ಗಾಜಿಯಾಬಾದ್: ಸಮಾಜಕ್ಕೆ ಸೇವೆ ಸಲ್ಲಿಸುವ ಮನಸ್ಸಿದ್ದರೆ ವೈಯಕ್ತಿಕ ಕಾರ್ಯಗಳು ಯಾವತ್ತೂ ಆದ್ಯತೆಯಾಗಿ ಕಾಣುವುದೇ ಇಲ್ಲ. ಈ ಮಾತಿಗೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಸೌಮ್ಯ ಪಾಂಡೆ.
ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ ಇವರು ತಮ್ಮ ಕರ್ತವ್ಯಕ್ಕೆ ವಾಪಸಾಗಿದ್ದಾರೆ. ಮೋದಿ ನಗರದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿರುವ ಅವರು ಜುಲೈ ತಿಂಗಳಿನಿಂದ ಕೋವಿಡ್ ಕಾರ್ಯಗಳಲ್ಲಿ ತೊಡಗಿದ್ದರು. ಗರ್ಭಿಣಿಯಾಗಿದ್ದರೂ ಅವರು ಕರ್ತವ್ಯದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಕಳೆದ 14 ದಿನಗಳ ಹಿಂದೆ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಅವರು ತಮ್ಮ ಕರ್ತವ್ಯಕ್ಕೆ ವಾಪಸ್ಸಾಗಿದ್ದಾರೆ.
“ನಾನು ಐಎಎಸ್ ಅಧಿಕಾರಿ, ಹಾಗಾಗಿ ನನ್ನ ಸೇವೆಯ ಕಡೆಗೆ ಗಮನ ಹರಿಸುವುದು ಅಗತ್ಯವಾಗಿತ್ತು. ಕೊರೋನಾ ಕಾರಣದಿಂದಾಗಿ ನಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಜನ್ಮ ನೀಡುವ ಹಾಗೂ ಮಗುವಿನ ಆರೈಕೆ ಮಾಡುವ ಸಾಮರ್ಥ್ಯವನ್ನು ದೇವರು ಮಹಿಳೆಗೆ ನೀಡಿದ್ದಾನೆ. ಗ್ರಾಮೀಣ ಭಾಗದ ಮಹಿಳೆಯರು ಪ್ರಸವಕ್ಕೂ ಮೊದಲು ಎಲ್ಲಾ ತರನಾದ ಕ್ಲಿಷ್ಟಕರ ಕೆಲಸ ಮಾಡುತ್ತಾರೆ. ಪ್ರಸವದ ಬಳಿಕ ಮಗುವಿನ ಆರೈಕೆ ಜೊತೆಗೆ ಮನೆ ಕೆಲಸವನ್ನು ನಿರ್ವಹಿಸುತ್ತಾರೆ. ಹಾಗೆಯೇ ದೇವರ ಆಶೀರ್ವಾದದೊಂದಿಗೆ ನಾನು ಕೂಡ ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಹಾಗೂ ನನ್ನ ಮಗುವಿನ ಆರೈಕೆಯನ್ನು ಮಾಡುತ್ತಿದ್ದೇನೆ” ಎಂದಿದ್ದಾರೆ.
“ಗಾಜಿಯಾಬಾದ್ ಜಿಲ್ಲಾಡಳಿತ ನನ್ನ ಕುಟುಂಬವಿದ್ದಂತೆ, ನಾನು ಗರ್ಭಿಣಿಯಾಗಿದ್ದಾಗ ಹಾಗೂ ಪ್ರಸವದ ಬಳಿಕವೂ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ” ಎಂದು ಅವರು ಹೇಳಿಕೊಂಡಿದ್ದಾರೆ.
ಗರ್ಭಾವಸ್ಥೆ ಮತ್ತು ಪ್ರಸವದ ಬಳಿಕ ಅವರು ತೆಗೆದುಕೊಂಡ ಒಟ್ಟು ರಜೆಗಳ ಅವಧಿ ಕೇವಲ 22 ದಿನಗಳು ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.