ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಅಡಿ ನಿರ್ಮಿಸಿರುವ 1.75 ಲಕ್ಷ ಮನೆಗಳ ಲೋಕಾರ್ಪಣೆ ಮತ್ತು ‘ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್ 12ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲ ಮನೆಗಳನ್ನು ಪ್ರಸಕ್ತ ಸವಾಲಿನ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಿರ್ಮಿಸಿ ಪೂರ್ಣಗೊಳಿಸಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಅವರು “2022ರೊಳಗೆ ಸರ್ವರಿಗೂ ಸೂರು” ಕಲ್ಪಿಸಲು ಕರೆ ನೀಡಿದ್ದು, ಅದಕ್ಕಾಗಿ 2016ರ ನವೆಂಬರ್ 20ರಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಪಿಎಂಎವೈ-ಜಿಗೆ ಚಾಲನೆ ನೀಡಿದ್ದರು. ಈವರೆಗೆ ದೇಶಾದ್ಯಂತ ಈ ಯೋಜನೆಯಡಿ 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 17 ಲಕ್ಷ ಬಡ ಕುಟುಂಬಗಳು ಈವರೆಗೆ ಈ ಯೋಜನೆಯ ಲಾಭ ಪಡೆದಿದ್ದಾರೆ.
ಪಿಎಂಎವೈ-ಜಿ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಶೇ.100ರಷ್ಟು ಅನುದಾನ 1.20 ಲಕ್ಷ ರೂಪಾಯಿ ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು 60:40. ಪಿಎಂಎವೈ-ಜಿ ಅಡಿಯಲ್ಲಿ ನಿರ್ಮಿಸಲಾದ ಎಲ್ಲ ಮನೆಗಳಿಗೂ ನಾಲ್ಕು ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಾನಾ ಹಂತದ ನಿರ್ಮಾಣ ಕಾರ್ಯದ ಜಿಯೋಟ್ಯಾಗ್ ಮಾಡಿರುವ ಛಾಯಾಚಿತ್ರಗಳನ್ನು ಆಧರಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆ ಅಡಿ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.