ಭಾರತದಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ, ವಿದ್ಯಾರ್ಥಿ ಸಮೂಹಕ್ಕೆ ಅನ್ಯಾಯವಾದಾಗ ಅವೆಲ್ಲವನ್ನೂ ಪ್ರತಿಭಟಿಸುವ, ನೊಂದ ವಿದ್ಯಾರ್ಥಿಗಳಿಗೆ ಸಾಂತ್ವನವಾಗುವ, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಹಾಗೆಯೇ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಪರಿಹರಿಸಿಕೊಳ್ಳುವಂತೆ ಮಾಡುವಲ್ಲಿ ದೇಶದಾದ್ಯಂತ ಹೆಚ್ಚು ಗಮನ ಸೆಳೆಯುತ್ತಿರುವ ಸಂಘಟನೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.
ವ್ಯಕ್ತಿಯನ್ನು ಶಕ್ತಿಯನ್ನಾಗಿಸುವ ಮೂಲಕ ಸಶಕ್ತ ರಾಷ್ಟ್ರವನ್ನು ಕಟ್ಟುವ, ಯುವ ಶಕ್ತಿಯನ್ನು ದೇಶ ಭಕ್ತ ಸಮೂಹವನ್ನಾಗಿಸುವ ಮಹತ್ವದ ಆಶಯಗಳೊಂದಿಗೆ, ದೇಶದ ಕೋಟ್ಯಾಂತರ ವಿದ್ಯಾರ್ಥಿ ಸಮೂಹದಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ತುಂಬುವ, ದೇಶದ ಬಗ್ಗೆ ಜಾಗೃತಿ ಮೂಡಿಸುವ ಕಲ್ಪನೆಯೊಂದಿಗೆ 1949 ರ ಜುಲೈ 9 ರಂದು ಜೀವ ಪಡೆದ ಈ ಸಂಘ, ಇಂದಿಗೂ ರಾಷ್ಟ್ರೀಯತೆಯ ಉದಾತ್ತ ಚಿಂತನೆಯನ್ನಿಟ್ಟುಕೊಂಡೇ, ಯುವ ಪಡೆಯನ್ನು ದೇಶದ ಶಕ್ತಿಯನ್ನಾಗಿಸುವ ಮಹತ್ಕಾರ್ಯ ನಡೆಸುತ್ತಲೇ ಇದೆ. ರಾಷ್ಟ್ರ ಸೇವೆಯ ಕೈಂಕರ್ಯವನ್ನು ಯಾವುದೇ ದೋಷವಿಲ್ಲದಂತೆ ನಡೆಸಿಕೊಂಡು ಬರುತ್ತಿದೆ ಎಂಬುದರಲ್ಲಿಯೂ ಎರಡು ಮಾತಿಲ್ಲ. ತನ್ನ ಮಾದರಿ ಕಾರ್ಯಗಳ ಮೂಲಕವೇ ಎಬಿವಿಪಿ ಇಂದು ದೇಶದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದರೂ ಅತಿಶಯೋಕ್ತಿಯಾಗಲಾರದು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ‘ಜ್ಞಾನ, ಶೀಲ ಮತ್ತು ಏಕತೆ’ ಎಂಬ ಮೂರು ಮಂತ್ರಗಳ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಇದು ಕೇವಲ ವಿದ್ಯಾರ್ಥಿ ಗಳಿಗಾಗಿ ಹೋರಾಟ, ಪ್ರತಿಭಟನೆಗಳನ್ನಷ್ಟೇ ಮಾಡುವುದಲ್ಲ, ಬದಲಾಗಿ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚುವ, ದೇಶಾಭಿಮಾನವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ತಾಯಿ ಭಾರತಿಯ ರಕ್ಷಣೆಗೂ ಸದಾ ಕಾಲ ಸನ್ನದ್ಧವಾಗಿದೆ. ಅಲ್ಲದೆ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದ ಮಹತ್ವಾಕಾಂಕ್ಷೆಯ ಜೊತೆಗೆ ಇಂದಿಗೂ ಎಬಿವಿಪಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅಲ್ಲದೆ ಸಮಾಜದಲ್ಲಿನ ತಳ ವರ್ಗದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಸಹಾಯ ಮಾಡುವ ಕೆಲಸವನ್ನು ಎಬಿವಿಪಿ ಮಾಡುತ್ತಿದೆ.
