ಇಂದು ಸಂಪೂರ್ಣ ಮಾನವಕುಲ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ. ದೇಶದ ಜನರ ಪ್ರಾಣ ರಕ್ಷಣೆಗಾಗಿ ಜಾರಿಗೊಳಿಸಿದ ಲಾಕ್ಡೌನ್ನ ಪರಿಣಾಮವಾಗಿ ಸಾವಿರಾರು ಸಣ್ಣ ಸಣ್ಣ ಉದ್ದಿಮೆಗಳು ಅಪಾಯದ ಅಂಚಿನಲ್ಲಿವೆ. ಅವುಗಳಲ್ಲಿ ನೇಕಾರಿಕೆಯೂ ಒಂದು. ಉತ್ಪಾದಿಸಿದ ಸೀರೆಗಳಿಗೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ನೇಕಾರಿಕೆಯನ್ನು ಅವಲಂಬಿಸಿರುವ ಸಹಸ್ರಾರು ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ವಿಕಟ ಪರಿಸ್ಥಿತಿಯಲ್ಲಿ ಒಂದು ಜಾಗೃತ, ಸಾಮಾಜಿಕ ಸಂಘಟನೆಯಾಗಿ ಸೇವಾ ಭಾರತಿ ಅವರ ಕಷ್ಟವನ್ನು ದೂರಮಾಡಲು ಪ್ರಯತ್ನಿಸುತ್ತಿದೆ .
ನೇಕಾರರ ನೆರವಿಗೆ ಧಾವಿಸಿರುವ ಸೇವಾ ಭಾರತಿಯು ಸಣ್ಣ-ಪುಟ್ಟ ನೇಕಾರರ ಬಳಿ ಮಾರಾಟವಾಗದೆ ಉಳಿದ ಸೀರೆಗಳನ್ನು ಮಾರಾಟ ಮಾಡಲು ವಿವಿಧ ವೇದಿಕೆಗಳನ್ನು ಸೃಷ್ಟಿಸಿದೆ. ಕನಿಷ್ಠ ಒಂದು ಸೀರೆಯ ತಯಾರಿಕೆಯ ಹಿಂದೆ 9 ಜನರ ಪರಿಶ್ರಮ ಇರುತ್ತದೆ ಮತ್ತು 9 ಕುಟುಂಬಗಳ ಬದುಕು ಇರುತ್ತದೆ. ಸೀರೆಗೆ ಕೊಡುವ 500-1000 ರೂಪಾಯಿಗಳು ಅವರ ಬದುಕಿಗೊಂದು ಆಧಾರವನ್ನು ಕಲ್ಪಿಸುತ್ತದೆ. ಹೀಗಾಗಿ ಸೇವಾ ಭಾರತಿ ನೇಕಾರರ ಬದುಕು ಹಳಿ ತಪ್ಪಂದಂತೆ ಮಾಡಲು ಅವಿರತ ಶ್ರಮಿಸುತ್ತಿದೆ.
ಸೇವಾ ಭಾರತಿಯು ಆದಾಯ ಕಡಿಮೆಯಿರುವ ಸುಮಾರು 580 ಕುಟುಂಬ ಸಮೀಕ್ಷೆಯನ್ನು ನಡೆಸಿದೆ. ಸಹಾಯ ಪಡೆಯಲು ಅರ್ಹವಾಗಿರುವ ನೇಕಾರರ ಕುಟುಂಬವನ್ನು ಗುರುತಿಸಿ ಅವರಿಗೆ ನೆರವು ನೀಡಲು ಮುಂದಾಗಿದೆ. ಅವರಿಂದ ಸೀರೆಗಳನ್ನು ಪಡೆದು ವಿವಿಧ ವೇದಿಕೆಗಳಲ್ಲಿ ಅವುಗಳನ್ನು ಮಾರಾಟವನ್ನು ಮಾಡುವ ಮೂಲಕ ಅವರ ಜೀವನವನ್ನು ಭದ್ರಗೊಳಿಸಿದೆ. ಇದಕ್ಕಾಗಿ ಸೇವಾ ಭಾರತಿಯು ಜೂನ್ ತಿಂಗಳ 22ರಿಂದ ಅಭಿಯಾನವೊಂದನ್ನು ಆರಂಭಿಸಿದೆ. ಇದರಡಿಯಲ್ಲಿ ಅದು ನೇಕಾರರಿಂದ ಸೀರೆಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದೆ. ಈ ನೇಕಾರ ಕುಟುಂಬಗಳ ಬಳಿ ಎಷ್ಟು ದರದ ಎಷ್ಟು ಸೀರೆಗಳು ಇವೆ ಎಂಬ ಮಾಹಿತಿಯನ್ನು ಪಡೆದುಕೊಂಡ ಬಳಿಕ ಅವುಗಳನ್ನು ಖರೀದಿ ಮಾಡಲಾಗಿದೆ.
