ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಯೋಚಿಸುವಾಗ, ದೇಶವನ್ನು ಬ್ರಿಟಿಷರ ಕೈಯಿಂದ ರಕ್ಷಿಸಿಕೊಳ್ಳಲು ಹೋರಾಡಿದ ಅದೆಷ್ಟೋ ಮಹನೀಯರು ನಮಗೆ ನೆನಪಾಗುತ್ತಾರೆ. ಅಂತಹ ಭಾರತ ಮಾತೆಯ ಧೀರ ಪುತ್ರರ ಸಾಲಿನಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರೂ ಒಬ್ಬರು. ಅದೆಷ್ಟೋ ದೇಶಭಕ್ತರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿರುವ ತಿಲಕರು ‘ ಹಿಂದೂ ರಾಷ್ಟ್ರೀಯವಾದದ ಪಿತಾಮಹ’ ಎಂದೂ ಖ್ಯಾತ ನಾಮರಾಗಿದ್ದಾರೆ.
‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬುದಾಗಿ ಘರ್ಜಿಸಿ, ಭಾರತವನ್ನು ತಮ್ಮ ಕೈಯೊಳಗಿಟ್ಟುಕೊಂಡು ಆಟವಾಡಿಸುತ್ತಿದ್ದ ಬ್ರಿಟಿಷರ ಎದುರು ತೊಡೆ ತಟ್ಟಿ ಪಡೆಯನ್ನು ಕಟ್ಟಿದವರು ತಿಲಕರು. ಲೋಕಮಾನ್ಯ ಎಂದೇ ಜನಪ್ರಿಯರಾಗಿರುವ ತಿಲಕರು ಜನಿಸಿದ್ದು 23-7-1856 ರ ಮಹಾರಾಷ್ಟ್ರದ ರತ್ನಗಿರಿಯ ಸಾಮಾನ್ಯ ಕುಟುಂಬವೊಂದರಲ್ಲಿ. ಅವರು ಗಣಿತದಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು. ಶಿಕ್ಷಣದ ಬಳಿಕ ಪುಣೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಗಣಿತದ ಅಧ್ಯಾಪನ ವೃತ್ತಿಯನ್ನು ಆರಂಭ ಮಾಡಿದರು. ಆ ಬಳಿಕ ಪತ್ರಕರ್ತರಾದರು.
ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಳ್ಳದ ತಿಲಕರು, ಭಾರತೀಯ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಲು ಯುವಕರಿಗೆ ಪ್ರೋತ್ಸಾಹಿಸಿದರು. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಅವಹೇಳನ ಮಾಡುತ್ತದೆ, ಕೀಳು ಮಟ್ಟದಲ್ಲಿ ಕಾಣುತ್ತದೆ ಎಂದು ಅವರು ನಂಬಿದ್ದರು. ಮತ್ತು ಆ ಪದ್ಧತಿಯನ್ನು ಕಠುವಾಗಿ ಟೀಕಿಸುವ ನಾಯಕರ ಸಾಲಿನಲ್ಲಿ ಇವರೂ ಒಬ್ಬರಾಗಿದ್ದವರು. ಇತಿಹಾಸ, ಸಂಸ್ಕೃತ, ಗಣಿತ, ಖಗೋಳ ಶಾಸ್ತ್ರದ ಜೊತೆಗೆ ಹಿಂದೂ ಧರ್ಮದ ಹಲವು ವಿಚಾರಗಳಲ್ಲಿಯೂ ತಿಲಕರು ಪರಿಣಿತಿಯನ್ನು ಪಡೆದುಕೊಂಡಿದ್ದರು. ಅದ್ವೈತ ತತ್ವದ ಮೇಲೆ ನಂಬಿಕೆ ಹೊಂದಿದ್ದ ಇವರು, ಜ್ಞಾನದಿಂದ ಮಾತ್ರವೇ ಮುಕ್ತಿ ಪಡೆಯುವುದು ಸಾಧ್ಯ ಎಂದು ನಂಬಿಕೆ ಇರಿಸಿದ್ದವರು. ಅದಕ್ಕೆ ಪೂರಕವಾಗಿ ಕರ್ಮಯೋಗವನ್ನು ಅನುಸರಿಸುವ ಮೂಲಕ ಜ್ಞಾನಾರ್ಜನೆಯ ಹಾದಿಯನ್ನು ಕಂಡುಕೊಂಡಿದ್ದರು.
