ನವದೆಹಲಿ: ಗೂಗಲ್ ಆಂಡ್ರಾಯ್ಡ್ ಡೆವಲಪರ್ಸ್ ಚಾಲೆಂಜ್ನಲ್ಲಿ ಜಯಗಳಿಸಿದ ಜಗತ್ತಿನ 10 ವಿಜೇತರ ಪೈಕಿ 3 ಮಂದಿ ಭಾರತೀಯರಾಗಿದ್ದಾರೆ. ತಂತ್ರಜ್ಞಾನ ಆಧಾರಿತವಾಗಿ ಆ್ಯಪ್ಗಳನ್ನು ಅಭಿವೃದ್ಧಿ ಮಾಡುವ 10 ಮಂದಿ ವಿಜೇತರ ಪಟ್ಟಿಯಲ್ಲಿ ಭಾರತದ ಮೂರು ಡೆವಲಪರ್ಗಳೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಗ್ರೋಡಾಕ್, ಲಿಪಿ ಮತ್ತು ಯುನೋಡಾಗ್ಸ್ ಎಂಬ ಮೂರು ಡೆವಲಪರ್ಗಳನ್ನು ಟಾಪ್ ಹತ್ತರಲ್ಲಿ ಸ್ಥಾನ ನೀಡುವ ಮೂಲಕ ಗೂಗಲ್ ಗುರುತಿಸಿದೆ.
ಕೇರಳದ ಕೊಚ್ಚಿಯ ನವನುತ್ ಕೃಷ್ಣ ಅವರು ಅಭಿವೃದ್ಧಿ ಮಾಡಿರುವ, ರೈತರಿಗೆ ಬೆಳೆಗಳಿಗೆ ಬಾಧಿಸುವ ರೋಗಗಳನ್ನು ಪತ್ತೆ ಹಚ್ಚಲು ಮತ್ತು ಅವುಗಳಿಗೆ ಸೂಕ್ತವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಉಪಯೋಗವಾಗುವಂತಹ ಅಗ್ರೋಡಾಕ್, ಕರ್ನಾಟಕದ ಬೆಂಗಳೂರಿನ ಪ್ರಿನ್ಸ್ ಪಟೇಲ್ ಎಂಬವರು ಅಭಿವೃದ್ಧಿ ಮಾಡಿರುವ ಸಂಜ್ಞಾ ಭಾಷೆಗಳ ಕಲಿಕೆಗೆ ಪೂರಕವಾದ ಆ್ಯಪ್ ಮತ್ತು ಸಾಕು ಪ್ರಾಣಿಗಳ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿರುವ ಯುನೋಡಾಗ್ಸ್ ಗಳನ್ನು ಟಾಪ್ 10 ಪಟ್ಟಿಯಲ್ಲಿ ಗೂಗಲ್ ಘೋಷಿಸಿದೆ. ಆ ಮೂಲಕ ಇಂತ಼ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಗೂಗಲ್ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಆಂಡ್ರಾಯ್ಡ್ ಡೆವಲಪರ್ ರಿಲೇಶನ್ಸ್ ನ ನಿರ್ದೇಶಕ ಜಾಕೋಬ್ ಲೆಹ್ಬಂ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗಳತ್ತ ಹೆಚ್ಚು ಜನರು ಗಮನ ಹರಿಸುವಂತಾಗಲು ಇಂತಹ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಅಭಿವೃದ್ಧಿಗಳನ್ನು ಪ್ರೇರೇಪಿಸಲು ಗೂಗಲ್ ಈ ಕ್ರಮ ತೆಗೆದುಕೊಂಡಿರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ ಜನರ ಅಭಿರುಚಿಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಗೂಗಲ್ ಇಂತಹ ಹೊಸ ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ. ಹಾಗೆಯೇ ಜನರ ಸಹಕಾರವನ್ನೂ ಬಯಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.