ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿರುವ ಜಗನ್ನಾಥ ರಾವ್ ಜೋಶಿ ಅವರು 23 ಜೂನ್ 1920 ರಂದು ಕರ್ನಾಟಕದ ನರಗುಂದದಲ್ಲಿ ಜನಿಸಿದರು. ಪುಣೆಯ ನೂತನ್ ಮರಾಠಿ ವಿದ್ಯಾಲಯದಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು ಹೆಚ್ಚಿನ ಶಿಕ್ಷಣವನ್ನು ಶ್ರೀ ಪರಶುರಾಮಭವ್ ಕಾಲೇಜಿನಲ್ಲಿ ಪಡೆಯುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ ಪದವಿ ಪಡೆಯುತ್ತಾರೆ. ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರೇಪಿತರಾಗುತ್ತಾರೆ. ಪುಣೆಯಲ್ಲಿ ಭಾರತೀಯ ಜನ ಸಂಘದ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಮುಂದಡಿ ಇಡುತ್ತಾರೆ.
1967 ರಲ್ಲಿ ಭೋಪಾಲ್ ಮತ್ತು 1971 ರಲ್ಲಿ ಶಾಜ್ ಪುರ್ (ಮಧ್ಯಪ್ರದೇಶ) ಗಳಿಂದ ಎರಡು ಬಾರಿ ಲೋಕಸಭೆಗೂ ಆಯ್ಕೆಯಾಗಿದ್ದರು. 1978 ರಿಂದ 1984 ರ ವರೆಗೆ ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರಾಗಿ ಮತ್ತು ಉತ್ತಮ ರಾಜಕಾರಣಿಯಾಗಿಯೂ ಗುರುತಿಸಿಕೊಂಡವರು. ಗೋವಾ ವಿಮೋಚನಾ ಚಳುವಳಿಯಲ್ಲಿಯೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕವೂ ದೇಶವಾಸಿಗಳಿಗೆ ಪರಿಚಿತರಾಗಿದ್ದಾರೆ.
ಅತ್ಯುತ್ತಮ ವಾಗ್ಮಿಯೂ ಆಗಿರುವ ಜಗನ್ನಾಥ ರಾವ್ ಜೋಶಿ ಅವರು ಕರ್ನಾಟಕದಲ್ಲಿ ಭಾರತೀಯ ಜನ ಸಂಘ ಮತ್ತು ಭಾರತೀಯ ಜನತಾ ಪಕ್ಷವನ್ನು ಸದೃಢವಾಗಿ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದು, ಬಹಳಷ್ಟು ಶ್ರಮ ವಹಿಸಿದ್ದಾರೆ. ಈ ಕಾರಣದಿಂದಲೇ ಅವರಿಗೆ ‘ಕರ್ನಾಟಕ ಕೇಸರಿ’ (ಲಯನ್ ಆಫ್ ಕರ್ನಾಟಕ) ಎಂಬ ಬಿರುದು ಬಂದಿದೆ. ಕನ್ನಡ, ಹಿಂದಿ, ಮರಾಠಿ ಸೇರಿದಂತೆ ಇನ್ನೂ ಹಲವಾರು ಭಾಷೆಗಳಲ್ಲಿ ನೈಪುಣ್ಯತೆ ಹೊಂದಿದ್ದ ಇವರು, ಎಲ್ಲಾ ಭಾಷೆಗಳಲ್ಲಿಯೂ ನಿರರ್ಗಳವಾಗಿ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದರು.
ಜೋಶಿ ಅವರ ಸಮಾಜ ಸೇವೆ, ಪಕ್ಷವನ್ನು ಬಲಪಡಿಸಿದ ಸಾರ್ಥಕ ಕೆಲಸಕ್ಕೆ ಗೌರವ ಸಲ್ಲಿಸುವ ಸಲುವಾಗಿ ಗದಗದ ನರಗುಂದದಲ್ಲಿ 2015 ರಲ್ಲಿ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನವನ್ನೂ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಅವರ ಸೇವೆಯನ್ನು ಜೀವಂತವಾಗಿರಿಸುವ ಕೆಲಸವನ್ನೂ ಮಾಡಲಾಗಿದೆ.
1991 ಜುಲೈ 15, ತಮ್ಮ 71 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಜೋಶಿ ಅವರು ಹಾಕಿಕೊಟ್ಟ ಮಾರ್ಗ ಇಂದೂ ಭಾಜಪಾಗೆ ದಾರಿದೀಪವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.