ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಇಂದು 50 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 11 ದಿನಗಳಿಂದೀಚೆಗೆ 10 ಲಕ್ಷಗಳಷ್ಟು ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರತಿನಿತ್ಯ ದೇಶದಲ್ಲಿ 90 ಸಾವಿರದಷ್ಟು ಕೊರೋನಾ ಸೋಂಕಿತರು ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವುದಾಗಿರೂ ಈ ವರದಿ ತಿಳಿಸಿದೆ. ಸಕ್ರಿಯ ಸೋಂಕಿತರ ಪ್ರಕರಣಗಳಿಗಿಂತ ಗುಣಮುಖರಾದವರ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ವೈದ್ಯಕೀಯ ಸಿಬ್ಬಂದಿಗಳ ಸಮರ್ಪಣಾ ಭಾವದ ಸೇವೆ, ಸೂಕ್ತ ಚಿಕಿತ್ಸೆ, ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಸರ್ಕಾರವೂ ಒದಗಿಸಿ ಕೊಟ್ಟಿದ್ದು ದೇಶದಲ್ಲಿ ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಸದ್ಯ ದೇಶದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ ಪ್ರಮಾಣ 82. 58% ದಷ್ಟಿರುವುದಾಗಿಯೂ ಈ ವರದಿ ಅಂಕಿ ಅಂಶಗಳನ್ನು ಬಹಿರಂಗ ಮಾಡಿದೆ. ಕಳೆದ 24 ಗಂಟೆಯಲ್ಲಿ 74 ಸಾವಿರದಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. 15.85% ದಷ್ಟು ಸಕ್ರಿಯ ಕೊರೋನಾ ಪ್ರಕರಣಗಳಿದ್ದು ಇದು ಚೇತರಿಸಿಕೊಂಡವರ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ. ಒಂದೇ ದಿನದಲ್ಲಿ 82 ಸಾವಿರಕ್ಕೂ ಅಧಿಕ ಸೋಂಕಿತರ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಕೇಂದ್ರ ಸರ್ಕಾರ, ಆರೋಗ್ಯ ಕಾರ್ಯಕರ್ತರ ಶ್ರಮದಿಂದ ಚೇತರಿಕೆಯ ಪ್ರಮಾಣ ಹೆಚ್ಚುತ್ತಿದೆ. ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವಾಲಯ ಹೇಳಿದೆ. ದೇಶದಲ್ಲಿ ಈ ವರೆಗೆ ಸುಮಾರು 7.19 ಕೋಟಿ ಜನರಿಗೆ ಕೊರೋನಾ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದೂ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.