ಉಡುಪಿ : ವಿದ್ಯಾರ್ಥಿಗಳಿಗೆ ನಡವಳಿಕೆ, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಶಿಕ್ಷಕರು, ಪೋಷಕರು, ಸಮಾಜದ ಮೇಲಿದ್ದು, ಈ ಕುರಿತು ತುರ್ತು ಗಮನ ಹರಿಸಬೇಕು ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಕರೆ ನೀಡಿದರು.
ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಟ್ರಸ್ಟ್ ವತಿಯಿಂದ ಜಿಲ್ಲೆಯ ಎಲ್ಲ ಸಮಾಜದ ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ 2,300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಅವಿಭಜಿತ ದ.ಕ. ಜಿಲ್ಲೆಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಟ್ಯಾಬ್, ಮೊಬೈಲ್ ತೆಗೆಸಿಕೊಟ್ಟರೆ ದಾರಿ ತಪ್ಪುತ್ತಾರೆ. ವಿದ್ಯಾರ್ಥಿಗಳು ಹೇಗೆ ನಡವಳಿಕೆ ಹೊಂದಬೇಕು ಎಂಬ ಕುರಿತು ಶಾಲಾ ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಮತ್ತು ತರಬೇತಿ ನಡೆಯಬೇಕು ಎಂದರು.
ಪುತ್ರಿಗೆ ಟ್ರಸ್ಟ್ ಹೊಣೆ : ಇನ್ನು ಮುಂದೆ ಟ್ರಸ್ಟ್ನ ಜವಾಬ್ದಾರಿ ನಿರ್ವಹಿಸಲಿರುವ ಡಾ| ಶಂಕರ್ ಪುತ್ರಿ ಶ್ಯಾಮಿಲಿ ಶಂಕರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಸತತ ಪ್ರಯತ್ನ, ದೃಢ ನಿರ್ಧಾರದಿಂದ ಯಶಸ್ಸು ಸಿಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಆಗುವ ಬಗ್ಗೆ ಪೋಷಕರು ವಿಶೇಷ ಮುತುವರ್ಜಿ ವಹಿಸಬೇಕು. ವಿದ್ಯಾರ್ಥಿವೇತನ ಬಳಸಿಕೊಂಡು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.
ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರು ವಹಿಸಿದ್ದರು. ಜಿಲ್ಲೆಯಲ್ಲಿ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಹತ್ತು ಮಂದಿ ಹಿರಿಯ ಯಕ್ಷಗಾನ ಕಲಾವಿದರು, ವಿಶೇಷ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೂವರು ಶಿಕ್ಷಕರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ವಿದ್ಯಾರ್ಥಿನಿ ರಕ್ಷಾ ಜಿ., ವಿಶೇಷ ಶಾಲಾ ಶಿಕ್ಷಕ ರಮೇಶ ನಾಯಕ್, ಯಕ್ಷ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.
ಶಾಲಿನಿ ಶಂಕರ್ ಉಪಸ್ಥಿತರಿದ್ದರು. ಆನಂದ್ ಎಸ್.ಕೆ. ಸ್ವಾಗತಿಸಿ ಶಂಕರ ಸಾಲ್ಯಾನ್ ವಂದಿಸಿದರು. ಗಣೇಶ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.