ಮದ್ಯಪಾನ ನಿಷೇಧ, ಶಿಕ್ಷಣ, ರಾಜಕೀಯ ವಿಚಾರಗಳಲ್ಲಿ ತಿಲಕರಿಗೆ ಅಪಾರವಾದ ಒಲವಿತ್ತು. ‘ದೇವನಾಗರಿ’ ಲಿಪಿಯಲ್ಲಿನ ‘ಹಿಂದಿ’ ಭಾಷೆ ದೇಶದ ರಾಷ್ಟ್ರೀಯ ಭಾಷೆಯಾಗಬೇಕು ಎಂಬುದನ್ನು ಮೊದಲು ಹೇಳಿದವರೇ ಲೋಕಮಾನ್ಯ ತಿಲಕರು. ಜೊತೆಗೆ ಭಾರತದಿಂದ ಇಂಗ್ಲಿಷ್ ಭಾಷೆ ಸಂಪೂರ್ಣವಾಗಿ ತೊಲಗಬೇಕು ಎಂಬ ಅಪರಿಮಿತ ಆಸೆಯನ್ನೂ ತಿಲಕರು ಹೊಂದಿದ್ದರು. ತಮ್ಮ ತಾತ್ವಿಕತೆಗಳ ಮೇಲೆ, ತಮ್ಮ ನಂಬಿಕೆಗಳ ಮೇಲೆ ಅಪರಿಮಿತ ಪಾಂಡಿತ್ಯವನ್ನೂ ಇವರು ಹೊಂದಿದ್ದರು.
ಗಣೇಶೋತ್ಸವ ಮತ್ತು ತಿಲಕರು:
ಸಾರ್ವಜನಿಕ ಗಣೇಶೋತ್ಸವ ಎಂಬುದು ಇಂದಿಗೂ ಭಾರತದ ಸಮಾಜದಲ್ಲಿ ಆಚರಿಸಿಕೊಂಡು ಬರುವಂತಹ ಒಂದು ಹಬ್ಬ. ಮೇಲು ಕೀಳುಗಳ ಭಾವವಿಲ್ಲದೆಯೇ, ಜಾತಿ, ಧರ್ಮದ ಹಂಗಿಲ್ಲದೆಯೇ ಆಚರಿಸಲ್ಪಡುವ ಚೌತಿ(ಚತುರ್ಥಿ)ಗೂ ತಿಲಕರಿಗೂ ಸಂಬಂಧವಿದೆ.
ಸ್ವಾತಂತ್ರ್ಯಕ್ಕಾಗಿ ಭಾರತ ಬ್ರಿಟಿಷರ ಜೊತೆಗೆ ಹೋರಾಟ ನಡೆಸುತ್ತಿದ್ದ ಆ ದಿನಗಳಲ್ಲಿ, ಅದ್ದೂರಿಯಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾರತೀಯರನ್ನು ಒಟ್ಟುಗೂಡಿಸಿ ಗಣೇಶ ಹಬ್ಬ ಚೌತಿಯ ಆಚರಣೆಗೆ ಆರಂಭ ನೀಡಿದ ಖ್ಯಾತಿ ತಿಲಕರದ್ದು. ಆ ಮೂಲಕ ಜನರಲ್ಲಿ ಧಾರ್ಮಿಕ ಶ್ರದ್ಧೆಯ ಜೊತೆಗೆ, ದೇಶಪ್ರೇಮದ, ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ, ಅದೆಷ್ಟೋ ಜನರು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಭಾಗವಹಿಸುವಂತೆ ಶಕ್ತಿ ತುಂಬಿದ ಪ್ರೇರೇಪಣಾ ಶಕ್ತಿ ತಿಲಕರು ಎಂದರೂ ತಪ್ಪಾಗಲಾರದು.
ದೇಶವನ್ನು ಸ್ವತಂತ್ರಗೊಳಿಸಲು ಭಾರತೀಯರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆ ಕಾಲದಲ್ಲಿ ಆರಂಭವಾದ ಗಣೇಶ ಚತುರ್ಥಿ ದೇಶದೆಲ್ಲೆಡೆ ಇಂದಿಗೂ ಆಚರಣೆಯಲ್ಲಿದ್ದು, ಆ ಮೂಲಕವೂ ತಿಲಕರನ್ನು, ಅವರ ಒಗ್ಗಟ್ಟಿನ ವಿಚಾರಧಾರೆಯನ್ನು ಭಾರತೀಯರಾದ ನಾವೆಲ್ಲರೂ ಇಂದಿಗೂ ಗೌರವಿಸಿಕೊಂಡೇ ಬಂದಿದ್ದೇವೆ. ಆ ಸಂದರ್ಭದಲ್ಲಿ ತಿಲಕರ ಕಾರಣದಿಂದ ಜನಸಾಮಾನ್ಯರು ಮತ್ತು ನಾಯಕರ ನಡುವಿನ ಸಂವಹನದ ಕೊಂಡಿಯಾಗಿ ಚೌತಿ ಹಬ್ಬ ಮಹತ್ವದ ಪಾತ್ರ ವಹಿಸಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ.