ಸದ್ಯದ ಪರಿಸ್ಥಿತಿಯನ್ನೇ ಗಮನಿಸಿದರೆ ದೇಶ ಕೊರೋನಾ ಎಂಬ ಮಹಾಮಾರಿಯ ಕೈಗೆ ಸಿಲುಕಿ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ದೇಶದ ಹಲವು ಭಾಗಗಳಲ್ಲಿ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಹಸಿದವರಿಗೆ ಆಹಾರ, ರೋಗಿಗಳಿಗೆ ಔಷಧ, ಅಶಕ್ತರಿಗೆ ಸಹಾಯ ಮಾಡುವ ಮೂಲಕವೂ ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಆ ಮೂಲಕ ಸಂಕಟದ ಸಂದರ್ಭದಲ್ಲಿ ಸಮಾಜದ ಕೈ ಹಿಡಿಯುವ ಮಹತ್ವದ ಕಾಯಕದ ಮೂಲಕವೇ ರಾಷ್ಟ್ರದ ಇತರ ಸಂಘಟನೆಗಳಿಗೂ ಎಬಿವಿಪಿ ದಾರಿದೀಪವಾಗಿದೆ.
ಇಂದಿಗೆ ಅಂತಹ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆ ಆರಂಭವಾಗಿ 72 ವರ್ಷಗಳಾಗಿದೆ. ಆರಂಭವಾದ ಸಂದರ್ಭದಲ್ಲಿ ಯಾವ ಆಶಯದ ಜೊತೆಗೆ ಎಬಿವಿಪಿ ಸಮಾಜಮುಖಿಯಾಗಿ ಗುರುತಿಸಿಕೊಂಡಿತ್ತೋ, ಇಂದಿಗೂ ಅದೇ ಆಶಯ ಅಂದರೆ ರಾಷ್ಟ್ರೀಯತೆಯ ಉದಾತ್ತವಾದ ಚಿಂತನೆಗಳ ಜೊತೆಗೆಯೇ ಎಬಿವಿಪಿ ಮುನ್ನಡೆಯುತ್ತಿದೆ. ಹಳೆ ಬೇರು, ಹೊಸ ಚಿಗುರಿನ ನಡುವಿನ ಸಾಮರಸ್ಯ ಅಂದರೆ ಎಬಿವಿಪಿ ಆರಂಭವಾದಾಗ ಅದರಲ್ಲಿ ಗುರುತಿಸಿಕೊಂಡ ಹಿರಿಯರು ಹಾಕಿಕೊಟ್ಟ ಸಮಾಜಮುಖಿ, ದೇಶಭಕ್ತಿಯ ಹಾದಿಯಲ್ಲಿ ಇಂದಿನ ಹೊಸ ಚಿಗುರುಗಳೊಂದಿಗೆ ವಿದ್ಯಾರ್ಥಿಗಳ ಪಡೆಯೂ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದಲೇ 72 ವರ್ಷಗಳ ಹಿಂದೆ ನೆಟ್ಟ ಎಬಿವಿಪಿ ಎಂಬ ಸಸಿ ಇಂದು ಬೃಹತ್ ಮರವಾಗಿ ಸೊಗಸಾಗಿ ಬೆಳೆದಿದೆ. ರಾಷ್ಟ್ರೀಯ ಚಿಂತನೆಯ ಉಳಿವಿಗಾಗಿ ತನ್ನ ವಿಶಾಲ ರೆಂಬೆಗಳನ್ನು ದೇಶದೆಲ್ಲೆಡೆ ಹರಡಿ, ಯುವ ಪಡೆಗಳನ್ನು ಸಶಕ್ತರನ್ನಾಗಿ ಮಾಡುತ್ತಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.