ಸೇವಾ ಭಾರತೀಯು ಹಣ ಸಂಗ್ರಹ ಮಾಡಿ ನೇಕಾರರಿಂದ ಖರೀದಿ ಮಾಡಿದ ಸೀರೆಗಳನ್ನು ಸುಮಾರು 3-4 ಮಾರ್ಗಗಳ ಮೂಲಕ ಮಾರಾಟ ಮಾಡುವ ಕಾರ್ಯವನ್ನು ಮಾಡುತ್ತಿದೆ. ಮೊದಲನೇಯದಾಗಿ ಅದು www.sevakart.in ಎಂಬ ವೆಬ್ಸೈಟ್ ಅನ್ನು ಈ ಸೀರೆಗಳ ಮಾರಾಟಕ್ಕೆಂದೇ ತೆರೆದಿದೆ. ಅದರ ಮೂಲಕ ಸೀರೆಗಳ ಮಾರಾಟ ನಡೆಯುತ್ತಿದೆ. ಎರಡನೇಯದಾಗಿ ಬೆಳಗಾವಿಯ ಎರಡು ಮೂರು ಕಡೆಗಳಲ್ಲಿ ಹಾಲ್ಗಳಲ್ಲಿ ವಾರಗಟ್ಟಲೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. ಇದರಿಂದ ಸುಮಾರು 21 ಲಕ್ಷ ರೂಪಾಯಿಗಳ ಸೀರೆ ಮಾರಾಟವಾಗಿದೆ.
ಮೂರನೇಯದಾಗಿ ವೋಲ್ ಸೇಲ್ ಮಾರಾಟವನ್ನು ಕೂಡ ನಡೆಸಲಾಗುತ್ತಿದೆ. ಕೈಗಾರಿಗಳು, ಸೊಸೈಟಿಗಳೊಂದಿಗೆ ಮಾತುಕತೆ ನಡೆಸಿ ಅವರು ಸೀರೆಗಳನ್ನು ಖರೀದಿಸುವಂತೆ ಮಾಡಲಾಗುತ್ತಿದೆ ಮತ್ತು ಮಹಿಳಾ ಸಂಘಗಳ ಮೂಲಕ ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಇದುವರೆಗೆ 3-4 ಲಕ್ಷ ರೂಪಾಯಿಯ ಸೀರೆ ಮಾರಾಟವಾಗಿದೆ.
ಈಗಾಗಲೇ ಸೇವಾ ಭಾರತಿಯು ಬೆಂಗಳೂರಿಗೆ 1 ಸಾವಿರ ಸೀರೆಗಳನ್ನು ಮಾರಾಟಕ್ಕಾಗಿ ಕಳುಹಿಸಿಕೊಟ್ಟಿದೆ. ಹುಬ್ಬಳ್ಳಿಯಲ್ಲಿ ಮುಂದಿನ ವಾರ ಸ್ಟಾಲ್ ಒಪನ್ ಆಗಲಿದೆ. ಚಿಕ್ಕೋಡಿಯಲ್ಲೂ ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಕಲು ನಿರ್ಧರಿಸಿದೆ. ಮಂಗಳೂರು ಮುಂತಾದ ಕಡೆಗಳಲ್ಲೂ ಸೀರೆಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.
ಇದು ಒಂದು ತಿಂಗಳ ಅಭಿಯಾನವಾದರೂ ವೆಬ್ಸೈಟ್ ಮೂಲಕ ನಿರಂತರವಾಗಿ ಮಾರಾಟ ಕಾರ್ಯ ಮುಂದುವರೆಯಲಿದೆ.
ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿರುವ ಸೇವಾ ಭಾರತಿಯ ಈ ಕಾರ್ಯವು ನೇಕಾರರಿಗೆ ಹೊಸ ಜೀವನವನ್ನು ಒದಗಿಸಿಕೊಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಬಡ ನೇಕಾರರ ಕೈ ಹಿಡಿದ ಸೇವಾ ಭಾರತಿಯ ಕಾರ್ಯ ಅಭಿನಂದನಾರ್ಹವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.