ಟಿ.ಪಿ. ಕೈಲಾಸಂ ಅವರನ್ನು ಕನ್ನಡದ “ಹಾಸ್ಯ ನಾಟಕಗಳ ಪಿತಾಮಹ” ಎಂದೇ ಕರೆಯುತ್ತಾರೆ. ಅವರನ್ನು ಆಧುನಿಕ ರಂಗಭೂಮಿಯ ಜನಕ ಎಂದೂ ಕರೆಯಲಾಗುತ್ತದೆ. ಅವರು ರಂಗಭೂಮಿಗೆ ಹೊಸ ಜೀವವನ್ನು ತುಂಬಿದವರು. ಅವರ ನಾಟಕ, ಕಥೆ ಮತ್ತು ಕವನಗಳು ನಿಜಕ್ಕೂ ಅದ್ಭುತವೇ ಸರಿ.
ತ್ಯಾಗರಾಜ ಪರಮಶಿವ ಕೈಲಾಸಂ ಇದು ಟಿ.ಪಿ.ಕೈಲಾಸಂ ಅವರ ಪೂರ್ಣ ಹೆಸರು. ಜಸ್ಟಿಸ್ ಪರಮಶಿವ ಅಯ್ಯರ್ ಮತ್ತು ಕಮಲಮ್ಮನವರ ಪುತ್ರನಾಗಿ 1886 ರ ಜುಲೈ 29 ರಂದು ಜನಿಸಿದರು. ಕೈಲಾಸಂರವರು ತಮಿಳು ಮೂಲದ ಮನೆತನದಿಂದ ಬಂದವರಾಗಿದ್ದು, ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ಬೆಂಗಳೂರು, ಮೈಸೂರು, ಹಾಸನಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಮದರಾಸಿನ ಹಿಂದು ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್ ಪಾಸು ಮಾಡಿದರು. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ., ಎಂ.ಎ.ಪದವಿಗಳನ್ನು ಪಡೆದರು.
ತಂದೆಯ ಆಸೆಯಂತೆ ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ತೇರ್ಗಡೆ ಗಳಿಸಿದರಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಪಡೆದರು. ಫುಟ್ಬಾಲ್ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಕೈಲಾಸಂ ಉತ್ತಮ ಗೋಲ್ ಕೀಪರ್ ಕೂಡಾ ಆಗಿದ್ದರು.
ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕೈಲಾಸಂಗೆ ಪ್ರಸಿದ್ಧ ಲೇಖಕರಾದ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಅಪಾರ ಪ್ರಭಾವ ಬೀರಿದ್ದವು.
ಅವರು ಕೆಲವು ವರ್ಷಗಳ ಕಾಲ ಭೂಗರ್ಭ ಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದರು. ಆದರೆ ರಂಗಭೂಮಿ ಅವರನ್ನು ಆಕರ್ಷಿಸುತ್ತಿತ್ತು. ಈ ಮೊದಲೇ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಪ್ರೇರಿತರಾಗಿದ್ದ ಅವರು ಹಲವು ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ಅಲ್ಲದೇ ಅವರು ಸಾಂಪ್ರದಾಯಿಕತೆಯ ಸಂಕೋಲೆಗಳನ್ನು ದಾಟಿ ನಾಟಕದಲ್ಲಿ ಆಧುನಿಕತೆಯನ್ನು ತಂದರು. ಈ ಕಾರಣಕ್ಕಾಗಿ ಅವರು ಟೀಕೆಗೆ ಗುರಿಯಾಗಬೇಕಾಯಿತು. ಆದರೆ ಮುಂದಿನ ದಿನಗಳಲ್ಲಿ ಅವರು ಬರೆದ ‘ನಮ್ಮ ಕಂಪನಿ’ ಎಂಬ ಹಾಸ್ಯನಾಟಕ ಸಾಂಪ್ರದಾಯಿಕ ರಂಗಭೂಮಿಯನ್ನು ಅಣುಕಿಸುವಂತಿತ್ತು. ಅದೇ ಸಂದರ್ಭ ಅವರ ನಾಟಕಗಳು ಜನಮನ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂತಾದರೂ ಅವರ ನಾಟಕಗಳಿಗೆ ಜನರು ಕಿಕ್ಕಿರಿದು ಸೇರುವಂತಾಯಿತು. ಅವರ ನಾಟಕ ಜನ ಮನ ತಲುಪಿತು. ಮಂದಿನ ದಿನಗಳಲ್ಲಿ ಹಲವು ಹಾಸ್ಯ ನಾಟಕಗಳನ್ನು, ಕವನಗಳನ್ನು ಬರೆದರು.
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ.
ಈ ಕವನ ಇಂದಿಗೂ ಜನಮನದಲ್ಲಿ ಪ್ರಸಿದ್ಧಿ ಪಡೆದಿದೆ.
