ಮೈಸೂರು: ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆಕ್ಸ್ಫರ್ಡ್ ವಿವಿ ಸಂಶೋಧಿಸಿರುವ ಕೊರೋನಾ ನಿರೋಧಕ ‘ಕೋವಿಶೀಲ್ಡ್’ ಲಸಿಕೆಯನ್ನು ಐದು ಮಂದಿ ಸ್ವಯಂಸೇವಕರ ಮೇಲೆ ಎರಡನೇ ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿದೆ.
ಈ ಲಸಿಕೆಯ ಪ್ರಯೋಗಕ್ಕೆ ಬಳಸಿಕೊಂಡಿರುವ 5 ಜನರ ಆರೋಗ್ಯವೂ ಸ್ಥಿರವಾಗಿದ್ದು, ಈ ಲಸಿಕೆಯನ್ನು ಅವರ ದೇಹಕ್ಕೆ ಸೇರಿಸಿದ ಬಳಿಕ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರೀತಿಯಲ್ಲಿಯೂ ದುಷ್ಪರಿಣಾಮವೂ ಆಗಿಲ್ಲವಾದ್ದರಿಂದ ಈ ಹಂತದ ಪ್ರಯೋಗದಲ್ಲಿಯೂ ಇದು ಸಕಾರಾತ್ಮಕ ಫಲಿತಾಂಶ ಪಡೆದಿದೆ ಎಂದೇ ಹೇಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಂತದ ಪ್ರಯೋಗಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜೆಎಸ್ಎಸ್ನ ಸಮಕುಲಾಧಿಪತಿ ಬಿ. ಸುರೇಶ್, ಈ ಪ್ರಾಯೋಗಿಕ ಹಂತದ ಪರೀಕ್ಷಾ ಫಲಿತಾಂಶ ಈ ವರ್ಷದ ಡಿಸೆಂಬರ್ ವೇಳೆಗೆ ತಿಳಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೊರೋನಾ ಸೋಂಕಿಗೆ ಕಂಡುಹಿಡಿದ ಲಸಿಕೆಯ ಮೊದಲ ಮಾನವ ಪ್ರಯೋಗ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಲಸಿಕೆಯನ್ನು ಮಹಾರಾಷ್ಟ್ರದ ಪುಣೆಯ ಸೆರಂ ಸಂಸ್ಥೆಯಿಂದ ತರಲಾಗಿದ್ದು, ಈ ಲಸಿಕೆಯನ್ನು ಒಟ್ಟಾರೆ 250 ಮಂದಿ ಸ್ವಯಂಸೇವಕರ ಮೇಲೆ ನಡೆಸಿ ಫಲಿತಾಂಶ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.