ಸದ್ಯದ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನಲ್ಲೇ ಹೆಚ್ಚು ಸುದ್ದಿಯಾಗುತ್ತಿರುವುದು ಕೊರೋನಾ. ವಿಶ್ವದ ಎಲ್ಲಾ ರಾಷ್ಟ್ರಗಳ ಆರ್ಥಿಕತೆ, ಆರೋಗ್ಯದ ಅಸಮತೋಲನದ ಜೊತೆಗೆ ಯಾವ ರಾಷ್ಟ್ರ ಸಂಕಷ್ಟಗಳನ್ನು ನಿಭಾಯಿಸುವುದರಲ್ಲಿ ಹೆಚ್ಚು ಸಮರ್ಥ ಎಂಬುದನ್ನು ಕೂಡ ಈ ಪರಿಸ್ಥಿತಿ ತೋರಿಸಿಕೊಟ್ಟಿದೆ. ಆ ದೇಶ ಜಗತ್ತಿನ ದೊಡ್ಡಣ್ಣ, ಈ ರಾಷ್ಟ್ರ ಬಡ ದೇಶ ಎಂಬ ಬೇಧಭಾವ ತೋರದೆಯೇ ಎಲ್ಲದನ್ನೂ, ಎಲ್ಲವನ್ನೂ ಸಮಾನ ದೃಷ್ಟಿಯಿಂದ ಕಂಡಿರುವ ಕೊರೋನಾ, ಶ್ರೀಮಂತ, ಬಡವನೆನ್ನದೆ ಹರಡುತ್ತಲೇ ಇದೆ. ಜನರು ಎಚ್ಚರ ತಪ್ಪಿದಷ್ಟು ವೇಗದಲ್ಲಿ ಕೊರೋನಾ ಎಚ್ಚರಿಕೆಯಿಂದ ಜನರನ್ನು ಸೇರುವ ಮೂಲಕ ಆತಂಕ ಸೃಷ್ಟಿಸುತ್ತಲೇ ಸಾಗಿದೆ. ಆದರೆ ಆರಂಭದಲ್ಲಿ ಕೊರೋನಾಗೆ ಭಯಪಡುತ್ತಿದ್ದಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಭಯ ಪಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ ಎಂಬುದು ಮಾತ್ರ ಸುಳ್ಳಲ್ಲ.
ಚೀನಾದಿಂದ ಜೀವ ಪಡೆದ ಕೊರೋನಾ ಇಂದು ಭಾರತದಲ್ಲಿಯೂ ತನ್ನ ರುದ್ರ ನರ್ತನ ತೋರುತ್ತಿದೆ. ಒಂದು ಕಡೆಯಲ್ಲಿ ಮನುಷ್ಯ ದೈನಂದಿನ ಜೀವನ ಕ್ರಮದ ಮೇಲೆಯೇ ಈ ಸೋಂಕು ಸವಾರಿ ಮಾಡಿದ್ದರೆ, ಮತ್ತೊಂದು ಕಡೆಯಲ್ಲಿ ಪರಿಸ್ಥಿತಿಯ ನಿರ್ವಹಣೆ, ಸ್ವಾವಲಂಬನೆ, ಹಳ್ಳಿಗಾಡಿನ ಬದುಕು, ಕೃಷಿ ಜೀವನ, ಭಾರತೀಯ ಪರಂಪರೆಗಳ ಮಹತ್ವವನ್ನು ಸಾರುವ ಕೆಲಸವನ್ನು ಮಾಡುವ ಮೂಲಕ ಕೆಲವರಲ್ಲಾದರೂ ಒಂದು ಮಟ್ಟಿನ ಜಾಗೃತ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೊರೋನಾ ಪೂರ್ವದಲ್ಲಿ ನಾವು ಬದುಕು ಸಾಗಿಸುತ್ತಿದ್ದ ಬಗೆಗೂ, ಪ್ರಸ್ತುತ ನಮ್ಮ ಜೀವನ ಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಕಣ್ಣಿಗೆ ಕಾಣದ ವೈರಸ್ನಷ್ಟೇ ಸತ್ಯ.
