ನವದೆಹಲಿ: ಇನ್ನು ಮುಂದೆ ಮಿಲಿಟರಿ ಕ್ಯಾಂಟೀನುಗಳಲ್ಲಿ ಚೀನಾ ಉತ್ಪನ್ನಗಳು ಸಂಪೂರ್ಣವಾಗಿ ನಿಷೇಧವಾಗಲಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನವನ್ನು ನೀಡುವ ಪ್ರಯತ್ನದ ಭಾಗವಾಗಿ ರಕ್ಷಣಾ ಸಚಿವಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ಕ್ಯಾಂಟೀನುಗಳಲ್ಲಿ ಚೀನಾದಿಂದ ಆಮದುಗೊಂಡ ಉತ್ಪನ್ನಗಳನ್ನು ಮಾರಾಟ ಮಾಡದಿರುವ ನಿರ್ಧಾರವನ್ನು ಕೈಗೊಂಡಿದೆ.
“ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (CSD)ಗಳಲ್ಲಿ ಮತ್ತು ಅದರಡಿ ಯುನಿಟ್ ವತಿಯಿಂದ ನಡೆಸಲಾಗುವ ಕ್ಯಾಂಟೀನುಗಳಲ್ಲಿ ಹಲವು ಆಮದುಗೊಂಡ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲಾಗುವುದು” ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಸಿಎಸ್ಡಿ ಭಾರತದಲ್ಲಿ ಅತಿ ದೊಡ್ಡ ರಿಟೇಲ್ ಸ್ಟೋರ್ ಚೈನ್ ಅನ್ನು ನಡೆಸುತ್ತದೆ, ಸಿಯಾಚಿನ್ ಗ್ಲೇಸಿಯರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಇದು ಸುಮಾರು 3,500 ಕ್ಯಾಂಟೀನುಗಳನ್ನು ನಿರ್ವಹಿಸುತ್ತದೆ.
ಈ ಕ್ಯಾಂಟೀನುಗಳಲ್ಲಿ ಸುಮಾರು ಐದು ಸಾವಿರ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 400 ಉತ್ಪನ್ನಗಳು ಆಮದುಗೊಂಡ ಉತ್ಪನ್ನಗಳು. ಇದರಲ್ಲಿ ಬಹುಪಾಲು ಚೀನಾದಿಂದ ಭಾರತಕ್ಕೆ ಬಂದ ವಸ್ತುಗಳಾಗಿವೆ. ಟಾಯ್ಲೆಟ್ ಬ್ರಷ್, ಡೈಪರ್, ರೈಸ್ ಕುಕರ್ಸ್, ಎಲೆಕ್ಟ್ರಿಕ್ ಕಿಟ್, ಸ್ಯಾಂಡ್ವಿಚ್ ಟೋಸ್ಟರ್, ಕ್ಲೀನರ್ಸ್, ಸನ್ ಗ್ಲಾಸ್, ಲೇಡೀಸ್ ಹ್ಯಾಂಡ್ ಬ್ಯಾಗ್, ಲ್ಯಾಪ್ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಮುಂತಾದವುಗಳನ್ನು ಚೀನಾದಿಂದ ತರಿಸಲಾಗುತ್ತದೆ. ಇನ್ಮುಂದೆ ಇವುಗಳ ಆಮದನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಎಸ್ಡಿ ಕೌಂಟರ್ಗಳ ಮೂಲಕ ಈ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗುವುದು ಮತ್ತು ಅವುಗಳನ್ನು ಭಾರತೀಯ ಉತ್ಪನ್ನಗಳಿಂದ ಬದಲಾಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕ್ಯಾಂಟೀನ್ಗಳಲ್ಲಿ ವಿದೇಶದಿಂದ ಅಮದುಗೊಂಡ ಮದ್ಯದ ಮಾರಾಟವನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಹಲವು ತಿಂಗಳುಗಳಿಂದ, ಯುನಿಟ್ ರನ್ ಕ್ಯಾಂಟೀನ್ಗಳಲ್ಲಿ ಉನ್ನತ ಮಟ್ಟದ ವಿದೇಶಿ ಮದ್ಯದ ಬ್ರಾಂಡ್ಗಳು ಲಭ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.