ತಿಲಕರ ಬಗ್ಗೆ ತಿಳಿದುಕೊಳ್ಳುವಾಗ ಗಮನಿಸಲೇ ಬೇಕಾದ ಮುಖ್ಯ ಅಂಶವೆಂದರೆ ವಿದೇಶೀ ವಸ್ತುಗಳ ಬಹಿಷ್ಕಾರ. ದೇಶ ಸ್ವತಂತ್ರವಾಗಿ ಎದ್ದು ನಿಲ್ಲಬೇಕಾದರೆ ಸ್ವಾಭಿಮಾನ, ಆರ್ಥಿಕತೆ ಜೊತೆಗೆ ಇನ್ನಿತರ ಅಂಶಗಳು ಪ್ರಮುಖವಾಗುತ್ತವೆ. ನಮ್ಮಲ್ಲಿರುವ ಉತ್ಪನ್ನಗಳನ್ನೇ ಬಳಸಿ ವಸ್ತುಗಳನ್ನು ಸಿದ್ಧಪಡಿಸಿ, ಅವುಗಳನ್ನೇ ಬಳಕೆ ಮಾಡಿದರೆ ದೇಶ ಸ್ವಾವಲಂಬಿ ರಾಷ್ಟ್ರವಾಗುತ್ತದೆ. ಪರದೇಶದ ಅವಲಂಬನೆ ತಪ್ಪುತ್ತದೆ. ನಮ್ಮ ದೇಶದ ಕಚ್ಛಾವಸ್ತುಗಳನ್ನು ಬಳಸಿ, ಬ್ರಿಟಿಷರು ಅವರ ದೇಶದಲ್ಲಿ ವಸ್ತುಗಳನ್ನು ಸಿದ್ಧಪಡಿಸಿ ಬಳಿಕ ಆ ವಸ್ತುಗಳನ್ನು ಭಾರತೀಯರಿಗೇ ಮಾರಾಟ ಮಾಡುವ ಪದ್ಧತಿ ಇತ್ತು. ಇದರಿಂದಾಗಿ ದೇಶದ ಸಂಪನ್ಮೂಲ ನಮ್ಮ ದೇಶವನ್ನು ಬಿಟ್ಟು ಹೊರಹೋಗುವುದನ್ನು ಮನಗಂಡ ಅವರು ವಿದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡಿದರು. ಈ ಒಂದು ಕರೆ ಕೋಟ್ಯಂತರ ಭಾರತೀಯ ಮನಗಳಲ್ಲಿ ದೇಶಭಕ್ತಿಯನ್ನು, ಸ್ವಾಭಿಮಾನವನ್ನು ಬಡಿದೆಬ್ಬಿಸುವ ಕೆಲಸವನ್ನು ಆ ಕಾಲದಲ್ಲಿ ಮಾಡಿತ್ತು.
