ಬೆಳ್ತಂಗಡಿ : ಗ್ರಾಮ ಪಂಚಾಯತ್ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು.
ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ ಭಾರತ ಮಿಷನ್, ಜಿಲ್ಲಾ ನೆರವು ಘಟಕ, ದ.ಕಜಿ.ಪಂ ಹಾಗೂ ತಾಲೂಕು ಪಂಚಾಯತ್ ಬೆಳ್ತಂಗಡಿ ವತಿಯಿಂದ ತಾಲೂಕು ಮಟ್ಟದ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳ ಅಭಿವೃದ್ದಿಯಲ್ಲಿ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆಯೂ ಸೇರಿಕೊಳ್ಳುತ್ತದೆ. ಇದನ್ನು ಉಪಯುಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛ ಭಾರತ ಕಲ್ಪನೆ ಗ್ರಾಮ ಮಟ್ಟದಲ್ಲೂ ಆಗಬೇಕು. ಎಲ್ಲರೂ ದೃಢ ಸಂಕಲ್ಪದಿಂದ ಸ್ವಚ್ಛತೆಗೆ ಗಮನ ಕೊಟ್ಟರೆ ಗ್ರಾಮಗಳು ನಿರ್ಮಲವಾಗಿರುತ್ತದೆ. ಪರಿಸರ ಶುದ್ಧವಾಗಿರುತ್ತದೆ. ಇದಕ್ಕೆ ಅನುದಾನಗಳು ಬೇಕಾಗಿಲ್ಲ. ತಮ್ಮ ತಮ್ಮ ಮನೆಗಳ ಕಸ ವಿಲೇವಾರಿ ನಿರ್ವಹಣೆಯನ್ನು ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಬಿಸಾಡದೆ ಗಮನ ಹರಿಸಿದಾಗ ಸ್ವಚ್ಛ ಭಾರತದ ಕಲ್ಪನೆಗೆ ಅರ್ಥಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಮಾತನಾಡಿ, ಸ್ಚಚ್ಛ ಭಾರತದ ಕಲ್ಪನೆಯ ಈ ಯೋಜನೆಯನ್ನು ಸಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಿದವರೆಲ್ಲರೂ ಇಲ್ಲಿನ ಮಾಹಿತಿಯನ್ನು ಗ್ರಾಮ ಮಟ್ಟದಲ್ಲಿ ನೀಡುವುದರ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀವಿದ್ಯಾ ಪ್ರಸ್ತಾವಿಸಿ, ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಇದೆ. ಮನೆಗಳಲ್ಲಿ, ಪರಿಸರದಲ್ಲಿ ಸಾರ್ವಜನಿಕರೇ ಮುತುವರ್ಜಿಯಿಂದ ಕಸಕಡ್ಡಿಗಳನ್ನು ಬಿಸಾಕದೆ ಜಾಗ್ರತೆ ವಹಿಸಿದರೆ ಪರಿಸರ ಸ್ವಚ್ಛವಾಗಿರುತ್ತದೆ. ಸಂಘಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನು ಸೇರಿಸಿಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗಡಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ ಗ್ರಾಮಾಡಳಿತ ಸೂಚನೆ ನೀಡಬೇಕು. ಬೇಕಾಬಿಟ್ಟಿ ಕಸಗಳನ್ನು ಬಿಸಾಕುವ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಿ. ಇಂತಹ ಕ್ರಮ ಕೈಗೊಳ್ಳದಿದ್ದರೆ ಗ್ರಾಪಂನ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಜಿಲ್ಲಾ ಮಟ್ಟದ ಸಭೆ ಕರೆದು ಇದರ ಬಗ್ಗೆ ಆದ ಪ್ರಗತಿಯನ್ನು ಪರಿಶೀಲನೆ ನಡೆಸಿ, ಸ್ವಚ್ಛ- ನಿರ್ಮಲ ಗ್ರಾಪಂಗೆ ಪುರಸ್ಕಾರ ನೀಡಲಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ತಾಪಂ ಉಪಾಧ್ಯಕ್ಷ ವಿಷ್ಣು ಮರಾಠೆ ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಜಿಪಂ ಉಪಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.ತಾಪಂ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್. ಮಹಾಂತೇಶ್ ಸ್ವಾಗತಿಸಿದರು. ಲಾಲ ಪಂ. ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಜಿಲ್ಲಾ ನೆರವು ಘಟಕದ ಮಂಜುಳಾ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.