿಯಿಂದ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಷ್ಟ್ರ ಸೇವಿಕಾ ಸಮಿತಿ
“ಮಹಿಳೆಯು ಮನೆ ಹಾಗೂ ಸಮಾಜದ ಪ್ರೇರಕ ಶಕ್ತಿ , ಆ ಶಕ್ತಿಯು ಜಾಗೃತವಾಗದೆ ಸಮಾಜವು ಬೆಳೆಯಲಾಗದು” ..
ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಕೆಲವು ವರ್ಷಗಳ ಬಳಿಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಮಹಿಳೆಯರಿಗಾಗಿ ರಾಷ್ಟ್ರೀಯ ದೃಷ್ಟಿಕೋನದ ಸಂಘಟನೆಯೊಂದರ ಅವಶ್ಯಕತೆಯಿದೆ ಎಂಬುದನ್ನು ಪರಮಪೂಜ್ಯ ಕೇಶವ ಬಲಿರಾಮ್ ಹೆಡಗೇವಾರ್ ಮನಗಂಡರು. ಇದರಂತೆಯೇ ಡಾಕ್ಟರ್ ಜೀ ಅವರ ಮಾರ್ಗದರ್ಶನದೊಂದಿಗೆ ಲಕ್ಷ್ಮೀಬಾಯಿ ಕೇಳ್ಕರ್ ಅವರು 1936 ರ ವಿಜಯದಶಮಿಯಂದು ವಾರ್ಧಾದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಪ್ರಾರಂಭಿಸಿದರು. ರಾಷ್ಟ್ರ ಸೇವಿಕಾ ಸಮಿತಿಯ ಮುಖ್ಯಸ್ಥರನ್ನು “ಪ್ರಮುಖ ಸಂಚಾಲಿಕಾ” ಎಂದು ಕರೆಯಲಾಗುತ್ತಿದ್ದು, ಸಂಘಟನೆಯ ಮೊದಲ ಪ್ರಮುಖ ಸಂಚಾಲಿಕಾರಾಗಿ ವಂದನೀಯ ಮೌಶೀಜೀ ಅವರೇ ಜವಾಬ್ದಾರಿಯನ್ನು ವಹಿಸಿಕೊಂಡರು. ಸುಶ್ರಾವ್ಯ ಕಂಠವನ್ನು ಹೊಂದಿದ್ದ ಮೌಶೀಜಿ ಶ್ರೀ ರಾಮನ ಚಾತ್ರೈತ್ರೆಯನ್ನು ಹಾಡುವ ಮೂಲಕ ಸಹಸ್ರಾರು ಕಾರ್ಯಕರ್ತೆಯರನ್ನು ರಾಷ್ಟ್ರಸೇವೆಗೆ ಅಣಿಗೊಳಿಸಿದ್ದರು.
ರಾಷ್ಟ್ರ ಸೇವಿಕಾ ಸಮಿತಿಯು ಮೂವರು ಪ್ರಭಾವೀ ಸ್ತ್ರೀಯರನ್ನು ತನ್ನ ಆದರ್ಶವಾಗಿ ಸ್ವೀಕರಿಸಿದೆ.
ಜೀಜಾಬಾಯಿ : ಛತ್ರಪತಿ ಶಿವಾಜಿ ಮಾಹಾರಾಜರು ಹಿಂದವೀ ಸ್ವರಾಜ್ಯ ಸ್ಥಾಪಿಸಲು ಬಹು ದೊಡ್ಡ ಪ್ರೇರಣೆಯೇ ಅವರ ತಾಯಿ ಜೀಜಾ ಮಾತೆ.ಬಾಲ್ಯದಿಂದಲೇ ದಾಸ್ಯವನ್ನು ತೊಲಗಿಸಲು ಪ್ರೇರಣಾದಾಯಕ ಕಥೆಗಳನ್ನು ಹೇಳುವ ಮೂಲಕ ಅವರು ಶಿವಾಜಿ ಮಹಾರಾಜರ ಜೀವನದ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದ್ದರು. ಆದ್ದರಿಂದಲೇ ಸ್ವಯಂಸೇವಿಕೆಯರು ಅವರನ್ನು ಮಾತೃತ್ವದ ಪ್ರತೀಕ ಎಂದು ಆದರ್ಶವಾಗಿ ಸ್ವೀಕರಿಸುತ್ತಾರೆ.
