ಸಾಮಾಜಿಕ ಜಾಲತಾಣ, ಟಿವಿ ಚಾನೆಲ್ ಹೀಗೆ ಹಲವಾರು ವಿಧಗಳಲ್ಲಿ ನಮಗೆ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳ ಮಾಹಿತಿ ಆಗಿಂದ್ದಾಗ್ಗೆ ತಿಳಿಯುತ್ತಿದ್ದರೂ, ಅದೇ ಸುದ್ದಿಗಳನ್ನು ಪತ್ರಿಕೆಗಳ ಮೂಲಕ ಓದುವಾಗ ಸಿಗುವ ಸುಖ, ಆಸ್ವಾದದ ಮೌಲ್ಯ ಬೇರೆಯೇ. ಬೆಳಗ್ಗೆ ಎದ್ದೊಡನೆಯೇ ಬಾಗಿಲ ಬಳಿ ಬಿದ್ದಿರುವ ಪೇಪರ್ ಅನ್ನು ಎತ್ತಿಕೊಂಡು ಕೈಯಲ್ಲೊಂದು ಕಪ್ ಟೀ/ಕಾಫಿ ಹೀರಿಕೊಂಡು ಸುದ್ದಿಗಳನ್ನು ಓದುವುದರಲ್ಲಿ ಸಿಗುವ ಅನುಭವವನ್ನು ಯಾವ ಸಾಮಾಜಿಕ ಜಾಲತಾಣವಾಗಲಿ, ಯಾವ ಮಾಧ್ಯಮವಾಗಲಿ ನೀಡುವುದಿಲ್ಲ. ಅಂತಹ ವಿಶಿಷ್ಟ ಗುಣದ ಮೂಲಕವೇ ಪತ್ರಿಕೆಗಳು ಇಂದಿನ ಯುಗದಲ್ಲಿಯೂ ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿದೆ ಎಂದರೆ ತಪ್ಪಾಗಲಾರದು.
ಇಂದು ಪತ್ರಿಕಾ ದಿನ. ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ 1843 ಜುಲೈ 1ರಂದು ಇದರ ಮೊದಲ ಸಂಚಿಕೆ ಪ್ರಾರಂಭವಾಯಿತು. ಇದಕ್ಕಾಗಿಯೇ ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು ಜುಲೈ ಒಂದರಂದು ಆಚರಿಸುತ್ತಾರೆ.
ಕೆಲವರಿಗೆ ಗೊತ್ತಿರುವ ಹಲವರಿಗೆ ತಿಳಿಯದೇ ಇರುವ ದಿನವೇ ಪತ್ರಿಕಾ ದಿನ ಎಂದರೂ ಅದು ತಪ್ಪಲ್ಲ. ಹಲವಾರು ದಿನಾಚರಣೆಗಳಿಗೆ ಪತ್ರಿಕೆಗಳ ಮೂಲಕವೇ ಶುಭಾಶಯ ತಿಳಿಸುವವರಿದ್ದರೂ ಪತ್ರಿಕಾ ದಿನ, ಪತ್ರಕರ್ತರು ಮಾತ್ರ ಇಂದಿಗೂ ತೆರೆಮರೆಯಲ್ಲಿಯೇ ಇದ್ದಾರೆ. ಕೆಲವು ಮಂದಿ ಪತ್ರಕರ್ತರು ಸಾಮಾಜಿಕವಾಗಿ ಸ್ಥಾನಮಾನ ಗಿಟ್ಟಿಸಿಕೊಂಡಿದ್ದರೂ, ಸಮಾಜಕ್ಕಾಗಿ ದುಡಿಯುವ ಅದೆಷ್ಟೋ ಮಾಧ್ಯಮ ಮಿತ್ರರು ಇಂದಿಗೂ ಅತಂತ್ರ ಸ್ಥಿತಿಯಲ್ಲೇ ಇದ್ದಾರೆ ಎನ್ನುವುದು ಮಾತ್ರ ದುರಂತ. ಸಮಾಜದ ಕುಂದುಕೊರತೆಗಳನ್ನು ಸರಿಯಾದ ಸಾಕ್ಷಿಗಳ ಮೂಲಕವೇ ಮುನ್ನೆಲೆಗೆ ತಂದು, ಅವುಗಳನ್ನು ಸರಿಪಡಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಹಲವು ಪತ್ರಕರ್ತ ಮಿತ್ರರ ಜೀವನ ಅಂತತ್ರ ಸ್ಥಿತಿಯಲ್ಲಿ ಇರುವುದೇ ಇದಕ್ಕೆ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗೆ ಇದೆ.
