ನವದೆಹಲಿ: ಸ್ವಾವಲಂಬಿ ಭಾರತ ನಮ್ಮ ಹುತಾತ್ಮರಿಗೆ ನಿಜವಾದ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರು, ಪ್ರತಿಯೊಬ್ಬ ಭಾರತೀಯರೂ ದೇಶವನ್ನು ಸದೃಢವಾಗಿ, ಹೆಚ್ಚು ಸಮರ್ಥವಾಗಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ದೃಢ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಜನರ ಭಾಗವಹಿಸುವಿಕೆ ಇಲ್ಲದೆ ಯಾವುದೇ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಲಾಗುವುದಿಲ್ಲ ಎಂದು ಹೇಳಿದ ಅವರು, ಜನರು ಸ್ಥಳೀಯ ವಸ್ತುಗಳನ್ನು ಖರೀದಿಸಬೇಕು, ಸ್ಥಳೀಯತೆಗೆ ಧ್ವನಿಯಾಗಬೇಕು, ಆ ಮೂಲಕ ದೇಶವನ್ನು ಬಲಪಡಿಸುವಲ್ಲಿ ಪಾತ್ರವಹಿಸಬೇಕು ಎಂದರು.
ಲಡಾಖ್ನಲ್ಲಿ ಹುತಾತ್ಮರಾದ ನಮ್ಮ ಸೈನಿಕರ ಶೌರ್ಯ ಮತ್ತು ತ್ಯಾಗಕ್ಕೆ ಇಡೀ ದೇಶ ಗೌರವ ಸಲ್ಲಿಸುತ್ತಿದೆ ಮತ್ತು ಅವರಿಗೆ ರಾಷ್ಟ್ರ ಋಣಿಯಾಗಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಧೈರ್ಯಶಾಲಿ ಸೈನಿಕರು ಮಾತೆ ಭಾರತೀಯ ವೈಭವ ಮತ್ತು ಗೌರವದ ಮೇಲೆ ಯಾರೂ ಕಣ್ಣು ಹಾಯಿಸಲು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.
“ಭಾರತ ಯಾವಾಗಲೂ ಸಂಕಷ್ಟಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತನೆ ಮಾಡಿಕೊಂಡಿದೆ. ಈ ಭಾವನೆಯೊಂದಿಗೆ ನಾವು ಇಂದು ಕೂಡ ಈ ಎಲ್ಲಾ ಸಂಕಷ್ಟಗಳ ನಡುವೆ ಮುನ್ನಡೆಯಬೇಕಾಗಿದೆ. ನೀವು ಕೂಡ ಈ ಚಿಂತನೆಗಳೊಂದಿಗೆ ಮುನ್ನಡೆಯಿರಿ, 130 ಕೋಟಿ ದೇಶವಾಸಿಗಳು ಮುನ್ನಡೆದರೆ ಈ ವರ್ಷ ದೇಶಕ್ಕೆ ಹೊಸ ಕೀರ್ತಿಯನ್ನು ತರುವ ವರ್ಷವಾಗಿ ಸಾಬೀತಾಗಲಿದೆ. ಈ ವರ್ಷ ನಿಮ್ಮ ದೇಶ ಹೊಸ ಗುರಿಯನ್ನು ಪ್ರಾಪ್ತಿ ಮಾಡಿಕೊಳ್ಳಲಿದೆ, ಹೊಸ ಎತ್ತರವನ್ನು ಏರಲಿದೆ. ನೂರು ಕೋಟಿ ದೇಶವಾಸಿಗಳ ಶಕ್ತಿಯ ಮೇಲೆ, ನಿಮ್ಮೆಲ್ಲರ ಮೇಲೆ, ಈ ದೇಶದ ಮಹಾನ್ ಪರಂಪರೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದಿದ್ದಾರೆ.
“ಲಾಕ್ಡೌನ್ಗಿಂತಲೂ ಹೆಚ್ಚು ಎಚ್ಚರಿಕೆಯನ್ನು ನಾವು ಅನ್ಲಾಕ್ ವೇಳೆ ವಹಿಸಬೇಕಾಗಿದೆ. ನಮ್ಮ ಎಚ್ಚರಿಕೆಯೇ ನಮ್ಮನ್ನು ಕೊರೋನಾದಿಂದ ರಕ್ಷಿಸುತ್ತದೆ. ಮಾಸ್ಕ್ ಧರಿಸದಿದ್ದರೆ, ಎರಡು ಗಜಗಳ ಅಂತರ ಕಾಯ್ದುಕೊಳ್ಳದೇ ಇದ್ದರೆ, ಇತರ ನಿಯಮಗಳನ್ನು ಪಾಲಿಸದೇ ಇದ್ದರೆ, ನೀವು ನಿಮ್ಮನ್ನು ಮಾತ್ರವಲ್ಲ ಇತರರನ್ನು ಅದರಲ್ಲೂ ವಿಶೇಷವಾಗಿ ಮನೆಯ ಮಕ್ಕಳನ್ನು ಮತ್ತು ಹಿರಿಯರನ್ನು ಕೂಡ ಅಪಾಯಕ್ಕೆ ದೂಡುತ್ತಿದ್ದೀರಿ ಎಂದರ್ಥ. ಹೀಗಾಗಿ ನಿರ್ಲಕ್ಷ್ಯ ಮಾಡದೆ ನಿಮ್ಮ ಮತ್ತು ಇತರರ ಕಾಳಜಿವಹಿಸಿ ಎಂಬ ನಿವೇದನೆಯನ್ನು ನಾನು ಮತ್ತೆ ಮತ್ತೆ ನಿಮ್ಮ ಬಳಿ ಮಾಡಿಕೊಳ್ಳುತ್ತೇನೆ” ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.