ಕಾರ್ಕಳ: ನಿಟ್ಟೆ ಮಹಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆಯ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗವು ತಾಂತ್ರಿಕ ವಿದ್ಯಾಭ್ಯಾಸ ಗುಣಮಟ್ಟ ಸುಧಾರಣಾ ಕಾರ್ಯಕ್ರಮ- ಭಾಗ 2 (TEQIP-2) ರ ಆಶ್ರಯದಲ್ಲಿ ವಿದ್ಯುತ್ತೀಯ ಅಭಿಯಂತರಿಕೆಯಲ್ಲಿನ ಮುನ್ನಡೆಯ ಬಗ್ಗೆ ವಿಮರ್ಶಿಸಲು ಆಯೋಜಿಸಿದ್ದ ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದ ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷರು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳು ಆಗಿರುವ ಶ್ರೀ ಎನ್. ವಿನಯ ಹೆಗ್ಡೆಯವರು ಇಂದಿನ ಪರಿಸ್ಥಿತಿಯಲ್ಲಿ ವಿದ್ಯುಚ್ಛಕ್ತಿಯ ಸಂಗ್ರಹಣೆ ಮತ್ತು ಸಮರ್ಪಕ ಉಪಯೋಗ ಅತಿ ಅಗತ್ಯ ಎಂದು ಅಭಿಪ್ರಾಯಪಟ್ಟರು. ದೇಶದ ಆರ್ಥಿಕ ಪ್ರಗತಿಗೆ ಅಂತರ್ವಿಭಾಗಿಯ ಅಭಿಯಂತರರು ಕೈಜೋಡಿಸಿ “ಸ್ಮಾರ್ಟ್ ಗ್ರಿಡ್ ಮತ್ತು ವಿದ್ಯುಚ್ಛಕ್ತಿಯ ಸಂಗ್ರಹಣಾ ವ್ಯವಸ್ಥೆ’ ಯಂತಹ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಬೇಕು ಎಂದು ಸಂಶೋಧಕರಿಗೆ ಕರೆಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ, ಸುರತ್ಕಲ್ ನ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗದ ಉಪನ್ಯಾಸಕರಾಗಿರುವ ಡಾ. ಕೆ. ಪಾಂಡುರಂಗ ವಿಠ್ಠಲ್ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು . ಈ ವಿಚಾರಸಂಕಿರಣದಲ್ಲಿ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ೬೦ ಕ್ಕೂ ಹೆಚ್ಚು ಸಶೋಧಕರು ತಮ್ಮ ಅನಿಸಿಕೆಯನ್ನು ಮಂಡಿಸಿದರು ಎಂದು ಕಾಲೇಜಿನ ಪ್ರಾಂಶುಪಾಲರ ಕಛೇರಿಯ ಪತ್ರಿಕಾ ವರದಿ ತಿಳಿಸಿದೆ.
ದಿಕ್ಶೂಚಿ ಭಾಷಣದಲ್ಲಿ ಡಾ. ವಿಠ್ಠಲ್, ವಿದ್ಯುಚ್ಛಕ್ತಿಯ ಸಮರ್ಪಕ ಬಳಕೆಗೆ ಆಧುನೀಕೃತ ಯಾಂತ್ರಿಕ ವಿದ್ಯುದ್ವಿತರಣಾ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿದರು. ವಿದ್ಯುದ್ವಿತರಣೆ ಮತ್ತು ಸಂಗ್ರಹಣಾ ವ್ಯವಸ್ಥೆಯ ಪ್ರಾಥಮಿಕ ವ್ಯವಸ್ಥೆಯ ಅಗತ್ಯವನ್ನು ಸಂಶೋಧಕರು ಮನಗಂಡು ಅತಿ ಹೆಚ್ಚು ವಿದ್ಯುಚ್ಛಕಿ ಬಳಕೆಯ ಸಮಯ ಹಾಗೂ ಸಂಗ್ರಹಣೆಯಂತಹ ವಿಷಯಗಳ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಸಂಯೋಜಕರಾದ ವಾಸುದೇವ ಶೆಟ್ಟಿಗಾರ್ ವಿಚಾರ ಸಂಕಿರಣದ ಬಗ್ಗೆ ಮಾಹಿತಿ ನೀಡಿದರು. ವಿಭಾಗ ಮುಖ್ಯಸ್ಥ ಡಾ. ನಾಗೇಶ್ ಪ್ರಭು ಅತಿಥಿಗಳ ಪರಿಚಯಿಸಿದರು. ಉಪ ಉಪನ್ಯಾಸಕಿ ಸಿಫ್ಹಾ ಕ್ರೆಸಿಲ್ ಸಾಲ್ದಾನಾ ಕಾರ್ಯಕ್ರಮವನ್ನು ನಿರೂಪಿಸಿ, ದಿನೇಶ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.