ಅಹಲ್ಯಾ ಬಾಯಿ ಹೋಳ್ಕರ್ : ಅತ್ಯಂತ ದಕ್ಷ ಹಾಗೂ ಕುಶಲ ಆಡಳಿತಗಾರ್ತಿಯಾಗಿದ್ದ ಅಹಲ್ಯಾ ಬಾಯಿ ಹೋಳ್ಕರರು ಪ್ರಜೆಗಳೆಡೆಗಿನ ತಮ್ಮ ಕರ್ತವ್ಯವನ್ನು ಅತ್ಯಂತ ಸಮರ್ಥವಾಗಿಯೂ ಸಮರ್ಪಕವಾಗಿಯೂ ನಿಭಾಯಿಸಿದ ಕುಶಲ ರಾಣಿ. ಆದ್ದರಿಂದಲೇ ಸ್ವಯಂಸೇವಿಕೆಯವರು ಅವರನ್ನು ಕರ್ತ್ಯವ್ಯ ನಿರ್ವಹಣೆಗೆ ಆದರ್ಶರನ್ನಾಗಿ ಸ್ವೀಕರಿಸುತ್ತಾರೆ.
ಝಾನ್ಸಿ ರಾಣಿ ಲಕ್ಷ್ಮೀ ಬಾಯಿ : ಪ್ರಥಮ ಸ್ವಾತಂತ್ರ ಸಂಗ್ರಾಮದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾದ ರಾಣಿ ಲಕ್ಷ್ಮಿ ಬಾಯಿ ದಿಟ್ಟ ಹಾಗೂ ಅತ್ಯಂತ ಸಾಹಸಿ ನಾರಿಯಾಗಿದ್ದರು. ಸೇನೆಯ ನೇತೃತ್ವವನ್ನು ಅಪೂರ್ವವಾಗಿ ಮುನ್ನಡೆಸಿ ಬ್ರಿಟೀಷರ ವಿರುದ್ಧ ಸ್ವಾತಂತ್ರದ ಕಹಳೆಯನ್ನೂದಿದ ರಾಣಿ ಲಕ್ಷ್ಮೀ ಬಾಯಿ ಅವರನ್ನು ಸ್ವಯಂಸೇವಿಕೆಯರು ನೇತೃತ್ವದ ಗುಣಕ್ಕೆ ಆದರ್ಶವಾಗಿ ಸ್ವೀಕರಿಸುತ್ತಾರೆ.
ಸೇವೆಯನ್ನೇ ಪರಮ ಧರ್ಮವನ್ನಾಗಿ ಸ್ವೀಕರಿಸಿರುವ ಸ್ವಯಂಸೇವಿಕಾ ಸಮಿತಿಯು ಪ್ರಾರಂಭದಿಂದಲೂ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಭೋಪಾಲ್ ಅನಿಲ ದುರಂತ, ಲಾಥೂರ್ ಭೂಕಂಪ, ಗುಜರಾತ್ನಲ್ಲಿ ಸಂಭವಿಸಿದ ಭೂಕಂಪ ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತೆಯರು ಸೂಕ್ತ ಸೇವಾಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿದ್ದರು. ಇಂದಿಗೂ ದೇಶದ ವಿವಿಧ ಕುಗ್ರಾಮಗಳಲ್ಲೂ ಕಾರ್ಯಕರ್ತೆಯರು ಶಿಶು ಮಂದಿರಗಳು, ಉದ್ಯೋಗ ಕೇಂದ್ರ, ವಸತಿ ಗೃಹ, ವಾಚನಾಲಯ, ಹೊಲಿಗೆ ತರಬೇತಿ ಕೇಂದ್ರಗಳು, ಕಂಪ್ಯೂಟರ್ ತರಬೇತಿ ಕೇಂದ್ರಗಳು ಇತ್ಯಾದಿಗಳನ್ನು ಉಚಿತವಾಗಿ ನಡೆಸುತ್ತಾರೆ. ಕೋವಿಡ್-19 ಸೋಂಕು ಪಸರಿಸಲು ಪ್ರಾರಂಭವಾದ ಸಂದರ್ಭದಲ್ಲಿ ಸಮಿತಿಯು ಅನೇಕ ನಗರಗಳು ಹಾಗೂ ಗ್ರಾಮಗಳಲ್ಲಿ ಆಹಾರದ ಪೊಟ್ಟಣಗಳು, ಅಡುಗೆ, ಗರ್ಭಿಣಿ ಮಹಿಳೆಯರಿಗೆ ಪ್ರತ್ಯೇಕ ಪೋಷಕಾಂಶಯುಕ್ತ ಆಹಾರ ಪೊಟ್ಟಣಗಳನ್ನು ತಯಾರಿಸಿ ಹಂಚುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿತು. ಮಾತ್ರವಲ್ಲದೆ ಈ ಸಂಕಷ್ಟಕರ ಸಂದರ್ಭದಲ್ಲಿ ಮಾನಸಿಕ ಕ್ಲೇಶಗಳನ್ನು ನಿವಾರಿಸಲು ಸಹಾಯವಾಗಲು ಆಪ್ತ ಸಲಹೆ ಹಾಗೂ ಸಮಾಲೋಚನಾ ಕಾರ್ಯಗಳಲ್ಲೂ ಸಂಘಟನೆಯು ನಿರತವಾಗಿದೆ. ಪ್ರಧಾನ ಮಂತ್ರಿ ಪ್ರಾರಂಭಿಸಿದ್ದ ಪಿಎಂ ಕೇರ್ಸ್ ನಿಧಿಗೆ 22 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಂಗ್ರಹಿಸಿ ಅರ್ಪಿಸಿದ್ದಷ್ಟೇ ಅಲ್ಲದೆ 10 ಲಕ್ಷ ಮಾಸ್ಕ್ಗಳನ್ನೂ ಸಿದ್ದಪಡಿಸಿ ವಿತರಿಸಲಾಗಿದೆ.