ಟೊಳ್ಳುಗಟ್ಟಿ ಎಂಬ ನಾಟಕ ರವೀಂದ್ರನಾಥರು ಬಂದಾಗ ಏರ್ಪಡಿಸಲಾಗಿತ್ತು. ಇದು ರಂಗಭೂಮಿಯಲ್ಲಿ ಬಹಳಷ್ಟು ಕ್ರಾಂತಿಯನ್ನೇ ಮಾಡಿತ್ತು. 1945 ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸ್ಯಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಅವರು ಭಾಗವಹಿಸಿದ್ದರು. ಆ ಸಂದರ್ಭ ಮಾಡಿದ ಭಾಷಣ ಚಿಕ್ಕ ಮತ್ತು ಚೊಕ್ಕ ಭಾಷಣ ಆಗಿದ್ದು ಬಹಳ ಮೆಚ್ಚುಗೆ ಗಳಿಸಿತ್ತು. ಅದಕ್ಕೆ ಕಾರಣ ಆವರು ಯಾವುದೇ ವಿಷಯವನ್ನು ಪದೇ ಪದೇ ಹೇಳುತ್ತಿರಲಿಲ್ಲ. ಸ್ಪಷ್ಟವಾಗಿ, ನಿಖರವಾಗಿ ಹೇಳಬೇಕಾದುದನ್ನು ಮನಮುಟ್ಟುವಂತೆ ಹೇಳುತ್ತಿದ್ದರು.
ಅವರ ಹಾಸ್ಯದ ಶೈಲಿ ಮತ್ತು ಪಾಂಡಿತ್ಯಕ್ಕೆ ಉದಾಹರಣೆ ಎಂಬಂತೆ ಒಂದು ಘಟನೆ ನಡೆಯಿತು. ಒಮ್ಮೆ ಗಾಂಧೀಜಿ ಬೆಂಗಳೂರಿಗೆ ಬಂದಿದ್ದ ಸಂದರ್ಭ ಪಿಟೀಲು ಚೌಡಯ್ಯರ ಕಛೇರಿಯನ್ನು ಏರ್ಪಡಿಸಲಾಗಿತ್ತು. ಪಿಟೀಲು ಚೌಡಯ್ಯರ ಅಪ್ರತಿಮ ವಾದನಕ್ಕೆ ಗಾಂಧೀಜೀ ಮನಸೋತು ಉತ್ತಮ ವಾದಕ. ಅವರು ಯಾರು ಎಂದರಂತೆ. ಆಗ ಪಕ್ಕದಲ್ಲೇ ಕುಳಿತಿದ್ದ ಕೈಲಾಸಂ “Oh, Bapuji, you are a great non-violinist, but this Chowdaiah is a pakka violinist!” ಎಂದರಂತೆ. ಈ ರೀತಿ ಹಾಸ್ಯವನ್ನು ಅರ್ಥಗರ್ಭಿತವಾಗಿ ಸಂದರ್ಭೋಚಿತವಾಗಿ ಹೇಗೆ ಬಳಸಬೇಕು ಎಂಬುದನ್ನು ಅವರು ಮೈಗೂಡಿಸಿಕೊಂಡಿದ್ದರು.
ಸುಮಾರು 16 ಕನ್ನಡ ನಾಟಕಗಳು, 5 ಕನ್ನಡ ಕಥೆ, 7 ಕನ್ನಡ ಕವನ, 4 ಇಂಗ್ಲೀಷ್ ನಾಟಕಗಳು, 15 ಇಂಗ್ಲೀಷ್ ಕವನಗಳನ್ನು ಟಿ. ಪಿ. ಕೈಲಾಸಂರವರು ರಚಿಸಿದ್ದಾರೆ.
ಟಿ.ಪಿ. ಕೈಲಾಸಂ ಪ್ರಖ್ಯಾತರಾದ ಪರಿ ಹೇಗಿತ್ತೆಂದರೆ “ಕರ್ನಾಟಕಕ್ಕೆ ಬಬ್ಬನೇ ಕೈಲಾಸಂ “ಎಂದು ಹೇಳಲಾಗುತ್ತದೆ. ಅಲ್ಲದೇ ಡಾ. ರಾಜ್ ಕುಮಾರ್ ಅವರ “ಆಕಸ್ಮಿಕ” ಚಿತ್ರದ ಹಾಡು “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು” ಎಂಬ ಹಾಡಿನಲ್ಲಿ “ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?”ಎಂದು ಡಾ.ರಾಜ್ ಕುಮಾರ್ ಅವರು ಕೈಲಾಸಂ ಅವರನ್ನು ಹೊಗಳಿದ ಪರಿಯಿದು.
ಕನ್ನಡ ಸಾರಸ್ವತ ಲೋಕಕ್ಕೆ ಕೈಲಾಸಂರವರ ಕೊಡುಗೆ ಅಪ್ರತಿಮ, ಅನನ್ಯ. ಇಂದು ಟಿ.ಪಿ. ಕೈಲಾಸಂ ಅವರ ಜನುಮ ದಿನ. ಹಲವರಿಗೆ ಇಂದು ಕೈಲಾಸಂ ನೆನಪಿರಲಿಕ್ಕಿಲ್ಲ. ಆದರೆ ಬಹಳಷ್ಟು ಜನರು ಟಿ.ಪಿ. ಕೈಲಾಸಂ ನಾಟಕ ಮತ್ತು ಕವನಗಳನ್ನು ಇಂದಿಗೂ ಇಷ್ಟ ಪಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.