ಭೋಪಾಲ್: ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ವಸ್ತುಗಳು ಗ್ರಾಹಕರಿಲ್ಲದೆ ಸೊರಗಿದ್ದರೆ, ಮಾಸ್ಕ್(ಮುಖಗವಸು) ಉದ್ಯಮ ಮಾತ್ರ ಭರ್ಜರಿ ಮಾರಾಟವನ್ನು ಕಂಡಿದೆ. ಸೋಂಕು ಹರಡುವ ಭೀತಿಯಿಂದ ಎಲ್ಲರೂ ಮಾಸ್ಕ್ ಹಾಕಿಕೊಂಡೇ ಮನೆಯಿಂದ ಹೊರಗೆ ಕಾಲಿಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಅನೇಕ ರೀತಿಯ ಚಿತ್ರ ವಿಚಿತ್ರ ಮಾಸ್ಕ್ ಗಳೂ ಸಹ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದೆ
ಸದ್ಯ ಮಧ್ಯಪ್ರದೇಶದಲ್ಲಿ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ಮುಖದ ಚಿತ್ರವಿರುವ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಗ್ರಾಹಕರೂ ಸಹ ಮುಗಿಬಿದ್ದು ಮೋದಿ ಅವರ ಮುಖಚರ್ಯೆ ಹೊಂದಿರುವ ಮಾಸ್ಕ್ ಅನ್ನು ಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವ್ಯಾಪಾರಿಯೊಬ್ಬರು, ತಾವು ಈವರೆಗೆ 500ರಿಂದ 1000ರಷ್ಟು ಮೋದಿ ಅವರ ಮುಖಭಾವವಿರುವ ಮಾಸ್ಕ್ ಗಳನ್ನು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್, ರಾಹುಲ್ ಗಾಂಧಿ ಮೊದಲಾವರ ಮುಖದ ಚಿತ್ರವಿರುವ ಮಾಸ್ಕ್ ಗಳನ್ನೂ ಮಾರಾಟ ಮಾಡುತ್ತಿದ್ದು, ಇವೆಲ್ಲವುಗಳಲ್ಲಿಯೂ ಮೋದಿ ಮಾಸ್ಕ್ ಖರೀದಿ ಮಾಡುವವರ ಸಂಖ್ಯೆಯೇ ಹೆಚ್ಚಾಗಿದ್ದು, ಮತ್ತಷ್ಟು ಮಂದಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿಸಿದ್ದಾರೆ. ಮೋದಿ ಮಾಸ್ಕ್ ಬೆಸ್ಟ್ ಸೆಲ್ಲಿಂಗ್ ಮಾಸ್ಕ್ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವಾಗ ಮಾಸ್ಕ್ ಅನ್ನು ಕೇಂದ್ರ ಸರ್ಕಾರವೇ ಕಡ್ಡಾಯಗೊಳಿಸಿದ್ದು, ಆ ಮೂಲಕ ಕೋವಿಡ್-19 ಎಂಬ ಸಾಂಕ್ರಾಮಿಕ ಮಾರಿಯಿಂದ ಜನರು ರಕ್ಷಣೆ ಪಡೆಯುವಂತೆ ಸೂಚಿಸಲಾಗಿದೆ. ಕೊರೋನಾವೈರಸ್ ಭೀಕರ ದಾಳಿಗೆ ತುತ್ತಾಗಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಸಹ ಒಂದಾಗಿದ್ದು, ಇಲ್ಲಿ ಮಾಸ್ಕ್ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ರಾಜ್ಯದಲ್ಲಿ 11,000 ಕ್ಕೂ ಅಧಿಕ ಸೋಂಕಿತರ ಸಂಖ್ಯೆ ಇದ್ದು, 465 ಜನರು ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಬಳಿಕ ಲಾಕ್ಡೌನ್ ಸಡಿಲಿಕೆಯಾಗಿದ್ದು, ಈ ಸಂದರ್ಭದಲ್ಲಿ ಇಲ್ಲಿನ ಪ್ರತಿಯೊಬ್ಬ ಜನರೂ ಮಾಸ್ಕ್ ಧಾರಣೆ ಮಾಡುವುದನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ತಿಳಿಸಲಾಗಿದೆ. ಬ್ಯಾಂಕ್, ಆಭರಣ ಮಳಿಗೆಗಳಲ್ಲಿ 30 ಸೆಕೆಂಡ್ ಗಳಷ್ಟು ಕಾಲ ಮುಖವನ್ನು ಪೊಲೀಸ್ ರಿಗೆ ತೋರಿಸುವ, ಸಿಸಿಟಿವಿ ಗಳಿಗೆ ತೋರಿಸುವ ವ್ಯವಸ್ಥೆಯನ್ನು ಭದ್ರತಾ ಕಾರಣಗಳಿಂದಾಗಿ ಮಾಡಿಕೊಳ್ಳಲಾಗಿದೆ. ಹೊರತುಪಡಿಸಿದಂತೆ ಉಳಿದೆಲ್ಲ ಕಡೆಗಳಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಇಂತಹ ಸಂದರ್ಭದಲ್ಲಿ ಮೋದಿ ಮಾಸ್ಕ್ ಹೆಚ್ಚು ಜನರನ್ನು ಆಕರ್ಷಿಸಲಾರಂಭಿಸಿದೆ.
ಇನ್ನು ಉತ್ತರಾಖಂಡ ,ಕೇರಳ, ಒರಿಸ್ಸಾ ಮೊದಲಾದ ರಾಜ್ಯಗಳಲ್ಲಿ ಮಾಸ್ಕ್ ರಹಿತ ಓಡಾಟಕ್ಕೆ 5000 ರೂ. ವರೆಗೆ ದಂಡವನ್ನೂ ವಿಧಿಸಲಾಗುತ್ತಿದೆ. ಕೋವಿಡ್ನಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವಲ್ಲಿ ಉಳಿದೆಲ್ಲವುಗಳಿಗಿಂತಲೂ ಮಾಸ್ಕ್ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಸ್ಕ್ ವ್ಯಾಪಾರಿಗಳು ರಾಷ್ಟ್ರೀಯ, ರಾಜ್ಯ ನಾಯಕರ ಚಿತ್ರವಿರುವ ಮಾಸ್ಕ್ ಗಳನ್ನು ಸಿದ್ಧಪಡಿಸಿ ಉತ್ತಮ ವ್ಯಾಪಾರ ಕಂಡುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.