ಅಮೆರಿಕಾ ಸೇರಿದಂತೆ ಇತರ 10 ರಾಷ್ಟ್ರಗಳಲ್ಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರ ಸೇವಿಕಾ ಸಮಿತಿಯು ಸುಮಾರು 5,215 ಶಾಖೆಗಳನ್ನು ನಡೆಸುತ್ತಿದ್ದು 10 ಲಕ್ಷಕ್ಕೂ ಹೆಚ್ಚಿನ ಸ್ವಯಂಸೇವಿಕೆಯರನ್ನು ಹೊಂದಿದೆ. ಭಾರತದ ನಿಕಟಪೂರ್ವ ವಿದೇಶಾಂಗ ಸಚಿವರಾಗಿದ್ದ ಸ್ವರ್ಗೀಯ ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಮುಂತಾದ ಮಹಿಳಾ ರಾಜಕಾರಣಿಗಳು ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಪುರೋಹಿತಶಾಹಿ, ಆಧುನಿಕತೆಯಿಂದ ದೂರ ಇತ್ಯಾದಿ ಟೀಕೆಗಳು ಸಂಘಟನೆಯ ವಿರುದ್ಧ ಕೇಳಿಬಂದರೂ, ಸಮಿತಿಯು ಯಾವುದೇ ಟೀಕೆಗಳಿಗೂ ಪ್ರತಿಕ್ರಿಯಿಸುವುದಿಲ್ಲ, ಪ್ರಸಿದ್ದಿ ಮತ್ತು ವಿವಾದಗಳಿಂದ ಅಂತರವನ್ನು ಕಾಯ್ದುಕೊಂಡು ಅತ್ಯಂತ ಬಲಿಷ್ಠವಾಗಿ ಸಮಿತಿಯು ಬೆಳೆಯುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಬೆಳೆಯಲು ಹಾಗೂ ಸ್ವರಕ್ಷಣೆಗಾಗಿ ರಕ್ಷಣಾ ವಿದ್ಯೆಯನ್ನು ಕಲಿಯಲೂ ಪ್ರೋತ್ಸಾಹಿಸುವ ಸಮಿತಿಯು ಈ ವಿದ್ಯೆಗಳನ್ನು ತನ್ನ ನಿತ್ಯ ಶಾಖೆಯ ಭಾಗವಾಗಿ ಪರಿಗಣಿಸುತ್ತದೆ. ಮಾತೃತ್ವ, ನೇತೃತ್ವ ಹಾಗೂ ಕರ್ತೃತ್ವವನ್ನು ಮಹಿಳೆಯ ಜೀವನದ ಅವಿಭಾಜ್ಯ ಅಂಗ ಹಾಗೂ ಕರ್ತವ್ಯಗಳು ಎಂಬುದು ಸಮಿತಿಯ ಮುಖ್ಯ ವಿಶ್ವಾಸವಾಗಿದೆ.
