ದೇಶದ, ದೇಶವಾಸಿಗಳ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕೌಶಲ್ಯ ಭಾರತ ಯೋಜನೆಯೂ ಸಹ ಒಂದು. ದೇಶದ ಶಕ್ತಿ ಸಂಪನ್ಮೂಲ ಎಂದೇ ಬಿಂಬಿತವಾಗಿರುವ ಯುವ ಜನರಲ್ಲಿ ಹೊಸ ಹೊಸ ಕೌಶಲ್ಯಗಳು ವೃದ್ಧಿಯಾಗುವಂತೆ ಮಾಡಲು ಪೂರಕವಾಗಿ ನಮೋ ಜಾರಿಗೊಳಿಸಿದ ಯೋಜನೆಯೇ ಕೌಶಲ್ಯ ಭಾರತ ಅಥವಾ ಸ್ಕಿಲ್ ಇಂಡಿಯಾ.
ಜುಲೈ 15, 2015 ರಂದು ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಚಾಲನೆ ನೀಡುತ್ತಾರೆ. ವಿಶ್ವ ಕೌಶಲ್ಯ ದಿನದಂದೇ ನಮೋ ಈ ಮಹತ್ವದ ಯೋಜನೆಯನ್ನು ದೇಶದಲ್ಲಿ ಅನುಷ್ಠಾನಕ್ಕೆ ತರುತ್ತಾರೆ. 2022ರ ವೇಳೆಗೆ ಸುಮಾರು 40 ಕೋಟಿಗೂ ಅಧಿಕ ಜನರನ್ನು ಈ ಯೋಜನೆಯಡಿಯಲ್ಲಿ ಕೌಶಲಭರಿತರನ್ನಾಗಿ ಮಾಡಿ, ದೇಶದಲ್ಲಿಯೇ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುವಂತೆ, ಹೊಸ ಉದ್ದಿಮೆಗಳು ಆರಂಭವಾಗುವಂತೆ ಮತ್ತು ದೇಶದಲ್ಲಿಯೇ ಉದ್ಯೋಗ ಸೃಷ್ಟಿಯಾಗುವ ಮೂಲಕ ನಿರುದ್ಯೋಗ ಪ್ರಮಾಣವನ್ನು ಕುಗ್ಗಿಸುವ, ಆ ಮೂಲಕ ಸಶಕ್ತ ಭಾರತವನ್ನು ನಿರ್ಮಾಣ ಮಾಡುವ ಸದುದ್ದೇಶವನ್ನಿಟ್ಟುಕೊಂಡು ನಮೋ ಸರ್ಕಾರ ಈ ಯೋಜನೆಗೆ ರೂಪು ರೇಶೆಗಳನ್ನು ಸಿದ್ಧ ಮಾಡಿತ್ತು.
ಜೊತೆಗೆ ಯುವಜನರಲ್ಲಿ ಸ್ಕಿಲ್ ಹೆಚ್ಚಿಸುವ ಸಲುವಾಗಿ ಅವರಿಗೆ 5 ಸಾವಿರ ದಿಂದ 5 ಲಕ್ಷದವರೆಗಿನ ಸಾಲ ಸೌಲಭ್ಯಗಳನ್ನು ನೀಡುವುದಕ್ಕೂ ಕೇಂದ್ರ ಸರ್ಕಾರ ಮುಂದಾಗಿತ್ತು. ಉದ್ದಿಮೆಗಳ ಆರಂಭ ಮಾಡುವಂತೆ ಹುರಿದುಂಬಿಸುವ, ತರಬೇತಿ ನೀಡುವ ನಿಟ್ಟಿನಲ್ಲಿಯೂ ಈ ಯೋಜನೆಯನ್ನು ಸಿದ್ಧಪಡಿಸುವ ಕೆಲಸವನ್ನು ನಮೋ ಸರ್ಕಾರ ಮಾಡಿತ್ತು. ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿಯೇ ಈ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.
ಸ್ವದೇಶೀ ಉತ್ಪಾದನೆ ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು. ಗುರುತಿಸುವ, ಪರದೇಶಗಳ ವಸ್ತುಗಳಿಗೆ ಪರ್ಯಾಯಗಳನ್ನು ಭಾರತದ ಕೌಶಲ್ಯಭರಿತ ಯುವ ಜನರೇ ನಿರ್ಮಿಸುವ ಮೂಲಕ ಸ್ವಾವಲಂಬಿ ಭಾರತದ ನಿರ್ಮಾಣ ಮಾಡುವ ಉದ್ದೇಶ ಈ ಯೋಜನೆಯದ್ದು. ಭಾರತದ ಯುವಜನರಲ್ಲಿರುವ ಕೌಶಲಗಳು ಭಾರತದಲ್ಲೇ ಉಪಯೋಗವಾಗುವಂತಾಗಬೇಕು. ಇಲ್ಲಿನ ಪ್ರತಿಭೆಗಳಿಗೆ ಅವರೊಳಗಿರುವ ಕೌಶಲ್ಯವನ್ನು ತೋರ್ಪಡಿಸುವ ಅವಕಾಶ ಇದೇ ರಾಷ್ಟ್ರದಲ್ಲಿ ದೊರೆಯಬೇಕು ಎಂಬ ಆಶಯದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯುವ ಜನರು ಉನ್ನತ ಮಟ್ಟದ ಶಿಕ್ಷಣ ಪಡೆದರೆ ಮಾತ್ರವೇ ಸಾಲದು. ಬದಲಾಗಿ ಅವರಲ್ಲಿ ಬೇರೆ ಬೇರೆ ರೀತಿಯ ಕೌಶಲಗಳು ವೃದ್ಧಿಯಾಗಬೇಕು. ಅಂತಹ ವಾತಾವರಣವನ್ನು ನಿರ್ಮಿಸುವ ಮೂಲಕ ಮೇಕ್ ಇನ್ ಇಂಡಿಯಾ ಗೆ ಶಕ್ತಿ ತುಂಬುವಂತಾಗಬೇಕು ಎಂಬ ಸದುದ್ದೇಶವೇ ಈ ಯೋಜನೆ ಕಾರ್ಯರೂಪಕ್ಕೆ ಬರಲು ಮುಖ್ಯ ಕಾರಣ ಎನ್ನಬಹುದು.
