ವಾಷಿಂಗ್ಟನ್: ಬೆಂಗಳೂರಿನ ಸ್ಟಾರ್ಟ್ ಅಪ್ ದೇವಾಸ್ ಮಲ್ಟಿ ಮೀಡಿಯಾ ಜೊತೆಗೆ ಉಪಗ್ರಹ ಒಪ್ಪಂದ ರದ್ದತಿ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ವಾಣಿಜ್ಯ ಘಟಕವಾದ ಆಂಟ್ರಿಕ್ಸ್ ಕಾರ್ಪೊರೇಷನ್ 1.2 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಅಮೆರಿಕದ ನ್ಯಾಯಾಲಯ ಆದೇಶ ಹೊರಡಿಸಿದೆ.
ದೇವಾಸ್ ಸಂಸ್ಥೆ ದೇಶದಾದ್ಯಂತ ಸಂವಹನ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಂಡಿತ್ತು. 2005 ಜನವರಿಯಲ್ಲಿಯೇ ಈ ಒಪ್ಪಂದ ನಡೆದಿದ್ದು, ಇದರ ಪ್ರಕಾರ ಆಂಟ್ರಿಕ್ಸ್ ಸಂಸ್ಥೆ ದೇವಾಸ್ಗೆ 70 Mhz, ಎಸ್-ಬ್ಯಾಂಡ್ ತರಂಗಾಂತರಂಗದ 2 ಉಪಗ್ರಹಗಳನ್ನು ಸಿದ್ಧಪಡಿಸಿ, ಉಡಾಯಿಸಿ, ಕಾರ್ಯಾಚರಿಸುವಂತೆ ಮಾಡಬೇಕಿತ್ತು. ಆದರೆ 2011 ರಲ್ಲಿ ಈ ಒಪ್ಪಂದವನ್ನು ಆಂಟ್ರಿಕ್ಸ್ ಮುರಿದಿತ್ತು.
ಆಂಟ್ರಿಕ್ಸ್ನ ಈ ನಿಲುವನ್ನು ಪ್ರಶ್ನಿಸಿ ದೇವಾಸ್ ಭಾರತದ ನ್ಯಾಯಾಲಯದ ಮೊರೆ ಹೋಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಿಬ್ಯುನಲ್ ರಚಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಮೆರಿಕದ ವಾಷಿಂಗ್ಟನ್ ಪಶ್ಚಿಮ ನ್ಯಾಯಾಲಯ ಅಕ್ಟೋಬರ್ 27 ರಂದು ತೀರ್ಪಿತ್ತಿದ್ದು, ಆಂಟ್ರಿಕ್ಸ್ ಸಂಸ್ಥೆಯು ದೇವಾಸ್ಗೆ ಅಸಲು, ಬಡ್ಡಿ ಎಲ್ಲ ಸೇರಿ 1.2 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಸೂಚಿಸಿದೆ. ಜೊತೆಗೆ ಈ ಒಪ್ಪಂದ ರದ್ದು ಮಾಡಿದ ಕ್ರಮವೂ ಸರಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಅಮೆರಿಕ ನ್ಯಾಯಾಲಯ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಆಂಟ್ರಿಕ್ಸ್ ತಿಳಿಸಿತ್ತು. ಆದರೆ ದೇವಾಸ್ ಸಂಸ್ಥೆ ಅಮೆರಿಕದಲ್ಲಿಯೂ ಸೇವೆ ನೀಡುತ್ತಿದ್ದು ಸಂಸ್ಥೆಯ ಕಛೇರಿಗಳನ್ನು ಹೊಂದಿದೆ. ಅಮೆರಿಕದ ಸೀಟಲ್ನಲ್ಲಿ ದೇವಾಸ್ನ ಪ್ರಧಾನ ಕಛೇರಿ ಇದೆ. ಹೀಗಾಗಿ ಅಮೆರಿಕ ನ್ಯಾಯಾಲಯ ಇದನ್ನು ವಿಚಾರಣೆ ನಡೆಸಬಹುದು ಎಂದು ಕೋರ್ಟ್ ತಿಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.