ಕಾಶ್ಮೀರ: ಸುಮಾರು ಮೂರು ದಶಕಗಳ ನಂತರ, ಶ್ರೀನಗರ ಮೂರು ಅಂತಸ್ತಿನ ಮಲ್ಟಿಪ್ಲೆಕ್ಸ್ ಅನ್ನು ಹೊಂದುವ ಭಾಗ್ಯ ಪಡೆಯಲಿದೆ. ಇದರಿಂದಾಗಿ ಕಾಶ್ಮೀರದ ಜನರು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಬಾಲಿವುಡ್ ಚಿತ್ರಗಳನ್ನು ನೋಡಲು ಸಾಧ್ಯವಾಗಲಿದೆ. ಇದು ಮಾರ್ಚ್ 2021ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.
ಭಯೋತ್ಪಾದಕರ ಬೆದರಿಕೆಯ ಹಿನ್ನೆಲೆಯಲ್ಲಿ 1990ರ ದಶಕದಲ್ಲಿ ಕಾಶ್ಮೀರದಲ್ಲಿದ್ದ ಎಲ್ಲಾ ಸಿನಿಮಾ ಥಿಯೇಟರ್ಗಳನ್ನು ಕೂಡ ಮುಚ್ಚಲಾಗಿತ್ತು. ಇದೀಗ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ ಕುಗ್ಗುತ್ತಿದೆ, ಹೀಗಾಗಿ ಅಲ್ಲಿನ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ.
ಮೂರು ಅಂತಸ್ತಿನ ಮಲ್ಟಿಪ್ಲೆಕ್ಸ್ ಈಗಾಗಲೇ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿಯನ್ನು ಪಡೆದುಕೊಂಡಿದೆ, ಆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರವೇ ಪರವಾನಗಿ ನೀಡಲಾಗುತ್ತದೆ.
ಮಲ್ಟಿಪ್ಲೆಕ್ಸ್ ಮೂರು ಚಿತ್ರಮಂದಿರಗಳನ್ನು ಹೊಂದಿದ್ದು, 90ರ ದಶಕದ ಶ್ರೀನಗರದಲ್ಲಿದ್ದ ಪ್ರಸಿದ್ಧ ಸಿನೆಮಾ ಹಾಲ್ ಬೋರ್ಡಾವೇ ಸಿನೆಮಾಕ್ಕೆ ಹೊಂದಿಕೊಂಡಂತೆಯೇ ಇದನ್ನು ನಿರ್ಮಿಸಲಾಗುತ್ತಿದೆ. ಕಾಶ್ಮೀರದ ಈ ಮೊದಲ ಮಲ್ಟಿಪ್ಲೆಕ್ಸ್ ಅನ್ನು ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಧಾರ್ ಕುಟುಂಬದ ಒಡೆತನದ ಎಂ/ಎಸ್ ತಕ್ಸಲ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ನಿರ್ಮಿಸುತ್ತಿದೆ. ಧಾರ್ ಕುಟುಂಬವು ಶ್ರೀನಗರದಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್ ಶಾಖೆಗಳನ್ನು ನಡೆಸುತ್ತಿದೆ.
ಮಾಲೀಕ ವಿಜಯ್ ಧಾರ್ ಹೇಳುವಂತೆ, “ಕಳೆದ 30 ವರ್ಷಗಳಲ್ಲಿ ಇಲ್ಲಿನ ಯುವಕರಿಗೆ ಏನೂ ಸಿಕ್ಕಿಲ್ಲ ಎಂದು ನಾವು ಭಾವಿಸಿದ್ದೇವೆ. ಈ ಯುವಕರಿಗೆ ಯಾವುದೇ ಮನರಂಜನೆ ದೊರೆತಿಲ್ಲ. ದೇಶದ ಬೇರೆಡೆ ಇರುವ ಸೌಲಭ್ಯಗಳು ಇಲ್ಲಿರುವ ಮಕ್ಕಳು ಅಥವಾ ಯುವಕರಿಗೆ ಕೂಡ ಸಿಗಬೇಕಿದೆ. ಮನರಂಜನೆ ನೀಡುವುದು ನನ್ನ ಉದ್ದೇಶ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.