ಕೊರೋನಾ ಪೂರ್ವದಲ್ಲಿ ಬೇಕಾಬಿಟ್ಟಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ನಾವು, ಇಂದಿನ ಸ್ಥಿತಿಯಲ್ಲಿ ಎಲ್ಲಿ ಕೊರೋನಾ ನಮಗೆ ಅಟಕಾಯಿಸಿಕೊಂಡು ಬಿಡುತ್ತದೆಯೋ ಎಂಬ ಭಯದಲ್ಲಾದರೂ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಕೊಡುವುದು, ಶೇಕ್ಹ್ಯಾಂಡ್ ಮಾಡದಿರುವುದು, ಲೇಟ್ನೈಟ್ ಪಾರ್ಟಿ(ಕೆಲವರು) ಮೊದಲಾದವುಗಳಿಗೆಲ್ಲಾ ಫುಲ್ಸ್ಟಾಪ್ ಇಟ್ಟು ಬದುಕುವುದನ್ನು ರೂಢಿಸಿಕೊಂಡಿದ್ದೇವೆ. ಜೊತೆಗೆ ಭಾರತದ ಭವ್ಯ ಪರಂಪರೆಯಾದ ಎರಡೂ ಕೈ ಜೋಡಿಸಿ ನಮಸ್ತೆ ಮಾಡುವ ಮೂಲಕ ಮತ್ತೊಬ್ಬರ ಜೊತೆಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೇವೆ. ಮನೆಯಿಂದ ಹೊರ ಹೋಗಿ, ಮತ್ತೆ ಮನೆಗೆ ಬರುವಾಗ ಕೈ ಕಾಲುಗಳನ್ನು ನೀರಿನಿಂದ ತೊಳೆದುಕೊಂಡು ಮನೆಯೊಳಕ್ಕೆ ಪ್ರವೇಶಿಸುವುದನ್ನು ರೂಢಿಸಿಕೊಂಡಿದ್ದೇವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕಷಾಯ ಮಾಡುವುದೂ ನಮ್ಮಲ್ಲಿ ಹೆಚ್ಚಿನವರಿಗೀಗ ಅಭ್ಯಾಸವಾಗಿ ಬಿಟ್ಟಿದೆ. ಹೇಗಾದರೂ ಆಗಲಿ ಕಣ್ಣಿಗೆ ಕಾಣದ ಮಹಾಮಾರಿ ಮಾತ್ರ ನಮ್ಮನ್ನು ವಕ್ಕರಿಸದಿರಲಪ್ಪಾ ಎಂಬುದೇ ಕಾಣದ ದೇವರಲ್ಲಿ ಮೊರೆ ಇಟ್ಟು ಬೇಡಿಕೊಳ್ಳುವಲ್ಲಿಗೆ ಕೊರೋನಾ ನಮ್ಮನ್ನು ತಂದು ನಿಲ್ಲಿಸಿದೆ.
ಕೊರೋನಾ ಆರೋಗ್ಯ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಮಾರಕ ಎಂಬುದನ್ನು ಒಪ್ಪಿಕೊಳ್ಳುತ್ತಾ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಆದ ಕೆಲವು ಸಕರಾತ್ಮಕ ಬದಲಾವಣೆ ಬಗೆಗೆ ಯೋಚಿಸದಿದ್ದರೆ ತಪ್ಪಾಗಿ ಬಿಡುತ್ತದೇನೋ. ಹೌದು ಕೊರೋನಾ ಮಹಾಮಾರಿ ಬಂದ ಬಳಿಕ ಹಳ್ಳಿಗಳಲ್ಲಿ ಪಾಳು ಬಿದ್ದಿದ್ದ ಭೂಮಿ ಮತ್ತೆ ಹಸಿರಿನಿಂದ ಕಂಗೊಳಿಸುವಂತಾಗಿದೆ. ಹಳ್ಳಿಯಲ್ಲೇನಿದೆ ಮಣ್ಣು ಎಂದುಕೊಂಡು ಉದ್ಯೋಗ ಹುಡುಕಿಕೊಂಡು ಪಟ್ಟಣ ಸೇರಿದ್ದವರಲ್ಲಿ ಹೆಚ್ಚಿನವರಿಗೆ ಹಳ್ಳಿಯ ಮಹತ್ವವನ್ನು ಅರಿವಾಗಿಸಿದ್ದು ಇದೇ ಕೊರೋನಾ. ಕೊರೋನಾದಿಂದ ಮತ್ತೆ ತಮ್ಮ ಹಳ್ಳಿ ಮನೆಗಳು, ಕೃಷಿಯತ್ತ ಯುವಜನರ ಮನಸ್ಸು ಆಕರ್ಷಿತವಾಗಿದೆ ಎಂದರೂ ಅದು ಅತಿಶಯವಾಗಲಾರದು. ಜೊತೆಗೆ ಅವಿಭಕ್ತ ಕುಟುಂಬದ ಮಹತ್ವವನ್ನು ಸಾರುವ ಕೆಲಸವನ್ನೂ ಕೊರೋನಾ ಸಂಕಷ್ಟ ಮಾಡಿದೆ. ಒಂದೇ ಮನೆಯಲ್ಲಿದ್ದರೂ ಒಂದಾಗದೇ ಇದ್ದ ಮನಸ್ಸುಗಳನ್ನು ಒಂದು ಮಾಡಿ, ಕುಟುಂಬದ ಜೊತೆಗೆ ಕಾಲ ಕಳೆಯುವ ಸಂದರ್ಭವನ್ನು ಕೊರೋನಾ ಸಂಕಷ್ಟ ಒದಗಿಸಿಕೊಟ್ಟಿದೆ. ಹಣಕ್ಕಿಂತ ಮಾನವೀಯ ಮೌಲ್ಯಗಳು ಹೆಚ್ಚು ಬೆಲೆಬಾಳುವಂತಹವುಗಳಾಗಿವೆ ಎಂಬುದನ್ನು ಜಗತ್ತಿಗೆ ಸಾರಿದ್ದು ಇದೇ ಕಣ್ಣಿಗೆ ಕಾಣದ ವೈರಸ್ನಿಂದಾದ ಮಹಾ ಬಿಕ್ಕಟ್ಟು.
ಇನ್ನು ಸ್ವಾವಲಂಬನೆಯ ಪಾಠವನ್ನು ಜನರಿಗೆ ಈ ಸಂದರ್ಭ ಮನದಟ್ಟು ಮಾಡಿಕೊಟ್ಟಿದೆ. ಕೊರೋನಾ ಬರುವುದಕ್ಕೆ ಮೊದಲು ಭಾರತದಲ್ಲಿ ಪಿಪಿಇ ಕಿಟ್ ಸೇರಿದಂತೆ ಅನೇಕ ವೈದ್ಯಕೀಯ ಉಪಕರಣಗಳ ತಯಾರಿಯೇ ಇರಲಿಲ್ಲ. ಆದರೆ ಈಗ ಹಾಗಲ್ಲ. ನಮಗೆ ಅಗತ್ಯ ಎನಿಸಿದ ಎಲ್ಲಾ ವಸ್ತುಗಳನ್ನು ನಾವು ತಯಾರಿಸಬಲ್ಲೆವು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಇದಕ್ಕೆ ಸಾಕ್ಷಿ ಇಂದು ಭಾರತದಲ್ಲಿ ದಿನಕ್ಕೆ ಲಕ್ವಗಟ್ಟಲೆ ಪಿಪಿಇ ಕಿಟ್ ಗಳು ತಯಾರಾಗುತ್ತಿರುವುದು. ಜೊತೆಗೆ ಜನರೇ ಕೊರೋನಾ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುವ ಮಾಸ್ಕ್ ಗಳ ತಯಾರಿಯಲ್ಲಿ ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವೆಲ್ಲವೂ ಸ್ವಾವಲಂಬನೆಯ ಸಂಕೇತವಲ್ಲದೆ ಮತ್ತೇನು.
ಒಬ್ಬರಿಗೊಬ್ಬರ ಸಹಕಾರವಿಲ್ಲದೆ ಜೀವನ ಸಾಗಿಸುವುದು ಸುಲಭದ ಮಾತಲ್ಲ. ಹಾಗಾಗಿ ಯಾರನ್ನೂ ಕೀಳಾಗಿ ಕಾಣಬೇಡಿ ಎಂಬ ಪಾಠವನ್ನು ಕೊರೋನಾ ಮನುಷ್ಯನಿಗೆ ತಿಳಿಸಿಕೊಟ್ಟಿದೆ. ಕೇವಲ ಹಣವಿದ್ದರೆ ಆರೋಗ್ಯ ಕೊಂಡುಕೊಳ್ಳಲಾರೆವು, ಆರೋಗ್ಯ ಇಲ್ಲದೇ ಹೋದರೆ ಏನಿದ್ದೂ ಉಪಯೋಗವಿಲ್ಲ ಎಂಬುದನ್ನು ಕೊರೋನಾ ಸಂಕಷ್ಟ ಕಲಿಸಿಕೊಟ್ಟಿದೆ.
