ಬೆಳ್ತಂಗಡಿ: ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಮೇಲೆ ದೌರ್ಜನ್ಯ ಎಸಗಿದ ಗೋಪಾಲಕೃಷ್ಣ ಹಾಗೂ ಆತನ ತಂಡದವರ ಕೃತ್ಯವನ್ನು ಬೆಳ್ತಂಗಡಿ ಮಲೆಕುಡಿಯ ಸಂಘ ಗ್ರಾಮ ಸಮಿತಿ ನೆರಿಯ ಹಾಗೂ ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ತೀವ್ರವಾಗಿ ಖಂಡಿಸುತ್ತದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘದ ವತಿಯಿಂದ ಆ. 3 ರಂದು ನೆರಿಯಾದ ಅಣಿಯೂರಿನಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ನೆರಿಯ ಗ್ರಾಪಂ ಸದಸ್ಯ ಸುಧಾಕರ ಕೋಲೋಡಿ ಹಾಗೂ ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಸ್ಥಾಪಕಾಧ್ಯಕ್ಷ ಶ್ರೀಧರ ಗೌಡ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕಾಟಾಜೆಯಲ್ಲಿ 15 ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸ್ತವ್ಯವಿದ್ದರೂ ಸುಂದರ ಮಲೆಕುಡಿಯ ಹಾಗೂ ಅವರ ಮನೆಯವರ ಮೇಲೆ ಭೂ ಮಾಲಕ ಗೋಪಾಲಗೌಡ ದೌರ್ಜನ್ಯವೆಸಗಿ ಒಕ್ಕಲೆಬ್ಬಿಸುವ ತಂತ್ರವನ್ನು ರೂಪಿಸಿದ್ದಾರೆ. ಇವರ ಮೇಲೆ ಪರಿಶಿಷ್ಟ ಪಂ.ದೌರ್ಜನ್ಯ ಕಾಯಿದೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ತಲೆಮರೆಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇವೆ. ಇವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಕೋಲೋಡಿಯ ಎಲ್ಯಣ್ಣ ಮಲೆಕುಡಿಯ ಮಾತನಾಡಿ ಮಲೆಕುಡಿಯ ಸಮುದಾಯದ ಮೇಲೆ ಭೂ ಮಾಲಕರು ನಿರಂತರವಾಗಿ ದೌರ್ಜನ್ಯವೆಸಗುತ್ತಾ ಬಂದಿದ್ದಾರೆ. ಕಾಟಾಜೆ, ಪರ್ಪಳ ಪರಿಸರದ ಸುಮಾರು 40ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ರಸ್ತೆ, ನೀರು, ಕೃಷಿಗೆ ಭೂ ಮಾಲಕರು ಸಮಸ್ಯೆಯನ್ನು ಒಡ್ಡುತ್ತಾ ಬಂದಿದ್ದಾರೆ. ಮಲೆಕುಡಿಯ ಸಮುದಾಯಕ್ಕೆ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ಇಲ್ಲವಾಗಿದೆ. ದೌರ್ಜನ್ಯದ ವಿರುದ್ಧ ಪ್ರಜಾ ಚಳುವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಜಯರಾಮ ದಿಡುಪೆ ಹಾಗೂ ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ ಅಲಂಗಾಯಿ ಮಾತನಾಡಿ ಬಡವರ ಮೇಲೆ ಕೇಸು ಜಡಿಯುವ ಪೊಲೀಸರು, ಈತನ ಮೇಲೆ ದೌರ್ಜನ ನಡೆಸಿದ ಬಗ್ಗೆ ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನಮ್ಮ ಸಮಸ್ಯೆಯನ್ನು ಆಲಿಸಿ, ಅದನ್ನು ಬಗೆಹರಿಸುವ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಮಾತಿಗೆ ಮನ್ನಣೆ ಕೊಡುವುದಿಲ್ಲ. ನಮ್ಮನ್ನು ಇಲಾಖೆ ನೋಡುವ ದೃಷ್ಟಿಕೋನ ಬೇರೆ ರೀತಿಯದ್ದಾಗಿದೆ. ಇದು ಬದಲಾಗಬೇಕು ಮತ್ತು ಬಡವರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಆಗಬೇಕು ಎಂದರು.
ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ವಿಳರ್ ಸುಂದರ ಗೌಡ ಮಾತನಾಡಿ ದೌರ್ಜನ್ಯ ನಡೆಸಿದ ಈತನಿಗೆ ರಾಜಕೀಯ ಹಿನ್ನಲೆ ಇದ್ದು ಕಾನೂನಿನಿಂದ ನುಣುಚಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಬೆಳ್ತಂಗಡಿ ತಾ| ಮಲೆಕುಡಿಯ ಸಂಘದ ಗ್ರಾಮ ಸಮಿತಿ ವತಿಯಿಂದ ಆ. ೩ ರಂದು ನೆರಿಯಾದ ಅಣಿಯೂರಿನಲ್ಲಿ ನಡೆಯುವ ಪ್ರತಿಭಟನೆ ಪೂರ್ಣ ಬೆಂಬಲವಿದೆ ಎಂದರು.
ಗೌರವಾಧ್ಯಕ್ಷ ಅಣ್ಣಪ್ಪ ಎನ್, ಅಧ್ಯಕ್ಷ ಸಂಜೀವ ಮಲೆಕುಡಿಯ, ಸುಂದರ ಮಲೆಕುಡಿಯ ಅಲಂಗಾಯಿ, ನಾರಾಯಣ ಅಲಂಗಾಯಿ, ಲೋಕೇಶ್, ಜಯಾನಂದ ಸವಣಾಲು, ಉಡುಪಿ ಜಿಲ್ಲಾ ಮಲೆಕುಡಿಯ ಸಂಘಉಪಾಧ್ಯಕ್ಷರಾದ ಸುಧಾಕರ ಅಜ್ಜೋಳಿ, ಅಮಿತಾ ಗೌಡ, ಕಾರ್ಯದರ್ಶಿ ರಂಜಿತ್ ಗೌಡ, ಕೋಶಾಧಿಕಾರಿ ಸದಾಶಿವ ಗೌಡ, ಉಪ ಕಾರ್ಯದರ್ಶಿ ಸತೀಶ್ ಗೌಡ, ಸದಸ್ಯರಾದ ಮಂಜಪ್ಪ ಗೌಡ, ವಸಂತಿ ಕಬ್ಬಿನಾಲೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.