ಬೆಂಗಳೂರು: ರಾಜ್ಯದ 30 ಲಕ್ಷ ರೈತರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ 20 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಸರ್ಕಾರದ ಮುಂದಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಹೊರತಂದ ‘ಸಹಕಾರದ ಪ್ರಗತಿ-2020’ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಕೃಷಿಕರನ್ನು ಗಮನದಲ್ಲಿಟ್ಟುಕೊಂಡು ಸಾಲ ಸೌಲಭ್ಯ ನೀಡಲು ಬೇಕಾದ ವ್ಯವಸ್ಥೆ ಮಾಡುವಂತೆ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಸೂಚಿಸಿದರು.
ಕೃಷಿಕರಿಗೆ ತಮ್ಮ ಕಾರ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆಗಳನ್ನು ರೂಪಿಸಿಕೊಡುವ ಜವಾಬ್ದಾರಿ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸೂಚಿಸಿದ್ದಾರೆ. ಈ ಸಾಲಿನಲ್ಲಿ ರೈತಾಪಿ ಜನರಿಗೆ 14,500 ಕೋಟಿ ರೂ. ಮೊತ್ತದ ಕೃಷಿ ಸಾಲ ಒದಗಿಸಲು ಸರ್ಕಾರ ರೂಪುರೇಶೆ ಹಾಕಿಕೊಂಡಿದೆ. ಈ ಪ್ರಕಾರ ಈಗಾಗಲೇ 5,600 ಕೋಟಿ ರೂ. ಗಳನ್ನು 8.50 ಲಕ್ಷಗಳಷ್ಟು ಕೃಷಿಕರಿಗೆ ವಿತರಿಸಲಾಗಿರುವುದಾಗಿಯೂ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸೋಮಶೇಖರ್, ಕೊರೋನಾ ಸಂದರ್ಭದಲ್ಲಿ ಸಿಎಂ ಕೋವಿಡ್ ಕೇರ್ ನಿಧಿಗೆ ಎಪಿಎಂಸಿ ಮತ್ತು ಸಹಕಾರ ಇಲಾಖೆ ವತಿಯಿಂದ 53 ಕೋಟಿ ರೂ. ದೇಣಿಗೆ ಸಂಗ್ರಹಿಸಿ ನೀಡಲಾಗಿದೆ. ಜೊತೆಗೆ ಸುಮಾರು 25 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗೆಗೂ ಗಮನ ಹರಿಸುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.