ಇನ್ನು ಭಾರತದ ವಿಚಾರಕ್ಕೆ ಬಂದರೆ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಾನು ಸಮಸ್ಯೆಗಳನ್ನೆದುರಿಸುತ್ತಿದ್ದರೂ, ಅದನ್ನು ನಿವಾರಿಸಿಕೊಳ್ಳುವ ಪ್ರಯತ್ನದ ಮೂಲಕ ಇತರ ದೇಶಗಳಿಗೂ ನಮ್ಮ ಕೈಲಾದ ಸಹಾಯವನ್ನು ಮಾಡಿರುವುದು. ಆ ಮೂಲಕ ಜಗತ್ತಿನ ಹಲವು ರಾಷ್ಟ್ರಗಳೊಂದಿಗಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿಯೂ ಕೊರೋನಾ ಬಿಕ್ಕಟ್ಟು ಅವಕಾಶ ನೀಡಿದೆ. ಕೊರೋನಾ ಸೋಂಕನ್ನು ಭಾರತದಿಂದ ನಿರ್ಮೂಲನೆ ಮಾಡುವತ್ತ ಮಾತ್ರ ನಾವು.ಗಮನ ನೆಟ್ಟಿಲ್ಲ. ಬದಲಾಗಿ ಇಡೀ ಜಗತ್ತನ್ನು ಕೊರೋನಾ ಮುಕ್ತವಾಗಿಸುವುದು ಹೇಗೆ ಎಂಬ ಬಗ್ಗೆಯೂ ನಮ್ಮ ಸರ್ಕಾರ, ನಮ್ಮ ನಾಯಕರು ಚಿಂತಿಸಿ ಅಗತ್ಯವಿರುವ ರಾಷ್ಟ್ರಗಳಿಗೆ ನಮ್ಮಿಂದ ಸಾಧ್ಯವಾದ ನೆರವು ನೀಡುವ ಮೂಲಕವೂ ಭಾರತವನ್ನು ‘ವಿಶ್ವಪ್ರಿಯ’ ರಾಷ್ಟ್ರವನ್ನಾಗಿಸಿರುವುದು ಸುಳ್ಳಲ್ಲ.
ಕೊರೋನಾ ಸಂಕಷ್ಟ ಮಾನವನ ಬದುಕಿಗೆ ಎಷ್ಟು ಅಪಾಯವನ್ನೊಡ್ಡಿದೆಯೋ, ಅದಕ್ಕಿಂತ ಎರಡು ಪಟ್ಟು ಬದುಕಿನ ಬೆಲೆ, ಬದುಕುವ ಕಲೆಯನ್ನು ಜನರಿಗೆ ಸಂಕಷ್ಟ ಕಲಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಕೊರೋನಾಗೆ ಸ್ವ-ನಿಯಂತ್ರಣಕ್ಕಿಂತ ದೊಡ್ಡ ಮದ್ದು ಬೇರೊಂದಿಲ್ಲ ಎಂಬ ಪಾಠವನ್ನು ನಾವು ಕಲಿತಿದ್ದೇವೆ. ಶುಚಿತ್ವ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮೊದಲಾದವುಗಳ ಮೂಲಕವೇ ನಮ್ಮನ್ನು ನಾವು ಆಪತ್ತಿನಿಂದ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಂಡಿದ್ದೇವೆ. ನಮ್ಮ ಆರೋಗ್ಯ ನಿಯಂತ್ರಣ ನಮ್ಮ ಕೈಲೇ ಇದೆ. ನಮ್ಮನ್ನು ನಾವು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕವೇ ಮಹಾಮಾರಿ ಕೊರೋನಾ ಗೆಲ್ಲುವತ್ತ ಚಿತ್ತ ಹರಿಸೋಣ.
ಭುವನ ಬಾಬು ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.