ನವದೆಹಲಿ: ನಿರಂತರವಾಗಿ ವಿಸ್ತರಿಸುತ್ತಿರುವ ಇಂಡೋ-ಜಪಾನ್ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ, ಉಭಯ ದೇಶಗಳು ‘ಲೂನಾರ್ ಪೋಲಾರ್ ಎಕ್ಸ್ಪ್ಲೋರೇಶನ್’ ಎಂಬ ಜಂಟಿ ಚಂದ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದು. ಇದರ ಅಡಿಯಲ್ಲಿ ಭಾರತದ ಉನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನಿನ ಬಾಹ್ಯಾಕಾಶ ಸಂಸ್ಥೆಯಾದ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (JAXA ) ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ವರದಿಗಳು ತಿಳಿಸಿವೆ.
ಇಸ್ರೋ ಮತ್ತು ಜಾಕ್ಸಾ ಒಟ್ಟಾಗಿ ಮೊದಲ ಬಾರಿಗೆ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಮತ್ತು ರೋವರ್ ಇಡಲು ಪ್ರಯತ್ನಿಸಲಿವೆ. ಈ ಕಾರ್ಯಾಚರಣೆಯನ್ನು 2023 ರ ನಂತರ ಪ್ರಾರಂಭಿಸಲಾಗುತ್ತದೆ ಎನ್ನಲಾಗಿದೆ. ಅಲ್ಲದೇ, ಜಾಕ್ಸಾದ ರೇಖಾಚಿತ್ರಗಳ ಪ್ರಕಾರವೇ ಒಟ್ಟಾರೆ ಲ್ಯಾಂಡಿಂಗ್ ಮಾಡ್ಯೂಲ್ ಮತ್ತು ರೋವರ್ ಅನ್ನು ನಿರ್ಮಿಸುವ ನಿರೀಕ್ಷೆಯಿದೆ, ಇಸ್ರೋ ಲ್ಯಾಂಡರ್ ವ್ಯವಸ್ಥೆಯನ್ನು ನಿರ್ಮಿಸಲಿದೆ. ಅಲ್ಲದೆ, ಜಾಕ್ಸಾದ ಗೊತ್ತುಪಡಿಸಿದ ಎಚ್ 3 ರಾಕೆಟ್ನಲ್ಲಿ ಈ ಕಾರ್ಯಾಚರಣೆಯನ್ನು ಜಪಾನ್ನಿಂದ ಉಡಾಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಜಪಾನ್ ನಡುವಿನ ಈ ರೀತಿಯ ಜಂಟಿ ಚಂದ್ರ ಕಾರ್ಯಾಚರಣೆಯ ಪರಿಕಲ್ಪನೆಯನ್ನು ಮೊದಲ ಬಾರಿಗೆ 2017 ರಲ್ಲಿ ಬೆಂಗಳೂರಿನಲ್ಲಿ ಬಹು-ಬಾಹ್ಯಾಕಾಶ ಏಜೆನ್ಸಿಗಳ ಸಭೆಯಲ್ಲಿ ಬಹಿರಂಗಪಡಿಸಲಾಯಿತು. ನಂತರ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ಗೆ ಭೇಟಿ ನೀಡಿದಾಗ, ಈ ವಿಚಾರವು ಅಂತರ್ ಸರ್ಕಾರಿ ಚರ್ಚೆಗಳಲ್ಲಿ ಪ್ರಸ್ತಾಪಗೊಂಡಿತ್ತು. ಈ ವರ್ಷದ ಆರಂಭದಲ್ಲಿ, ಮಿಷನ್ಗಾಗಿ ಸಮಗ್ರ ನಿರ್ವಹಣಾ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಬಾಹ್ಯಾಕಾಶ ನೌಕಾ ವ್ಯವಸ್ಥೆಯ ಅವಶ್ಯಕತೆಗಳು ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಅವಲೋಕನ ನಡೆಸಲು ಪೂರ್ವ ಯೋಜನಾ ತಂಡವನ್ನು ರಚಿಸಲಾಯಿತು.
ಈ ನಡುವೆ, ಇಸ್ರೋ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ‘ಗಗನಯಾನ’ಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ, ಈ ಕಾರ್ಯಾಚರಣೆಯು 2022ರ ವೇಳೆಗೆ ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುವ ಸುಸಂದರ್ಭದಲ್ಲಿ ನೆರವೇರುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.