ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿದ್ದ ಎಂಬ ಆರೋಪದ ಮೇಲೆ ಬೆಂಗಳೂರಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗಷ್ಟೇ ತನ್ನ ಅಂತಿಮ ಪರೀಕ್ಷೆಗಳನ್ನು ಮುಗಿಸಿದ್ದ. ಬೆಂಗಳೂರಿನಲ್ಲಿ ತನ್ನ ಪೋಷಕರ ಜೊತೆಗೆ ವಾಸಿಸುತ್ತಿದ್ದ ಈತನನ್ನು ಮನೆಗೇ ದಾಳಿ ನಡೆಸಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಇಸಿಸ್ ಸಂಘಟನೆಗೆ ವೈದ್ಯಕೀಯ ನೆರವು, ಇಸಿಸ್ ಉಪ ಸಂಘಟನೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2014 ರಲ್ಲಿ ಸಿರಿಯಾದಲ್ಲಿ ನಡೆದಿದ್ದ ಇಸಿಸ್ ಕ್ಯಾಂಪ್ಗೆ ತೆರಳಿ ಹತ್ತು ದಿನ ಉಳಿದುಕೊಂಡು ಉಗ್ರಗಾಮಿಗಳಿಗೆ ಈತ ಚಿಕಿತ್ಸೆ ನೀಡಿದ್ದಾಗಿಯೂ ತಿಳಿದು ಬಂದಿದೆ. ಆರೋಪಿಯಿಂದ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ಉಗ್ರರಿಗೆ ನೆರವಾಗಲು ಈತ ವೈದ್ಯಕೀಯ ಆ್ಯಪ್ ಒಂದನ್ನು ತಯಾರಿಸುತ್ತಿದ್ದ ಎಂಬುದಾಗಿಯೂ ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿಗೆ ಕಾಶ್ಮೀರದ ಉಗ್ರ ಜಹನ್ಚೈಬ್ ವಾನಿ ಜೊತೆಗೂ ಸಂಪರ್ಕ ಇರುವುದಾಗಿ ಈತ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ
ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದ ಈತ, ಅದೇ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಎಂ.ಎಸ್. ಅಧ್ಯಯನ ನಡೆಸುತ್ತಿದ್ದ. ಅಂತಿಮ ಪರೀಕ್ಷೆಯನ್ನೂ ಬರೆದಿದ್ದಾನೆ. ಆದರೆ ಆತನ ಕಾಲೇಜಿನ ಹೊರತಾದ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಆರೋಪಿ ಅಧ್ಯಯನ ನಡೆಸಿರುವ ಕಾಲೇಜಿನ ಆಡಳಿತ ಮಾಹಿತಿ ನೀಡಿದೆ. ಅಬ್ದುಲ್ ರೆಹಮಾನ್ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಬಳಿಕ ಇದೀಗ ಎನ್ಐಎ ವಶಕ್ಕೆ ತೆಗೆದುಕೊಂಡು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.