ಆತ್ಮಬಲವು ಭಾರತೀಯ ಮಹಿಳೆಯರ ಬಹು ಮುಖ್ಯ ಶಕ್ತಿಯಾಗಿದ್ದು, ಸಮಿತಿಯು ಪ್ರತಿಯೊಬ್ಬ ಮಹಿಳೆಯ ಒಳಗಿನ ಆತ್ಮಬಲವನ್ನು ಬಡಿದೆಬ್ಬಿಸಲು ಪ್ರಯತ್ನಿಸುತ್ತದೆ. ಭಾರತೀಯ ಸ್ವರಕ್ಷಣಾ ಯುದ್ಧ ವಿದ್ಯೆಗಳ ಶಿಕ್ಷಣವನ್ನು ನೀಡಲಾಗುತ್ತಿದ್ದು, ಪರಕೀಯರ ದಾಳಿಯಿಂದ ಮನೆ ಸೇರಿ ತಮ್ಮಲ್ಲಿನ ಕ್ಷಾತ್ರ ತೇಜಸ್ಸನ್ನು ಮರೆತಿರುವ ಮಹಿಳೆಯರಿಗೆ ಮಾತೃಭೂಮಿಯೆಡೆಗಿನ ತಮ್ಮ ಕರ್ತವ್ಯವನ್ನು ನೆನಪಿಸುವ ಕೆಲಸವನ್ನೂ ಸಮಿತಿಯು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಆಧುನಿಕತೆಯಿಂದ ದೂರ ಎಂಬ ಅನೇಕ ಟೀಕೆಗಳಿದ್ದರೂ ಸಮಿತಿಯಲ್ಲಿ ಅನೇಕ ವೈದ್ಯೆಯರು, ವಕೀಲರು, ಮಾಹಿತಿ ತಂತ್ರಜ್ಞಾನ ಪರಿಣಿತರು ಮಾತ್ರವಲ್ಲದೆ ಇನ್ನೂ ಅನೇಕ ವೃತ್ತಿಯಲ್ಲಿ ನಿರತರಾಗಿರುವ ಮಹಿಳೆಯರು ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ.
ಸಮಿತಿಯ ಪ್ರಸಕ್ತ ಪ್ರಮುಖ ಸಂಚಾಲಿಕಾ ವಂದನೀಯ ಶಾಂತಕ್ಕ (ವಿ. ಶಾಂತ ಕುಮಾರಿ) ಬಿ.ಎಸ್.ಸಿ. ಹಾಗೂ ಎಂ. ಎಡ್. ಪದವಿಯನ್ನು ಹೊಂದಿದ್ದಾರೆ ಮಾತ್ರವಲ್ಲದೆ 7 ಭಾಷೆಗಳಲ್ಲೂ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಮಹಿಳಾ ಸಂಘಟನೆಗಳು ಅನೇಕವಿರಬಹುದು ಆದರೆ ಯಾವುದೇ ಪ್ರಸಿದ್ದಿ ಹಾಗೂ ಪ್ರಚಾರವನ್ನು ಬಯಸದೆ ಸೇವೆಯನ್ನೇ ಉಸಿರಾಗಿಸಿ ನಿಸ್ವಾರ್ಥ ಸೇವೆಗೆ ಬದ್ಧವಾಗಿರುವ ರಾಷ್ಟ್ರ ಸೇವಿಕಾ ಸಮಿತಿಯು ಇತರ ಸಂಘಟನೆಗಳಿಂದ ಖಂಡಿತವಾಗಿಯೂ ಭಿನ್ನವಾಗಿ ನಿಲ್ಲುತ್ತದೆ. ಬಹುಶಃ ಅದೇ ಕಾರಣಕ್ಕೆ ಇರಬಹುದು ಇಂದಿಗೂ ಅನೇಕರಿಗೆ ರಾಷ್ಟ್ರ ಸೇವಿಕಾ ಸಮಿತಿಯ ಬಗ್ಗೆ ತಿಳಿದಿಲ್ಲ.
ಸೇವೆಯನ್ನೇ ಪರಮ ಧರ್ಮವನ್ನಾಗಿ ಸ್ವೀಕರಿಸಿ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು, ಮಹಿಳೆಯರನ್ನು ಸ್ವಾವಲಂಬಿಗಳಾಗಿ ಬೆಳೆಯಲು ಹಾಗೂ ಸ್ವರಕ್ಷಣೆಗಾಗಿ ರಕ್ಷಣಾ ವಿದ್ಯೆಯನ್ನು ಕಲಿಸುತ್ತಾ, ಪ್ರಸಿದ್ದಿ ಮತ್ತು ವಿವಾದಗಳಿಂದ ಅಂತರವನ್ನು ಕಾಯ್ದುಕೊಂಡು ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿರುವ ರಾಷ್ಟ್ರ ಸೇವಿಕಾ ಸಮಿತಿ ಇತರ ಸಂಘಟನೆಗಳಿಂದ ಖಂಡಿತವಾಗಿಯೂ ಭಿನ್ನವಾಗಿ ನಿಲ್ಲುತ್ತದೆ.
✍️ ದೀಪಾ ಜಿ. ಭಟ್, ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.