ನವದೆಹಲಿ: ಭಾರತ-ಅಮೆರಿಕ 2+2 ಮಾತುಕತೆಯ ಬಳಿಕ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪ ದತ್ತಾಂಶ, ಸೂಕ್ಷ್ಮ ಮಾಹಿತಿಗಳ ವಿನಿಮಯ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿವೆ.
ಈ ಒಪ್ಪಂದದಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ದ್ವಿಪಕ್ಷೀಯ ಮಿಲಿಟರಿ ಮತ್ತು ರಕ್ಷಣಾ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮಾತುಕತೆ ಚೀನಾಗೆ ಎಚ್ಚರಿಕೆಯ ಸಂದೇಶದಂತೆಯೂ ಆಗಿದೆ ಎನ್ನಬಹುದು.
ಈ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎರಡು ದಿನಗಳ ಸಭೆಯಲ್ಲಿ ಮೂರು ನೆರೆಯ ದೇಶಗಳ ಜೊತೆಗೆ ಭಾರತದ ಜಂಟಿ ಸಹಕಾರ ಚಟುವಟಿಕೆ ಮತ್ತು ಇನ್ನಿತರ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ಮಾಡಲಾಗಿದೆ. ಕಾನೂನು ನಿಯಮಗಳನ್ನು ಗೌರವಿಸುವುದು, ಅಂತರರಾಷ್ಟ್ರೀಯ ಸಾಗರದಲ್ಲಿ ನೌಕಾ ಚಟುವಟಿಕೆಗಳಿಗೆ ವಿಸ್ತರಣೆ, ಎಲ್ಲಾ ದೇಶಗಳ ಸಾರ್ವಭೌಮತೆ ಎತ್ತಿ ಹಿಡಿಯುವುದು ಮೊದಲಾದವುಗಳಿಗೆ ಈ ಸಂದರ್ಭದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಹತ್ತಿರದ ದೇಶಗಳ ಬೆಳವಣಿಗೆಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಭಯೋತ್ಪಾದನೆ, ಗಡಿ ನಿಯಮ ಮೀರುವುದು ಮೊದಲಾದವುಗಳನ್ನು ತಿರಸ್ಕರಿಸಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ, ಚೀನಾವನ್ನು ಒಳಗೊಂಡಂತೆ ಎಲ್ಲಾ ರೀತಿಯ ಬೆದರಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಮಂತ್ರವನ್ನು ಈ ಸಂದರ್ಭದಲ್ಲಿ ಭಾರತ, ಅಮೆರಿಕ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾರ್ಕ್ ಎಸ್ಟರ್, ಕೊರೋನಾ ಸೋಂಕಿನ ಸಂದರ್ಭದಲ್ಲಿ ಭದ್ರತೆ ಎಂಬುದು ಸವಾಲಿನ ವಿಷಯವಾಗಿ ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ, ಸ್ಥಿರತೆ, ಸಮೃದ್ಧತೆ ಕಾಪಾಡಿಕೊಳ್ಳಬೇಕಾಗಿದೆ. ಮುಕ್ತ ಮತ್ತು ನಿರ್ಭೀತ ಇಂಡೋ-ಫೆಸಿಫಿಕ್ ವಿಚಾರದಲ್ಲಿ ಭಾರತ ಮತ್ತು ಆಮೆರಿಕ ಪರಸ್ಪರ ಹೆಗಲು ನೀಡಲಿವೆ. ಈ ಸಂದರ್ಭದಲ್ಲಿ ಇದು ಅನಿವಾರ್ಯವೂ ಆಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.