ನವದೆಹಲಿ: ರಕ್ಷಾಬಂಧನದ ಸಂಭ್ರಮ ದೇಶದಾದ್ಯಂತ ಮನೆಮಾಡಿದೆ. ಆದರೆ ಈ ಬಾರಿ ಆತ್ಮ ನಿರ್ಭರ ಭಾರತದ ಆಶಯಕ್ಕೆ ಅನುಗುಣವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬುದು ವಿಶೇಷ. ಪ್ರತಿವರ್ಷ ರಕ್ಷಾ ಬಂಧನ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಚೀನಿ ರಕ್ಷಾಬಂಧನಗಳದ್ದೇ ಕಾರುಬಾರು. ಆದರೆ ಈ ಬಾರಿ ವ್ಯಾಪಾರಿಗಳು ಮತ್ತು ಗ್ರಾಹಕರು ಚೀನಿ ರಕ್ಷಾಬಂಧನ ಮಾರಾಟ ಮತ್ತು ಖರೀದಿಯಿಂದ ದೂರವಾಗಿದ್ದಾರೆ. ಬದಲಾಗಿ ಸ್ವದೇಶಿ ರಾಖಿಗಳತ್ತ ಹೆಚ್ಚು ಆಸಕ್ತಿ ತೋರಿದ್ದಾರೆ.
ಈ ಬಾರಿಯ ರಕ್ಷಾಬಂಧನ ಚೀನಾಗೆ 4000 ಕೋಟಿ ರೂಪಾಯಿಗಳ ನಷ್ಟವನ್ನು ತಂದುಕೊಟ್ಟಿದೆ. ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಪೂರ್ಣ ಭಾರತೀಯವಾಗಿ ರಕ್ಷಾಬಂಧನವನ್ನು ಆಚರಿಸುವಂತೆ ನೀಡಿದ ಕರೆ ಯಶಸ್ವಿಯಾಗಿದೆ.
ಈ ವರ್ಷ ದೇಶದಾದ್ಯಂತ ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಹಯೋಗದೊಂದಿಗೆ ಒಂದು ಕೋಟಿ ರಾಖಿಗಳನ್ನು ತಯಾರು ಮಾಡಲಾಗಿದೆ. ಇದಕ್ಕೆ ಸಂಪೂರ್ಣವಾಗಿ ಭಾರತೀಯ ಕಚ್ಛಾವಸ್ತುಗಳನ್ನು ಬಳಕೆ ಮಾಡಲಾಗಿದೆ. ಮಹಿಳೆಯರು ಮನೆಗಳಲ್ಲಿ, ಅಂಗನವಾಡಿಗಳಲ್ಲಿ, ವಾಣಿಜ್ಯ ವಲಯಗಳಲ್ಲಿ ಈ ರಾಖಿಗಳನ್ನು ತಯಾರಿಸಿದ್ದಾರೆ.
ಭಾರತೀಯ ಕಚ್ಛಾವಸ್ತುಗಳಿಂದ ವೈವಿಧ್ಯಮಯ ರಾಖಿಗಳನ್ನು ತಯಾರು ಮಾಡಲಾಗಿದೆ. ಈ ವರ್ಷ ಒಂದೇ ಒಂದು ರಾಖಿ ಕೂಡ ಚೀನಾದಿಂದ ಆಮದುಗೊಂಡಿಲ್ಲ ಎಂಬುದು ವಿಶೇಷ.
ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರ್ತೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರ ಪ್ರಕಾರ, ಪ್ರತಿವರ್ಷ ದೇಶದಾದ್ಯಂತ ಸುಮಾರು 50 ಕೋಟಿ ರಾಖಿಗಳು ಮಾರಾಟವಾಗುತ್ತವೆ. ಇವುಗಳ ಮೊತ್ತ ಸುಮಾರು ಆರು ಸಾವಿರ ಕೋಟಿ ರೂಪಾಯಿ ಆಗಿರುತ್ತದೆ. ಇದರಲ್ಲಿ ಸುಮಾರು 4000 ಕೋಟಿ ರೂಪಾಯಿಗಳ ರಾಖಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದಿದ್ದಾರೆ.
ಆದರೆ ಈ ಬಾರಿ ಸ್ವದೇಶಿ ರಾಖಿಗಳು ಚೀನಾ ರಾಖಿಗಳನ್ನು ಹೊಡೆದೋಡಿಸಿವೆ. ಆ ದೇಶಕ್ಕೆ ನಂಬಲಾಗದಂತ ಹೊಡೆತ ನೀಡಿವೆ.
ಸಂಪೂರ್ಣವಾಗಿ ಚೀನಾವನ್ನು ಭಾರತದಿಂದ ಬಹಿಷ್ಕರಿಸುವ ಸಲುವಾಗಿ ಆಗಸ್ಟ್ 9ರಂದು ದೇಶದಾದ್ಯಂತದ ವ್ಯಾಪಾರಿಗಳು ‘ಚೀನಾ ಕ್ವಿಟ್ ಇಂಡಿಯಾ’ ಅಭಿಯಾನವನ್ನು ನಡೆಸಲಿದ್ದಾರೆ ಎಂಬುದಾಗಿ ಭಾರ್ತೀಯ ಅವರು ಹೇಳಿದ್ದಾರೆ.
ದೇಶದ ಸುಮಾರು 800 ಸ್ಥಳಗಳಲ್ಲಿ ವ್ಯಾಪಾರಿಗಳು ಒಟ್ಟುಗೂಡಿ, ಚೀನಾ ಕ್ವಿಟ್ ಇಂಡಿಯಾ ಎಂದು ಘೋಷಣೆ ಕೂಗಲಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.