ಶ್ರೀನಗರ: ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಲಡಾಖ್ ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಗಲಭೆ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾದ 100 ಕ್ಕೂ ಅಧಿಕ ಆ್ಯಪ್ಗಳಿಗೆ ನಿಷೇಧ ಹೇರಿದೆ. ಇದರಲ್ಲಿ ಫೈಲ್ ಶೇರಿಂಗ್ ಆ್ಯಪ್ ಶೇರ್ಇಟ್ ಸಹ ಸೇರಿದ್ದು, ಈ ಆ್ಯಪ್ಗೆ ಪರ್ಯಾಯವಾಗಿ ಜಮ್ಮು ಕಾಶ್ಮೀರದ ರಜೌರಿಯ 17 ವರ್ಷದ ಹುಡುಗ ಅಷ್ಫಾಕ್ ಮೆಹಮೂದ್ ಡೊಡೊ ಡ್ರಾಪ್ ಅಭಿವೃದ್ಧಿ ಮಾಡಿದ್ದಾರೆ.
ಈ ಹೊಸ ಆ್ಯಪ್ ಯಾವುದೇ ಇಂಟರ್ನೆಟ್ ಸಹಾಯವಿಲ್ಲದೆ ಎರಡು ಡಿವೈಸ್ಗಳ ನಡುವೆ ಚಿತ್ರಗಳು, ಆಡಿಯೋ, ವಿಡಿಯೋ ಮೊದಲಾದವುಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡಲಿರುವುದಾಗಿ ಅಷ್ಫಾಕ್ ತಿಳಿಸಿದ್ದಾರೆ. ಭಾರತದಲ್ಲಿ ಶೇರ್ಇಟ್ ಸೇರಿದಂತೆ ಹಲವು ಚೀನಾದ ಆ್ಯಪ್ಗಳನ್ನು ನಿಷೇಧ ಮಾಡಲಾಗಿದೆ. ಇದರಿಂದಾಗಿ ಜನರಿಗೆ ಫೈಲ್, ಡಾಕ್ಯುಮೆಂಟ್ ಸೇರಿದಂತೆ ಇನ್ನಿತರ ವಿಚಾರಗಳನ್ನು ಸುಲಭವಾಗಿ ಹಂಚಿಕೊಳ್ಳುವುದಕ್ಕೆ ಪೂರಕವಾಗುವಂತೆ ತಾನು ಡೊಡೊ ಡ್ರಾಪ್ ಅಭಿವೃದ್ಧಿ ಮಾಡಿದ್ದಾಗಿ ತಿಳಿಸಿದ್ದಾರೆ.
ಈ ಅಪ್ಲಿಕೇಶನ್ ಅನ್ನು ತಯಾರಿಸಲು ನಾಲ್ಕು ವಾರಗಳು ಹಿಡಿದಿದ್ದು, ಇದು ಶೇರ್ಇಟ್ ಗಿಂತ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸಲಿದೆ. ಇದೇ ಆಗಸ್ಟ್ 1 ರಂದು ಇದನ್ನು ಬಳಕೆಗೆ ತರಲಾಗಿದ್ದು, 480 ಎಂಬಿಪಿಎಸ್ ವರೆಗಿನ ಡೇಟಾ ವನ್ನು ವರ್ಗಾಯಿಸುವ ಸಾಮರ್ಥ್ಯ ಹೊಂದಿದೆ ಎಂದೂ ತಿಳಿಸಿದ್ದಾರೆ. ಇದರಲ್ಲಿ ಡೇಟಾ ವರ್ಗಾಯಿಸುವುದು ಹೆಚ್ಚು ಸುರಕ್ಷಿತ ಮತ್ತು ಎನ್ಕ್ರಿಪ್ಟೆಡ್ ಆಗಿರಲಿದೆ ಎಂದೂ ಅಷ್ಫಾಕ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರು ವಿದೇಶಿ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಸ್ವದೇಶೀ ಮೂಲದ ಅಪ್ಲಿಕೇಶನ್, ವಸ್ತುಗಳತ್ತ ಗಮನ ಹರಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆ ನೀಡಿದ್ದು, ಇದಕ್ಕೆ ಪೂರಕ ಅವಕಾಶಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ಪ್ರೇರಣೆ ಪಡೆದ ಅಷ್ಫಾಕ್ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಮಗನ ಸಾಧನೆಯ ಬಗ್ಗೆ ಮಾತನಾಡಿರುವ ಫರ್ವೇಜ್ ಅಹ್ಮದ್ ಚೌಧರಿ, ಅವನು ತನ್ನ ಯೋಜನೆಗಳಿಗೆ ಕಾರ್ಯರೂಪ ಕೊಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾನೆ. ಅವನ ಇಂತಹ ಕೆಲಸಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಚೀನಾದ ಹಲವಾರು ಆ್ಯಪ್ಗಳಿಗೆ ಕೇಂದ್ರ ಸರ್ಕಾರ ಹೇರಿದ ನಿಷೇಧದ ಕಾರಣದಿಂದಾಗಿ ಭಾರತದಲ್ಲಿ ಇಂತಹ ಹಲವಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸ್ವದೇಶೀ ನಿರ್ಮಿತ ಆ್ಯಪ್, ವಸ್ತುಗಳನ್ನು ತಯಾರಿಸುವಲ್ಲಿ ಭಾರತದ ಯುವ ಜನರು ಮುಂದೆ ಬರುವಂತಾಗಿದ್ದು, ಆ ಮೂಲಕ ಮೋದಿ ಕನಸಿನ ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.