ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವಾಲಯ ಕೊರೋನಾ 4ನೇ ಹಂತದ ಅನ್ಲಾಕ್ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅನ್ಲಾಕ್ 4 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಈ ಹೊಸ ಮಾರ್ಗಸೂಚಿಯಲ್ಲಿ ಸೆ. 7 ರಿಂದ ತೊಡಗಿದಂತೆ ಮೆಟ್ರೋ ಸಂಚಾರಕ್ಕೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶಾಲಾ ಕಾಲೇಜುಗಳ ಆರಂಭದ ಕುರಿತಂತೆ ಉಂಟಾಗಿರುವ ಗೊಂದಲಗಳಿಗೂ ತೆರೆ ಎಳೆದಿರುವ ರಾಜ್ಯ ಸರ್ಕಾರ ಸೆ. 30 ರ ವರೆಗೆ ಶಾಲಾ ಕಾಲೇಜುಗಳನ್ನು ಆರಂಭ ಮಾಡುವಂತಿಲ್ಲ ಎಂದು ತಿಳಿಸಿದೆ. ಇನ್ನು ಕೊರೋನಾ ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿದಂತೆ ಉಳಿದೆಲ್ಲಾ ಪ್ರದೇಶಗಳಲ್ಲಿಯೂ ಬಹುತೇಕ ಎಲ್ಲಾ ರೀತಿಯ ವ್ಯವಹಾರಗಳನ್ನು ಆರಂಭ ಮಾಡಲು ಅನುಮತಿ ನೀಡಲಾಗಿದೆ.
ಶಾಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಸೆ. 30ರ ವರೆಗೂ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ದೂರ ಶಿಕ್ಷಣ, ಆನ್ಲೈನ್ ಕಲಿಕೆಗೆ ಅವಕಾಶ ಕಲ್ಪಿಸಿದೆ. ಇಂತಹ ಶಿಕ್ಷಣ ಕ್ರಮಕ್ಕೆ ಸಂಬಂಧಿಸಿದಂತೆ 50%ದಷ್ಟು ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಕಛೇರಿಯಿಂದಲೇ ಕಾರ್ಯ ನಿರ್ವಹಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ 9-12ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯ ಸಂದರ್ಭದಲ್ಲಿ ಸ್ವ ಇಚ್ಛೆಯ ಮೇರೆಗೆ ಶಾಲೆಗಳಿಗೆ ತೆರಳುವುದಕ್ಕೂ ಅವಕಾಶ ನೀಡಲಾಗಿದೆ. ಈ ವ್ಯವಸ್ಥೆ ಮಕ್ಕಳ ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ. ಸೆ. 21 ರಿಂದ ಜಾರಿಯಾಗುವಂತೆ ಈ ಅವಕಾಶವನ್ನು ನೀಡಲಾಗಿದೆ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಈ ಮಾರ್ಗಸೂಚಿಯಲ್ಲಿಯೂ ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಮನೊರಂಜನಾ ಪಾರ್ಕ್, ಮಲ್ಟಿಪ್ಲೆಕ್ಸ್ ಆರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ ಬಯಲು ರಂಗಮಂದಿರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿರ್ಬಂಧ ಸೆ.31 ರ ವರೆಗೂ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ಸೆ. 21 ರಿಂದ ತೊಡಗಿದಂತೆ ಸಾಮಾಜಿಕ, ರಾಜಕೀಯ, ಕ್ರೀಡಾ ಕ್ಷೇತ್ರ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ 100 ಜನರ ಪರಿಮಿತಿಗೆ ಒಳಪಟ್ಟಂತೆ ಅನುಮತಿಯನ್ನು ಈ ಗೈಡ್ಲೈನ್ನಲ್ಲಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಕೊರೋನಾ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ರಾಜ್ಯದೊಳಗೆ ಮತ್ತು ಹೊರಗೆ ಜನರಿಗೆ ಸಂಚರಿಸಲು ಮತ್ತು ಸರಕು ಸಾಗಾಟಕ್ಕೆ ಅನುಮತಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆಯೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.