ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಮೂಲ ಸೌಕರ್ಯ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ವೇತನ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದಿನಕ್ಕೆ 100% ರಿಂದ 170% ರಷ್ಟು ವೇತನವನ್ನು ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಈ ಹೊಸ ವೇತನ ಪದ್ಧತಿ ಜೂನ್ 1 ರಿಂದಲೇ ಜಾರಿಯಾಗಿರುವುದಾಗಿಯೂ ಸರ್ಕಾರ ತಿಳಿಸಿದೆ. ಚೀನಾ ತಂಟೆ ಮಾಡುತ್ತಿರುವ ಲಡಾಕ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಹೆಚ್ಚಿನ ವೇತನ ಹೆಚ್ಚಳ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ತಿಳಿಸಿದೆ. ಚೀನಾ, ಪಾಕಿಸ್ಥಾನ ಹಾಗೂ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಅಪಾಯ ಉಂಟಾಗುವ ಸಂಭವಗಳು ಹೆಚ್ಚಾಗಿದ್ದು, ಈ ಕಾರಣದಿಂದಲೇ ಅವರಿಗೆ ವೇತನ ಹೆಚ್ಚಳ ಮಾಡಲಾಗಿರುವುದಾಗಿಯೂ ನಿಗಮ ಹೇಳಿದೆ.
ಈ ಹೊಸ ಆದೇಶದ ಅನ್ವಯ, ಲಡಾಕ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಾಂತ್ರಿಕೇತರ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ಸ್ ಗಳ ವೇತನವನ್ನು 16,770 ರೂ. ಗಳಿಂದ 41,440 ರೂ. ಗಳಿಗೆ ಏರಿಸಲಾಗಿದೆ. ಅಕೌಂಟೆಂಟ್ ಗಳಿಗೆ 25,700 ರೂ. ಗಳಿಂದ 47,360 ರೂ. ಗಳಿಗೆ ಹೆಚ್ಚಿಸಲಾಗಿದೆ. ಸಿವಿಲ್ ಎಂಜಿನಿಯರ್ ಗೆ 60 ಸಾವಿರ, ಮ್ಯಾನೇಜರ್ಗೆ 1,12,800 ರೂ , ಹಿರಿಯ ಮ್ಯಾನೇಜರ್ 1,23,600 ರೂ. ಗಳಿಗೆ ವೇತನ ಹೆಚ್ಚಿಸಿರುವುದಾಗಿಯೂ ತಿಳಿಸಿದೆ. ಇದರ ಹೊರತಾಗಿ ಗುತ್ತಿಗೆ ನೌಕರರಿಗೆ 5 ಲಕ್ಷ ರೂ. ಗಳ ಆರೋಗ್ಯ ವಿಮೆ, 10 ಲಕ್ಷ ರೂ. ಗಳ ಅಪಘಾತ ವಿಮೆ, ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಸೇರಿದಂತೆ ಇನ್ನಿತರ ಅನುಕೂಲಗಳನ್ನು ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ.
ಗಡಿ ಪ್ರದೇಶಗಳ ಅಪಾಯದ ತೀವ್ರತೆಗೆ ಅನುಗುಣವಾಗಿ ಮೂರು ವಿಧದಲ್ಲಿ ವಿಂಗಡಣೆಯನ್ನೂ ಸರ್ಕಾರ ಮಾಡಿದ್ದು, ಮೊದಲ ವಿಭಾಗದಲ್ಲಿ ಅಸ್ಸಾಂ, ಮೇಘಾಲಯ, ತ್ರಿಪುರ, ಸಿಕ್ಕಿಂ ಮತ್ತು ಉತ್ತರಾಖಂಡದಲ್ಲಿ ಕೆಲಸ ಮಾಡುವವರು ಸೇರಿದ್ದಾರೆ. ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ ಮತ್ತು ನಾಗಾಲ್ಯಾಂಡ್ನಲ್ಲಿ ಕೆಲಸ ಮಾಡುವವರು ಎರಡನೇ ವಿಭಾಗದಲ್ಲಿದ್ದರೆ, ಲಡಾಖ್ ಪ್ರದೇಶದಲ್ಲಿ ಕೆಲಸ ಮಾಡುವ ಜನರನ್ನು ಮೂರನೇ ವರ್ಗದಲ್ಲಿ ಇರಿಸಲಾಗಿದೆ ಎಂದೂ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.