ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಲ್ಲಿ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ 52.95 %ರಷ್ಟಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈವರೆಗೆ ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರದ ಮುನ್ನೂರ ಇಪ್ಪತ್ತೈದು ಜನರಿಗೆ ಪೂರಕ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಾಗಿದೆ ಎಂದೂ ಸರ್ಕಾರ ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಏಳು ಸಾವಿರದ ಮುನ್ನೂರಕ್ಕೂ ಅಧಿಕ ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಸುಮಾರು ಒಂದು ಲಕ್ಷದ ಅರುವತ್ತು ಸಾವಿರದ ಮುನ್ನೂರ ಎಂಬತ್ತನಾಲ್ಕು ಜನರು ಕೊರೋನಾ ಪಾಸಿಟಿವ್ ಹೊಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿಯೂ ಪಿಟಿಐಟಿ ತಿಳಿಸಿದೆ. ಕಳೆದ 24 ಗಂಟೆಯಲ್ಲಿ 12 ಸಾವಿರದ 800 ರಷ್ಟು ಕೋವಿಡ್-19 ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ. ಇವೆಲ್ಲವೂ ಸೇರಿ ದೇಶದಲ್ಲಿ ಒಟ್ಟು ಮೂರು ಲಕ್ಷದ ಅರವತ್ತಾರು ಸಾವಿರದ ಒಂಬೈನೂರ ನಲವತ್ತಾರು ಪ್ರಕರಣಗಳು ದಾಖಲಾದಂತಾಗಿದೆ. 3.33% ರಷ್ಟು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದೂ ಈ ವರದಿ ಮಾಹಿತಿ ನೀಡಿದೆ.
ಕಳೆದ 24 ಗಂಟೆ ಅಂದರೆ ಒಂದು ದಿನದಲ್ಲಿ ದೇಶದಲ್ಲಿ 1,65,412 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ದೇಶದೊಳಗಿನ ಎಲ್ಲಾ ಪ್ರಯೋಗಾಲಯಗಳಿಗೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ನಡೆದ ಅತೀ ಹೆಚ್ಚು ಕೋವಿಡ್ ಪರೀಕ್ಷೆ ಇದಾಗಿದೆ ಎಂದೂ ಐಸಿಎಂಆರ್ ಮಾಹಿತಿ ನೀಡಿದೆ. ದೇಶದಲ್ಲಿ ಈ ವರೆಗೂ 62,49,668 ಕ್ಕೂ ಹೆಚ್ಚು ಕೊರೋನಾ ಪರೀಕ್ಷೆ ನಡೆಸಲಾಗಿದೆ.
ಸೋಂಕು ವ್ಯಾಪಕವಾಗಿ ತೀವ್ರ ಗತಿಯಲ್ಲಿ ಹರಡುತ್ತಿರುವುದರಿಂದಾಗಿ ದೇಶದಲ್ಲಿ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಗಳಲ್ಲಿ ಕೊರೋನಾ ಪರೀಕ್ಷೆ ನಡೆಸಲು ಅನುಮತಿಯನ್ನು ನೀಡಲಾಗುತ್ತಿದೆ. 699 ಸರ್ಕಾರಿ ಮತ್ತು 254 ಖಾಸಗಿ ಲ್ಯಾಬ್ ಗಳು ಕೊರೋನಾ ಪರೀಕ್ಷೆಯ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತದೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.