ಭಾರತದಲ್ಲಿ ಅದೆಷ್ಟೋ ಬಡ ಕುಟುಂಬಗಳು ಕೌಶಲವಿದ್ದರೂ ಅದರ ಪ್ರದರ್ಶನಕ್ಕೆ ಅವಕಾಶ ವಂಚಿತರಾಗುತ್ತಿವೆ. ಅಂತಹ ಬಡ ವರ್ಗದ ಯುವ ಮನಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿಯೂ ಈ ಯೋಜನೆ ಮುಖ್ಯವಾಗುತ್ತದೆ. ಭಾರತ ವಿಶ್ವದಲ್ಲಿಯೇ 2 ನೇಯ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಇಂತಹ ಸಂದರ್ಭದಲ್ಲಿ ಶಿಕ್ಷಣ, ಉದ್ಯೋಗ ಕ್ಷೇತ್ರಗಳೆರಡರಲ್ಲಿಯೂ ಪೈಪೋಟಿ ಹೆಚ್ಚುತ್ತಿದೆ. ಯುವ ಸಮೂಹಕ್ಕೆ ವೃತ್ತಿಪರ ಕೌಶಲಗಳನ್ನು ಕಲಿಸಿಕೊಡುವ ನಿಟ್ಟಿನಲ್ಲಿಯೂ ಈ ಯೋಜನೆ ಮಹತ್ವ ಪಡೆದಿದೆ.
ಬಡ ಯುವಜನರಿಗೆ ಅವರ ಬದುಕು, ಕುಟುಂಬವನ್ನು ಕಟ್ಟಿಕೊಳ್ಳುವುದಕ್ಕೆ ಪೂರಕವೆನಿಸಿದ ವೃತ್ತಿ ಕೌಶಲಗಳನ್ನು ಕಲಿಸುವ ಮೂಲಕ ಅವರಿಗೆ ಉದ್ಯೋಗ, ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿಯೂ ಈ ಯೋಜನೆ ಪರಿಣಾಮಕಾರಿಯೇ ಸರಿ. ದೇಶವನ್ನು ಅಭಿವೃದ್ಧಿ ಹೋಂದಿದ ರಾಷ್ಟ್ರಗಳ, ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸುವ ವಿಚಾರದಲ್ಲಿಯೂ ಈ ಯೋಜನೆ ಮಹತ್ವ ಪಡೆದಿದೆ ಎನ್ನಬಹುದು.
ಈ ಬಾರಿ ಮೋದಿ ಅವರ ಸ್ಕಿಲ್ ಇಂಡಿಯಾಗೆ 5ನೇ ವರ್ಷ. ಕೊರೋನಾ ಕಾರಣದಿಂದ ಇಡೀ ದೇಶ ತತ್ತರಿಸಿ ಆರೋಗ್ಯ, ಆರ್ಥಿಕ ಅಭದ್ರತೆ ಯನ್ನು ಎದುರಿಸಬೇಕಾಗಿದೆ. ಈ ಸಂದರ್ಭದಲ್ಲಿ ಮೋದಿ ಅವರು ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತ ನಿರ್ಮಾಣದ ಗುರಿಯನ್ನು ಜನರ ಮುಂದಿಟ್ಟಿದ್ದಾರೆ. ಅದಕ್ಕೆ ಪೂರಕ ಎಂಬಂತೆ ವೈದ್ಯಕೀಯ ಕ್ಷೇತ್ರದ ಅದೆಷ್ಟೋ ಉತ್ಪನ್ನಗಳನ್ನು ಕೊರೋನಾ ಅವಧಿಯಲ್ಲಿ ಭಾರತ ಉತ್ಪಾದನೆ ಮಾಡುವಂತಾಗಿದೆ. ಆ ಮೂಲಕ ಭಾರತದಲ್ಲಿ ಹೊಸ ಶಕ್ತಿಯ ಸಂಚಲನವಾಗಿದೆ. ಜೊತೆಗೆ ಲಡಾಕ್ನ ಚೀನಾ ಜೊತೆಗಿನ ಸಂಘರ್ಷದ ನಂತರ ಭಾರತ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ 5 ವರ್ಷಗಳ ಹಿಂದೆಯೇ ಮೋದಿ ಆರಂಭಿಸಿದ ಕೌಶಲ್ಯ ಭಾರತ ಹೆಚ್ಚು ಅರ್ಥಪೂರ್ಣ ಎನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.