ನವದೆಹಲಿ: ಕೊರೋನಾ ಒಂದನೇ ಹಂತದ ಅನ್ಲಾಕ್ ಬಳಿಕ ಕೇಂದ್ರ ಸರ್ಕಾರ ಇದೀಗ ಎರಡನೇ ಹಂತದ ಅನ್ಲಾಕ್ ನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜುಲೈ 1 ರಿಂದ ಆರಂಭವಾಗುವಂತೆ ಈ ಹೊಸ ಮಾರ್ಗಸೂಚಿ ಜಾರಿಯಾಗಲಿದ್ದು, ಅನ್ಲಾಕ್-1 ಇಂದಿಗೆ ಮುಕ್ತಾಯವಾಗುತ್ತದೆ ಎಂದೂ ಕೇಂದ್ರ ಗೃಹ ಸಚಿವಾಲಯ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಜನ ಸಂದಣಿ ಹೆಚ್ಚಾಗಿ ಸೇರಬಹುದಾದ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. ಮನರಂಜನೆ, ರಾಜಕೀಯ ವಲಯ, ಶೈಕ್ಷಣಿಕ ವಿಚಾರಗಳು, ಧಾರ್ಮಿಕ, ಕ್ರೀಡಾ ಕ್ಷೇತ್ರಗಳು ಸೇರಿದಂತೆ ಇನ್ನಿತರ ಹೆಚ್ಚು ಜನರು ಒಂದೆಡೆ ಸೇರಿ ನಡೆಸುವ ಯಾವುದೇ ಕಾರ್ಯಕ್ರಮಗಳಿಗೂ ಅನುಮತಿ ನೀಡಲಾಗುವುದಿಲ್ಲ. ಅಲ್ಲದೇ, ಜಿಮ್, ಸಿನೆಮಾ ಮಂದಿರ, ಮೆಟ್ರೋಗಳ ಸಂಚಾರಕ್ಕೂ 2ನೇ ಅನ್ಲಾಕ್ನಲ್ಲಿಯೂ ಯಾವುದೇ ಅವಕಾಶವನ್ನು ನೀಡಲಾಗಿಲ್ಲ.
ಕೇಂದ್ರ ಗೃಹ ಸಚಿವಾಲಯದ ಹೊಸ ಆದೇಶದ ಅನ್ವಯ ದೇಶೀಯ ವಿಮಾನ ಸಂಚಾರ, ರೈಲು ಸಂಚಾರಗಳಲ್ಲಿ ಹಂತ ಹಂತವಾಗಿ ವಿಸ್ತರಣೆ, ಜುಲೈ 15 ರ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತರಬೇತಿ ಕೇಂದ್ರಗಳ ಕಾರ್ಯ ನಿರ್ವಹಣೆಗೆ ಅವಕಾಶ, ಪ್ರತಿ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಜೊತೆಗೆ ಕಾರ್ಯಕ್ಷೇತ್ರ, ಅಂಗಡಿ ಮೊದಲಾದೆಡೆಗಳಲ್ಲಿ ಪೂರಕ ನಿಯಂತ್ರಣ ಕ್ರಮಗಳನ್ನು ಅನುಸರಿಸಿಕೊಂಡಂತೆ 5 ಜನಕ್ಕಿಂತ ಹೆಚ್ಚು ಜನರಿರಲು ಅವಕಾಶ ನೀಡಲಾಗಿದೆ.
ಇನ್ನು ಶೈಕ್ಷಣಿಕವಾಗಿ ಗಮನಿಸಿದರೆ ಈ ಮಾರ್ಗಸೂಚಿಯಲ್ಲಿಯೂ ಶಾಲೆ ,ಕಾಲೇಜುಗಳು ಆರಂಭಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅವಕಾಶವನ್ನು ನೀಡಲಾಗಿಲ್ಲ. ಕಂಟೈನ್ಮೆಂಟ್ ಪ್ರದೇಶದ ಒಳಗೆ ಮತ್ತು ಹೊರಗೆ ಯಾವುದೇ ರೀತಿಯ ಸಾರ್ವಜನಿಕ ಸಮಾರಂಭಗಳನ್ನು ನಡೆಸದಂತೆಯೂ ಈ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.