ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷವೂ ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಯೋಜಿಸಲ್ಪಡುತ್ತಿದ್ದ ಪ್ರಸಿದ್ಧ ಫ್ಲವರ್ ಶೋ ಈ ಬಾರಿ ನಡೆಯುವುದಿಲ್ಲ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕೊರೋನಾ ಮಹಾಮಾರಿ ರಾಜ್ಯದಲ್ಲಿಯೂ ತೀವ್ರವಾಗಿ ಹರಡುತ್ತಿದ್ದು, ಇದರಿಂದಾಗಿ ಪ್ರತಿವರ್ಷ ಆಗಸ್ಟ್ 9 ರಿಂದಲೇ ಆರಂಭವಾಗುತ್ತಿದ್ದ ಫ್ಲವರ್ ಶೋ ವನ್ನು ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 2019 ರಲ್ಲಿ ನಡೆಸಲಾದ ಫ್ಲವರ್ ಶೋ ದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಗೌರವ ಸಲ್ಲಿಸಲಾಗಿತ್ತು. ಅದರಂತೆ ಈ ಬಾರಿ ಸ್ವಾಮಿ ವಿವೇಕಾನಂದರಿಗೆ ಈ ಪುಷ್ಪ ಪ್ರದರ್ಶನದಲ್ಲಿ ಗೌರವ ಸಲ್ಲಿಸುವ ಕುರಿತಂತೆ ಯೋಜನೆಗಳಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಈ ಬಾರಿ ಈ ಪ್ರದರ್ಶನವನ್ನೇ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
1912 ರಲ್ಲಿ ಈ ಪುಷ್ಪ ಪ್ರದರ್ಶನವನ್ನು ಆರಂಭ ಮಾಡಲಾಗಿದ್ದು, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹೊರತುಪಡಿಸಿ ಉಳಿದಂತೆ ಪ್ರತಿ ವರ್ಷವೂ ಇದನ್ನು ನಡೆಸಿಕೊಂಡು ಬರಲಾಗಿದೆ. ಲಕ್ಷಾಂತರ ಪ್ರವಾಸಿಗರನ್ನು ಆರ್ಷಿಸುವ ಈ ಫ್ಲವರ್ ಶೋ ಸ್ವಾತಂತ್ರ್ಯದ ಬಳಿಕದ ವರ್ಷದಲ್ಲಿ ಇದೇ ಮೊದಲ ಬಾರಿಗೆ ರದ್ದಾಗುತ್ತಿರುವುದು ಎಂದೂ ಆಯೋಜಕರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮ ನಡೆಸಲು ಆಯೋಜಕರಿಗೆ ಕನಿಷ್ಠ 3 ತಿಂಗಳಾದರೂ ಸಮಯ ಬೇಕು. ಆದರೆ ಈ ಬಾರಿ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಪ್ರದರ್ಶನದ ಕುರಿತಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ನಡೆಯಬೇಕಿದ್ದ ಪುಷ್ಪ ಪ್ರದರ್ಶನ ರದ್ದಾಗಿದೆ ಎಂದೂ ಆಯೋಜಕರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.