ಮಳೆಗಾಲ ಬಂತೆಂದರೆ ವಿವಿಧ ರೋಗಗಳು ಕಾಡುತ್ತವೆ ಎಂಬ ಆತಂಕ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ಈ ಆತಂಕ ನಿಜ ಕೂಡ. ಶೀತ, ಕಫದಿಂದ ಹಿಡಿದು ಮಲೇರಿಯಾದವರೆಗಿನ ರೋಗಗಳು ಕೂಡ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಕಲುಷಿತ ನೀರು, ನೀರಿನಲ್ಲಿ ಉತ್ಪತ್ತಿಯಾಗುವ ಕ್ರಿಮಿ ಕೀಟ, ಸೊಳ್ಳೆಗಳು. ಆದರೆ ಅಪಾಯ ಎದುರಾಗುವ ಮುನ್ನವೇ ಮುನ್ನಚ್ಚರಿಕೆ ವಹಿಸುವುದು ಜಾಣತನ.
ಈ ವರ್ಷ ನಮಗೆ ಬಹು ದೊಡ್ಡ ಸವಾಲುಗಳು ಎದುರಾಗಿದೆ. ಒಂದು ಕಡೆ ಕೊರೋನಾ, ಮತ್ತೊಂದು ಕಡೆ ಮಲೇರಿಯಾ, ಡೆಂಗ್ಯೂನಂತಹ ಕಾಯಿಲೆಗಳು ನಮ್ಮನ್ನು ಹೆಚ್ಚು ಹೆಚ್ಚು ಬಾಧಿಸುತ್ತಿವೆ. ಆದರೆ ಆತಂಕಕ್ಕೆ ಒಳಗಾಗದೆ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಮಹಾಮಾರಿ ಕೊರೋನಾ ಎಲ್ಲಾ ಕಡೆಯೂ ಆರ್ಭಟವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳು, ವೈದ್ಯರು, ಸಾಮಾನ್ಯ ಜನರು ಹೀಗೆ ಎಲ್ಲರ ಗಮನವೂ ಕೊರೋನಾದತ್ತಲೇ ವಾಲಿದೆ. ಹೀಗಾಗಿ ಮಲೇರಿಯಾ, ಡೆಂಗ್ಯೂ ಮೊದಲಾದ ಪ್ರತಿ ವರ್ಷ ಕಾಣಿಸಿಕೊಳ್ಳುವ ಮಾರಣಾಂತಿಕ ಕಾಯಿಲೆಗಳತ್ತ ನಮ್ಮ ಗಮನ ಕಡಿಮೆಯಾಗಿದೆ. ಹಾಗಂತ ಕೊರೋನಾ ನಡುವೆ ಮಲೇರಿಯಾ, ಡೆಂಗ್ಯೂ ಮರೆಯಾಗಿ ಹೋಗಿದೆಯೇ? ಖಂಡಿತಾ ಇಲ್ಲ. ಈಗಾಗಲೇ ಹಲವು ಕಡೆಗಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ, ಡೆಂಗ್ಯೂ ಸಾವುಗಳೂ ಸಂಭವಿಸಿವೆ. ಮಲೇರಿಯಾ ಕೂಡ ಬಂದಿದೆ, ಆದರೆ ಈ ಬಗ್ಗೆ ಪ್ರಚಾರ ಕಡಿಮೆ ಇದೆ. ಜಾಗೃತಿ ಮೂಡಿಸಲು ಜನರೇ ಇಲ್ಲದಂತಾಗಿದೆ. ಆದರೆ ಜನ ಸಾಮಾನ್ಯರು ಯಾವತ್ತೂ ಈ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲೇ ಬಾರದು. ಕೊರೋನಾದಷ್ಟೇ ಇವುಗಳು ಮಾರಣಾಂತಿಕವಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.
ಡೆಂಗ್ಯೂ ಮತ್ತು ಮಲೇರಿಯಾದಂತಹ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗಗಳನ್ನು ತಡೆಗಟ್ಟಲು ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
ಮಳೆ ನೀರು ಯಾವುದೇ ಪುಟ್ಟ ತೊಟ್ಟಿ ಪ್ಲಾಸ್ಟಿಕ್ ಗಳಲ್ಲಿ ನಿಂತುಕೊಳ್ಳದಂತೆ ಮಾಡುವುದು. ಈ ರೀತಿ ಮಾಡುವುದರಿಂದ Mosquito borne (ಸೊಳ್ಳೆಯ ಮುಖಾಂತರ) ಹರಡುವಂತಹ ರೋಗಗಳು ಮಲೇರಿಯಾ ಡೆಂಗ್ಯೂ, ಜ್ವರ, ವಾಂತಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟಬಹುದು. ಮಲೇರಿಯಾ ರೋಗವು ಮಳೆಗಾಲದಲ್ಲಿ ಸುಲಭವಾಗಿ ಹರಡುತ್ತದೆ. ಒಮ್ಮೆ ಈ ಸೊಳ್ಳೆಗಳು ಮಲೇರಿಯಾ ಸೋಂಕಿತ ಮನುಷ್ಯನನ್ನು ಕಚ್ಚಿದಾಗ ಅದು ಮತ್ತೊಮ್ಮೆ ಮಲೇರಿಯಾ ಸೋಂಕಿಲ್ಲದ ವ್ಯಕ್ತಿಗೆ ಕಚ್ಚಿದರೆ ಮಲೇರಿಯಾ ಹರಡುತ್ತದೆ. ಈ ಮಲೇರಿಯಾ ಹರಡುವ ಹೆಣ್ಣು ಅನಾಫಿಲಿಸ್ ಸೊಳ್ಳೆಯು ಕಲುಷಿತ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ. ತಲೆಸುತ್ತುವುದು, ಜ್ವರ, ಚಳಿ, ವಾಕಡಿಕೆ ಮುಂತಾದವುಗಳು ಮೊದಲನೇಯದಾಗಿ ಕಾಣುವ ರೋಗದ ಲಕ್ಷಣಗಳು.