ಇಂದಿಗೂ ನಮ್ಮ ಸಮಾಜದ ಸ್ಥಿತಿ ಹಾಗೆಯೇ ಇದೆ. ಸ್ವದೇಶೀ ವಸ್ತುಗಳ ತಯಾರಿಕೆ, ಬಳಕೆಗಿಂತ ವಿದೇಶಿ ವಸ್ತುಗಳ ಮೇಲೆಯೇ ವ್ಯಾಮೋಹ ಹೆಚ್ಚಿಸಿಕೊಂಡವರು ನಮ್ಮಲ್ಲಿ ಹೆಚ್ಚಿನವರು. ಇದರಿಂದಾಗಿ ದೇಶದ ಆರ್ಥಿಕತೆ, ಸಂಪನ್ಮೂಲದ ಜೊತೆಗೆ ಭಾರತದ ಅಸಂಖ್ಯಾತ ಪ್ರತಿಭೆಗಳು ಬೇರೆ ರಾಷ್ಟ್ರಕ್ಕಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮಲ್ಲಿ ಪೂರಕವಾದ ವ್ಯವಸ್ಥೆಗಳಿದ್ದರೂ ಅದನ್ನು ಬಳಸಿಕೊಳ್ಳದೆ ವಿದೇಶೀ ನಿರ್ಮಿತ ವಸ್ತುಗಳ ಕಡೆಗೆ ಹೆಚ್ಚು ಆಕರ್ಷಣೆಗೊಳಗಾದವರು ಭಾರತೀಯರು. ಇದನ್ನು ಮನಗಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ ಕೊರೋನಾ ಸಂಕಷ್ಟದ ಅವಧಿಯನ್ನು ಸ್ವದೇಶೀ, ಸ್ವಾವಲಂಬಿ ಆತ್ಮನಿರ್ಭರ ಭಾರತದ ಅಭ್ಯುದಯಕ್ಕಾಗಿ ಬಳಸಿಕೊಂಡಿರುವುದು ಸ್ವಾಗತಾರ್ಹ. ಅಂದು ತಿಲಕರು ಕಂಡ ವಿದೇಶಿ ವಸ್ತುಗಳ ಬಹಿಷ್ಕಾರ ಇಂದು ಮತ್ತೊಂದು ರೂಪದಲ್ಲಿ ಸಾಕಾರವಾಗಲು ಹೊರಟಿದ್ದು, ಆ ಮೂಲಕ ಸದೃಢ ಭಾರತ ನಿರ್ಮಾಣದತ್ತ ನಾವು ಹೆಜ್ಜೆ ಮುಂದಿಟ್ಟಿದ್ದೇವೆ ಎನ್ನಬಹುದು.
ಭಾರತದ ಸ್ವಾತಂತ್ರ್ಯದ ಕಲ್ಪನೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದ ತಿಲಕರನ್ನು ‘ಸ್ವಾತಂತ್ರ್ಯ ಚಳುವಳಿಯ ಜನಕ’ ಎಂದೂ ಕರೆಯಲಾಗಿದೆ. ಅವರಿಗೆ ಅಹಿಂಸಾತ್ಮಕ ಚಳುವಳಿಯಲ್ಲಿ ಒಲವಿಲ್ಲವಾದರೂ, ಮಾತುಕತೆಗಳ ಮೂಲಕ ಸ್ವಾತಂತ್ರ್ಯ ಪಡೆಯುವ ಬಗ್ಗೆ ಆಸಕ್ತಿ ಇತ್ತು. ಆದರೆ ಇದಕ್ಕೆ ಒಲವು ತೋರದ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಜನಶಕ್ತಿಯನ್ನು ಸಂಘಟಿಸುವಲ್ಲಿ ತಿಲಕರ ಪಾತ್ರ ಅಪಾರ.
ಹೀಗೆ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿ, ತಮ್ಮ ತತ್ವಾದರ್ಶಗಳ ಮೂಲಕವೇ ಜನಪ್ರಿಯರಾದ, ಸ್ವರಾಜ್ಯದ ಕಲ್ಪನೆಗೆ ಜೀವ ನೀಡಿದ ತಿಲಕರು 1920 ಆಗಸ್ಟ್ 1 ರಂದು ಕೊನೆಯುಸಿರೆಳೆದರು. ಇಂದಿಗೆ ಅವರು ಕಾಯಕದ ಕಾಯ ಬಿಟ್ಟು ಪ್ರಕೃತಿ ಸೇರಿ ಜನಮಾನಸದಲ್ಲಿ ಪ್ರತಿಕೃತಿಯಾಗಿ 100 ವರ್ಷ.
ವ್ಯಕ್ತಿ ಇಲ್ಲವಾಗಿರಬಹುದು. ಆದರೆ ಅವರು ವ್ಯಕ್ತಪಡಿಸಿದ ಆಶಯಗಳು, ಅವರ ಬದುಕಿನ ಆದರ್ಶಗಳು, ತಾತ್ವಿಕತೆಗಳು ನಮ್ಮ ಸಮಾಜದಲ್ಲಿ ಇನ್ನೂ ಚಿರಸ್ಥಾಯಿಯಾಗಿದೆ. ಇದಕ್ಕೆ ಸಾಕ್ಷಿ ಇಂದಿನ ಭಾರತೀಯ ಯುವ ಜನಾಂಗದಲ್ಲಿಯೂ ರಾಷ್ಟ್ರೀಯತೆಯ ಪ್ರಜ್ಞೆ ಜಾಗೃತವಾಗಿರುವುದು, ತಿಲಕರ ಸ್ವರಾಜ್ಯದ ಕಲ್ಪನೆ ಜೀವಂತವಾಗಿರುವುದು ಎಂದರೂ ತಪ್ಪಾಗಲಾರದು.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.