ಮುಂಬಯಿ: ವಿದೇಶಿ ಏಜೆನ್ಸಿಯೊಂದಕ್ಕೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ನಾಸಿಕ್ ಘಟಕ)ವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನ ಉದ್ಯೋಗಿಯನ್ನು ಬಂಧಿಸಿದೆ ಎಂದು ಉನ್ನತ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಭಾರತೀಯ ಯುದ್ಧ ವಿಮಾನಗಳು ಮತ್ತು ನಾಸಿಕ್ನಲ್ಲಿನ ಉತ್ಪಾದನಾ ಸೌಲಭ್ಯಗಳ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಬಂಧಿತ ಆರೋಪಿಯು ವಿದೇಶಿ ಸಂಸ್ಥೆಗೆ ಒದಗಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕಿಸ್ಥಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನೊಂದಿಗೆ ಆತ ನಿಯಮಿತ ಸಂಪರ್ಕದಲ್ಲಿದ್ದ ಮತ್ತು ಎಚ್ಎಎಲ್ ಉತ್ಪಾದನಾ ಘಟಕ, ನಾಸಿಕ್ನಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆ ಮತ್ತು ಅದರೊಳಗಿನ ನಿಷೇಧಿತ ಪ್ರದೇಶಗಳ ಬಗ್ಗೆ ಮಾಹಿತಿ ರವಾನಿಸುತ್ತಿದ್ದ ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ.
ಅಧಿಕೃತ ರಹಸ್ಯ ಕಾಯ್ದೆ, 1923 ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐದು ಸಿಮ್ ಕಾರ್ಡ್ಗಳು ಮತ್ತು ಎರಡು ಮೆಮೊರಿ ಕಾರ್ಡ್ಗಳನ್ನು ಹೊಂದಿರುವ ಮೂರು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿಯನ್ನು ನಾಸಿಕ್ನ ವಿಶೇಷ ಎಟಿಎಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ವಿಧಿಸಿದೆ ಎಂದು ಎಟಿಎಸ್ ಡಿಐಜಿ ಜಯಂತ್ ನಾಯಕ್ನಾವ್ರೆ ತಿಳಿಸಿದ್ದಾರೆ. ಇತರರು ಭಾಗಿಯಾಗುವ ಸಾಧ್ಯತೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.