ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರವು ಸುಮಾರು 22 ಲಕ್ಷ ಆರೋಗ್ಯಸೇವಾ ಪೂರೈಕೆದಾರರಿಗೆ 50 ಲಕ್ಷ ರೂ ವಿಮಾ ಯೋಜನೆಯನ್ನು ಸೆಪ್ಟೆಂಬರ್ವರೆಗೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಕೊರೋನಾ ರೋಗಿಗಳ ಸೇವೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ ಈ ನಿರ್ಧಾರವು ದೊಡ್ಡ ಭದ್ರತೆಯನ್ನು ಒದಗಿಸಲಿದೆ ಎಂದು ವರದಿಗಳು ತಿಳಿಸಿವೆ.
ಮಾರ್ಚ್ನಲ್ಲಿ 1.70 ಲಕ್ಷ ರೂ.ಗಳ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ನ ಅಂಗವಾಗಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದ ಆರೋಗ್ಯ ಕಾರ್ಯಕರ್ತರಿಗಾಗಿನ ಈ ವಿಮೆಯು ಜೂನ್ 30ಕ್ಕೆ ಅಂತ್ಯವಾಗಲಿತ್ತು, ಇದೀಗ ಕೇಂದ್ರ ಅದನ್ನು ಸೆಪ್ಟಂಬರ್ ತಿಂಗಳವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದೆ.
ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 22.12 ಲಕ್ಷ ಸಾರ್ವಜನಿಕ ಆರೋಗ್ಯ ಸೇವಾ ಪೂರೈಕೆದಾರರಿಗೆ ಈ ವಿಮೆಯು 50 ಲಕ್ಷ ರೂ.ಗಳ ಸಮಗ್ರ ವೈಯಕ್ತಿಕ ಅಪಘಾತ ವಿಮೆಯನ್ನು ಒದಗಿಸುತ್ತದೆ. ಕೊರೋನಾವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ನೇರ ಸಂಪರ್ಕದಲ್ಲಿರುವ ಮತ್ತು ಆರೈಕೆ ಮಾಡುತ್ತಿರುವ ಮತ್ತು ಹೆಚ್ಚು ಅಪಾಯಕ್ಕೆ ಒಳಗಾಗಬಹುದಾದ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಇದು ಹೆಚ್ಚು ಪ್ರಯೋಜನ ನೀಡಲಿದೆ.
ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ ಮಾರ್ಚ್ 30, 2020 ರಿಂದ ಅನ್ವಯವಾಗುವಂತೆ ವಿಮೆ ಜಾರಿಗೆ ಬಂದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಈ ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯ ಮೂಲಕ ಈ ಯೋಜನೆಗೆ ಧನಸಹಾಯ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಅರೆವೈದ್ಯರು, ನೈರ್ಮಲ್ಯ ಕಾರ್ಮಿಕರು ಮತ್ತು ಇನ್ನೂ ಕೆಲವರು ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಯೋಜನೆಯನ್ನು ಪ್ರಕಟಿಸುವಾಗ, ಸ್ವಚ್ಛತಾ ಕಾರ್ಮಿಕರು, ವಾರ್ಡ್-ಹುಡುಗರು, ದಾದಿಯರು, ಆಶಾ ಕಾರ್ಯಕರ್ತರು, ಅರೆವೈದ್ಯರು, ತಂತ್ರಜ್ಞರು, ವೈದ್ಯರು ಮತ್ತು ತಜ್ಞರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ವಿಶೇಷ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.