ರಸ್ತೆ ಬದಿ ಸಿಗುವ ತಿಂಡಿ ಪದಾರ್ಥಗಳನ್ನು ತಿನ್ನುವುದನ್ನು ಸದ್ಯ ನಿಲ್ಲಿಸುವುದು ಒಳಿತು. ಏಕೆಂದರೆ ಇದರಲ್ಲಿ Germ(ರೋಗಾಣುವಿನ ಅಂಶ)ದ ಬೆಳವಣಿಗೆ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಇದು ಮಳೆಗಾಲದಲ್ಲಿ ಹೆಚ್ಚು. ಏಕೆಂದರೆ ಕಲುಷಿತವಾದ ನೀರಿನ ಬಳಿ ಇರುವ ಅಂಗಡಿಯಲ್ಲಿ ತಯಾರಾದ ವಸ್ತುವಿನಲ್ಲಿ ರೋಗಾಣುಗಳಿದ್ದರೆ ಅದರಿಂದ ರೋಗ ಹರಡುವುದು ಸುಲಭ. ಮಳೆಯಲ್ಲಿ ನೆನೆಯುವುದನ್ನು ನಿಲ್ಲಿಸಬೇಕು ಅಥವಾ ನೆನೆದರೂ ಶುಚಿಯಾಗಿರುವ ಬೆಚ್ಚನೆಯ ಬಟ್ಟೆಯಿಂದ ಪೂರ್ತಿ ಮಯ್ಯನ್ನು ಒರೆಸಿಕೊಳ್ಳಬೇಕು. ಮುಖ್ಯವಾಗಿ ತಲೆಯನ್ನು ಒದ್ದೆಯಾಗಿದಲು ಬಿಡಲೇಬಾರದು. ಕೈಯನ್ನು ಶುಭ್ರವಾಗಿ ಒರೆಸಿರಿ ಅಥವಾ ತೊಳೆಯಬೇಕು. ಇದು ಅತ್ಯಂತ ಮುಖ್ಯವಾದ ಅಂಶ ಮತ್ತು ಅತಿ ಹೆಚ್ಚು ರೋಗಗಳು ಬರುವ ದಾರಿಯಾಗಿದೆ.
ಮಳೆಗಾದಲ್ಲಿ ಆಹಾರ ಪದಾರ್ಥದಲ್ಲಿ ಕೊಂಚ ಬದಲಾವಣೆ ಅಗತ್ಯ. ಹಣ್ಣುಗಳು ದೇಹಕ್ಕೆ Enegry(ತ್ರಾಣ) ಬರಲು ಸಹಾಯ ಮಾಡುತ್ತದೆ. ಮಾವು, ದಾಳಿಂಬೆ, ಪೇರಳೆ ಇತ್ಯಾದಿ. ಆದಷ್ಟು ಹಸಿರು ತರಕಾರಿ ಧಾನ್ಯ ಮುಂತಾದವುಗಳನ್ನು ನಿತ್ಯದ ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಲಿ. ಕೊಂಚ ತಂಪಾದ ಪಾನಿಯಕ್ಕೆ ತಡೆ ಇಟ್ಟರೆ ನಮ್ಮ ಈ ಮಳೆಗಾಲ ರೋಗಮುಕ್ತ ಮಳೆಗಾಲವಾಗುವುದರಲ್ಲಿ ಸಂಶಯವೇ ಇಲ್ಲ.
ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿದೆ. ಆರೋಗ್ಯವಿದ್ದರಷ್ಟೇ ನಮಗೆ ಭವಿಷ್ಯ ಇರುತ್ತದೆ, ಜೀವನ ಇರುತ್ತದೆ. ಹೀಗಾಗಿ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಅದರಲ್ಲೂ ಕೊರೋನಾ ಕಾಲಘಟ್ಟದಲ್ಲಿ ನಮ್ಮ ಸವಾಲುಗಳು ಇನ್ನಷ್ಟು ಹೆಚ್ಚುತ್ತದೆ. ಆದರೆ ಆತಂಕಕ್ಕೆ ಒಳಗಾಗದೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.