ಹೌದು ಓದುಗನಿಗೆ ಪತ್ರಿಕೆ ಕೇವಲ ಮಾಹಿತಿಗಳನ್ನು ಹೊತ್ತ ಕಾಗದದ ತುಂಡು. ಆದರೆ ಪತ್ರಕರ್ತನಿಗೆ ಅದುವೇ ಜೀವನ. ಒಂದು ಪತ್ರಿಕೆ ನಿಗದಿತ ಸಮಯಕ್ಕೆ ಓದುಗನ ಮನೆಯ ಬಾಗಿಲಲ್ಲಿ ಬೀಳಬೇಕಾದರೆ ಅದರ ಹಿಂದೆ ಶ್ರಮವಹಿಸಿರುವ ಅದೆಷ್ಟೋ ಜನರ ಬೆವರಿನ ಫಲವಿದೆ. ಸುದ್ದಿಗಳನ್ನು ಹುಡುಕಿ ಹೊರಡುವ ವರದಿಗಾರ, ಅ ಸುದ್ದಿಗಳನ್ನು ಸರಿಪಡಿಸುವ ಉಪಸಂಪಾದಕ, ಆ ಸುದ್ದಿಯನ್ನು ಪುಟಗಳಲ್ಲಿ ಅಂದವಾಗಿ ಜೋಡಿಸುವ ಪುಟ ವಿನ್ಯಾಸಕಾರ, ಅದರಲ್ಲಿನ ತಪ್ಪುಗಳನ್ನು ಗುರುತಿಸಿ ಸರಿ ಪಡಿಸುವ ಪ್ರೂಫ್ ರೀಡರ್, ಎಲ್ಲವೂ ಸರಿಯಾಗಿದೆಯೇ ಎಂದು ಗಮನಿಸುವ ಸಂಪಾದಕ, ಉದ್ಯೋಗಿಗಳ ಸಂಬಳಕ್ಕೆ ಆಧಾರವಾದ ಜಾಹೀರಾತುಗಳನ್ನು ಸಂಗ್ರಹಿಸುವಾತ, ಮುದ್ರಕ ವರ್ಗ, ಸಮಯಕ್ಕೆ ಸರಿಯಾಗಿ ಆಯಾ ದಿನದ ಪತ್ರಿಕೆಗಳನ್ನು ಮನೆಯವರು ಏಳುವುದಕ್ಕೂ ಮುನ್ನ ತಲುಪಿಸುವ ವಿತರಕರು, ಪೇಪರ್ ಬಾಯ್ಸ್ ಹೀಗೆ ಇನ್ನೂ ಹಲವು ಜನರ ಒಂದಿಡೀ ದಿನದ ತರಾತುರಿಯ ಶ್ರಮದ ಫಲ ಮುಂಜಾವಿನ ಟೀ/ಕಾಫಿ ಜೊತೆಗೆ ನಮ್ಮ ದಿನವನ್ನು ಆರಂಭಿಸುತ್ತದೆ ಎಂದರೆ ಪತ್ರಿಕೆಯ ಮಹತ್ವ ನಮಗೆ ಅರ್ಥವಾಗಬಹುದು.
