
ನವದೆಹಲಿ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗ ಕಾರ್ಮಿಕರನ್ನು ಅವರ ತವರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಶ್ರಮಿಕ್ ರೈಲುಗಳಿಗೆ ಈಗಲೂ ವಿವಿಧ ರಾಜ್ಯಗಳಿಂದ ಬೇಡಿಕೆ ಬರುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೇರಳವೂ ಸೇರಿದಂತೆ ದೇಶದ 7 ರಾಜ್ಯಗಳಿಂದ ಸುಮಾರು63 ಶ್ರಮಿಕ್ ರೈಲುಗಳನ್ನು ಓಡಿಸಲು ಮನವಿಗಳು ಬಂದಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ವಲಸಿಗರಿಗೆ ಸುರಕ್ಷಿತ ಮತ್ತು ಆರಾಮದಾಯಕ ಸಂಚಾರ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಸರ್ಕಾರ ಸದಾ ಸಿದ್ಧವಾಗಿದೆ ಎಂದೂ ರೈಲ್ವೆ ವಕ್ತಾರರು ಮಾಹಿತಿ ನೀಡಿದ್ದಾರೆ. ರೈಲ್ವೆ ಮಂಡಳಿಯ ಅಧ್ಯಕ್ಷರು ರಾಜ್ಯಗಳಿಗೆ ಈ ಕುರಿತಂತೆ ಪತ್ರ ಬರೆದ ತರುವಾಯ, ವಿವಿಧ ರಾಜ್ಯಗಳಿಂದ 63 ಶ್ರಮಿಕ್ ರೈಲುಗಳಿಗೆ ಬೇಡಿಕೆ ಬಂದಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಕಾಶ್ಮೀರ ಸೇರಿದಂತೆ ಇನ್ನೂ ಅನೇಕ ರಾಜ್ಯಗಳು ಶ್ರಮಿಕ್ ರೈಲುಗಳ ಸೇವೆ ನೀಡಲು ಮನವಿ ಮಾಡಿರುವುದಾಗಿಯೂ ಇಲಾಖೆ ಸ್ಪಷ್ಟಪಡಿಸಿದೆ.
63 ಶ್ರಮಿಕ್ ರೈಲುಗಳ ಪೈಕಿ, ಕೇರಳ 32 ರೈಲಿಗೆ, 10 ರೈಲುಗಳಿಗೆ ತಮಿಳುನಾಡು, 9 ರೈಲುಗಳಿಗೆ ಜಮ್ಮು ಕಾಶ್ಮೀರ, ಆರು ಕರ್ನಾಟಕ, ಮೂರು ಆಂಧ್ರಪ್ರದೇಶ, ಗುಜರಾತಿಗಳು 1 ಮತ್ತು ಪಶ್ಚಿಮಬಂಗಾಳ 2 ರೈಲುಗಳಿಗೆ ಬೇಡಿಕೆ ಇಟ್ಟಿರುವುದಾಗಿಯೂ ಇಲಾಖೆ ಹೇಳಿದೆ. ಉತ್ತರ ಪ್ರದೇಶದಿಂದ ಯಾವುದೇ ಮನವಿ ಬಂದಿಲ್ಲ ಎಂಬ ಮಾಹಿತಿಯನ್ನು ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ಶ್ರಮಿಕ್ ರೈಲುಗಳನ್ನು ಒದಗಿಸುವಂತೆ ಕೋರಿ ಯಾದವ್ ಅವರು ಸರ್ಕಾರಕ್ಕೆ ಜೂನ್ 9 ರಂದು ಪತ್ರ ಬರೆದಿದ್ದು, ಅದಾದ 24 ಗಂಟೆಗಳಲ್ಲಿ ಅವರ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದ್ದಾಗಿಯೂ ವಕ್ತಾರರು ಸ್ಪಷ್ಟ ಪಡಿಸಿದ್ದಾರೆ. ಯಾವುದೇ ರಾಜ್ಯದಿಂದ ಶ್ರಮಿಕ್ ರೈಲುಗಳಿಗೆ ಬೇಡಿಕೆ ಬಂದ 24 ಗಂಟೆಗಳೊಳಗಾಗಿ ಆ ರಾಜ್ಯಗಳಿಗೆ ಶ್ರಮಿಕ್ ರೈಲು ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನೂ ಈಲಾಖೆಯ ಅಧಿಕಾರಿಗಳು ನೀಡಿದ್ದಾರೆ.
ಮೇ 1 ರಿಂದ ತೊಡಗಿದಂತೆ ಈವರೆಗೆ ಸುಮಾರು 60 ಲಕ್ಷ ಜನರನ್ನು ಅವರವರ ಸ್ವಸ್ಥಾನಗಳಿಗೆ ಸೇರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ವಲಸಿಗರು, ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ಹಲವರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾಗಿಯೂ ವಕ್ತಾರರು ಮಾಹಿತಿ ನೀಡಿದ್ದಾರೆ. ಕೇವಲ ಶ್ರಮಿಕ್ ರೈಲುಗಳು ಮಾತ್ರವಲ್ಲದೆ ಮೇ 12 ರಿಂದ ವಿಶೇಷ ಹವಾನಿಯಂತ್ರಿತ ರೈಲು, ಜೂನ್ 1 ರಿಂದ 200 ಪ್ರಯಾಣಿಕ ರೈಲುಗಳನ್ನು ಓಡಿಸಲಾಗಿದ್ದು ಸಾರ್ವಜನಿಕರು ಇದರ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿರುವುದಾಗಿಯೂ ರೈಲ್ವೆ ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


