ದೆಹಲಿ: ಸೇವೆ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ಇಂತದ್ದೇ ನಿರ್ದಿಷ್ಟ ಮಾರ್ಗ, ನಿರ್ದಿಷ್ಟ ವಲಯ ಇರಬೇಕೆಂದೇನಿಲ್ಲ. ಯಾವ ರೀತಿಯಲ್ಲಾದರೂ ಜನರ ಸೇವೆ ಮಾಡಬಹುದು. ಮೆಡಿಸಿನ್ ಬಾಬಾ ಎಂದೇ ಖ್ಯಾತರಾಗಿರುವ ದೆಹಲಿಯ ಓಂಕಾರನಾಥ್ ಇದಕ್ಕೊಂದು ಉತ್ತಮ ಉದಾಹರಣೆ.
ಬ್ಲಡ್ ಬ್ಯಾಂಕ್ನ ನಿವೃತ್ತ ಟೆಕ್ನಿಶಿಯನ್ ಆಗಿರುವ ಈ ಬಾಬಾ ಮಾಡುತ್ತಿರುವ ಸೇವೆ ವಿಭಿನ್ನ ಮತ್ತು ಅತ್ಯಂತ ಪ್ರಯೋಜನಕಾರಿಯಾದುದು. ಔಷಧಿಗಳನ್ನು ಕೊಂಡುಕೊಳ್ಳಲು ಹಣವಿಲ್ಲದೆ ಒದ್ದಾಡುವ ಬಡವರಿಗೆ ಔಷಧಿಗಳನ್ನು ಒದಗಿಸುವ ಕಾಯಕವನ್ನು ಇವರು ಮಾಡುತ್ತಾರೆ.
ಕೇಸರಿ ಬಣ್ಣದ ಧಿರಿಸು ತೊಟ್ಟು ಪ್ರತಿನಿತ್ಯ ಶ್ರೀಮಂತರ ಮನೆ ಬಾಗಿಲಿಗೆ ಹೋಗುವ ಇವರು ಅವರು ಬಳಸಿ ಹೆಚ್ಚುವರಿಯಾಗಿ ಉಳಿದ, ಅವಧಿ ಮೀರದ ಔಷಧಗಳನ್ನು ಕೇಳುತ್ತಾರೆ. ಅದನ್ನು ಸಂಗ್ರಹಿಸಿ ತಂದು ಅನಾರೋಗ್ಯ ಪೀಡಿತ ಬಡವರಿಗೆ ನೀಡುತ್ತಾರೆ. ಅವರಿಂದ ಔಷಧಿ ಪಡೆಯಲು ಬರುವವರು ವೈದ್ಯರ ಔಷಧಿ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಲೇ ಬೇಕು. ತನ್ನ ಬಳಿ ಇರುವ ಸುರಕ್ಷಿತ ಔಷಧಗಳನ್ನು ವೈದ್ಯರು ನೀಡಿದ ಚೀಟಿಯಲ್ಲಿದ್ದ ಔಷಧಗಳನ್ನು ಪರಿಶೀಲಿಸಿ ಅವರು ಅದನ್ನು ಬಡವರಿಗೆ ಉಚಿತವಾಗಿ ನೀಡುತ್ತಾರೆ.
ಪ್ರತಿ ತಿಂಗಳು ಅವರು ಕನಿಷ್ಠ 5 ಲಕ್ಷದವರೆಗಿನ ಔಷಧಿಗಳನ್ನು ಹಂಚುತ್ತಾರೆ. ತಾನು ಮನೆಮನೆಗೆ ಅಲೆದಾಡಿದಕ್ಕೂ ಅವರು ಯಾವುದೇ ಹಣವನ್ನು ಬಡವರಿಂದ ಪಡೆಯುವುದಿಲ್ಲ.
ದೆಹಲಿಯ ಪ್ರತಿ ಬಂಗಲೆಯಲ್ಲೂ ಹೆಚ್ಚುವರಿ ಔಷಧಿಗಳಿವೆ. ಆದರೆ ಅದನ್ನು ಅವರು ಕಸದಬುಟ್ಟಿಗೆ ಎಸೆಯುತ್ತಾರೆ ಎನ್ನುವ ಓಂಕಾರನಾಥ್, ಅಪಘಾತದಿಂದಾಗಿ ಕಾಲುಗಳಿಗೆ ಪೆಟ್ಟು ಬಿದ್ದ ಕಾರಣ ಕುಂಟುತ್ತಾ ನಡೆಯುತ್ತಾರೆ. ಆದರೆ ಔಷಧಿ ಸಂಗ್ರಹಿಸುವ ಮತ್ತು ಅದನ್ನು ಬಡವರಿಗೆ ಹಂಚುವ ಕಾರ್ಯಕ್ಕೆ ಬ್ರೇಕ್ ಹಾಕಿಲ್ಲ. ಪ್ರತಿನಿತ್ಯ 7 ಕಿ.ಮೀ ಸಾಗುತ್ತಾರೆ. ಕೇಸರಿ ಬಟ್ಟೆ ತೊಡುವ ಇವರನ್ನು ಎಲ್ಲರೂ ಪ್ರೀತಿಯಿಂದ ಮೆಡಿಸಿನ್ ಬಾಬಾ ಎಂದೇ ಕರೆಯುತ್ತಾರೆ.
ಭಾರತದ ಶೇ.40 ರಷ್ಟು ಜನರಿಗೆ ಇಂದಿಗೂ ಅಗತ್ಯವಾದ ಔಷಧಿಗಳನ್ನು ಖರೀದಿಸುಷ್ಟು ಹಣವಿಲ್ಲ. ಅನಾರೋಗ್ಯ ಬಂದರೂ ಅದನ್ನು ಸಹಿಸಿಕೊಳ್ಳಬೇಕಾದ ಅಥವಾ ಜೀವ ತ್ಯಾಗ ಮಾಡಬೇಕಾದ ಪರಿಸ್ಥಿತಿಗಳೂ ಇವೆ. ಇಂತವರಿಗೆ ಸಹಾಯವಾಗಲೆಂದೇ ಓಂಕಾರನಾಥ್ ಮೆಡಿಸಿನ್ ಬಾಬಾ ಆಗಿ ಜೀವನ ನಡೆಸುತ್ತಿದ್ದಾರೆ. ಅವರ ಈ ಮಹತ್ಕಕಾರ್ಯಕ್ಕೆ ಸೆಲ್ಯೂಟ್ ಹೊಡೆಯಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.