ಸಮಾಜದ ಅಂಕುಡೊಂಕುಗಳನ್ನು, ಸುವಿಚಾರ, ಶೋಕ, ಸಂತೋಷ ಹೀಗೆ ಮನುಷ್ಯ ಜೀವನದ ಪ್ರತಿಯೊಂದು ಭಾವಗಳಿಗೂ ಜೀವ ತುಂಬುವ ಪತ್ರಕರ್ತರ ಜೀವನ ಮಾತ್ರ ಇಂದಿಗೂ ಅಯೋಮಯವೇ. ಹಿಂದೆಲ್ಲಾ ಪತ್ರಕರ್ತರು ಎಂದರೆ ಸಮಾಜದ ಉದ್ಧಾರಕರು ಎನ್ನುವ ಭಾವನೆ ಇತ್ತು. ಆದರೆ ಕಾಲ ಬದಲಾದಂತೆ ಪತ್ರಿಕೆಗಳು ಅಥವಾ ಯಾವುದೇ ಮಾಧ್ಯಮಗಳು ಉದ್ಯಮದ ಭಾಗವಾಗಿಬಿಟ್ಟಿದೆ. ಇಲ್ಲಿ ಯಾವ ಸುದ್ದಿ ಜನರನ್ನು ಹೆಚ್ಚು ಆರ್ಷಿಸುವುದೋ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಲ್ಲಿಯವರೆಗೆ ಪತ್ರಿಕೋದ್ಯಮ ಬದಲಾಗಿದೆ. ಸುದ್ದಿ ವ್ಯಾಪಾರದ ಸ್ವರೂಪವಾಗಿ ಬದಲಾಗಿದೆ ಎಂದರೂ ತಪ್ಪಾಗಲಾರದು.
ಕೊರೋನಾ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರ ಜೊತೆಗೆ ತಮ್ಮ ಜೀವವನ್ನು ಲೆಕ್ಕಿಸದೆ ಅದೆಷ್ಟೋ ಪತ್ರಕರ್ತರು ಜನರಿಗೆ ಸುದ್ದಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಸುದ್ದಿಯಾಗುವುದೇ ಇಲ್ಲ. ಆತ ಕೇವಲ ಸುದ್ದಿ ನೀಡುವುದಕ್ಕೆ ಮಾತ್ರವೇ ಸೀಮಿತನಾಗಿ ಬಿಡುತ್ತಾನೆ. ಇದು ಕೇವಲ ಕೊರೋನಾ ಸಂದರ್ಭದಲ್ಲಿ ಮಾತ್ರವಲ್ಲ. ಇನ್ನಿತರ ಯಾವುದೇ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಕೊಪಗಳ ಸಂದರ್ಭದಲ್ಲಿ ಪತ್ರಕರ್ತ ಮಾತ್ರ ಜೀವ ಪಣಕ್ಕಿಟ್ಟು ಸುದ್ದಿ ನೀಡುತ್ತಾನೆ. ಪೈಪೋಟಿಯ ನಡುವೆಯೂ ನಾನೇ ಬೆಸ್ಟ್ ನ್ಯೂಸ್ ನೀಡಬೇಕು ಎನ್ನುವ ಹಠದಲ್ಲಿ ದುಡಿಯುತ್ತಾನೆ. ಇದು ಅವನ ಪ್ರತಿಷ್ಠೆ ಅಲ್ಲ. ಬದಲಾಗಿ ಬದುಕು ಕಟ್ಟಿಕೊಳ್ಳುವುದಕ್ಕಿರುವ ಪರದಾಟ.
ಇಂದು ಪತ್ರಿಕಾ ದಿನ. ಈ ವರ್ಷದಲ್ಲಿ ಪತ್ರಕರ್ತರ ಆರೋಗ್ಯ, ಜೀವನ, ಕುಟುಂಬ ಎಲ್ಲವೂ ಅತಂತ್ರವಾಗಿದ್ದರೂ, ಆತ ಮಾತ್ರ ಸಮಾಜದ ಬದಲಾವಣೆಗೆ, ಜನರಿಗೆ ಕ್ಲಪ್ತ ಸಮಯಕ್ಕೆ ನಾಳಿನ ದಿನದ ಆರಂಭಕ್ಕೆ ಪತ್ರಿಕೆ ನೀಡಲು ದುಡಿಯುತ್ತಲೇ ಇದ್ದಾನೆ. ಹೀಗೆ ಸಮಾಜಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಪತ್ರಿಕಾ ದಿನದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.