ನವದೆಹಲಿ: ಭಾರತದ ವಿರುದ್ಧ ಚೀನಾದ ಗಡಿ ಉಪಟಳ ಹೆಚ್ಚಾಗುತ್ತಿದೆ, ಹೀಗಾಗಿ ಚೀನಾಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈಗ ಭಾರತೀಯರು ಹೊಸ ತಂತ್ರವನ್ನು ಸಿದ್ಧಪಡಿಸಿದ್ದಾರೆ. ಅದೇನೆಂದರೆ ಚೀನಾದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು. ಇದಕ್ಕೆ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಕೈಜೋಡಿಸಿದೆ. ಚೀನಾದಿಂದ ಆಮದು ಕಡಿಮೆ ಮಾಡುವುದನ್ನು ಉತ್ತೇಜಿಸಲು ಅಭಿಯಾನವನ್ನು ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಚೀನಾದಿಂದ ಆಮದುಗೊಂಡ ಮತ್ತು ಅದಕ್ಕೆ ಪರ್ಯಾಯಗಳು ಭಾರತದಲ್ಲೇ ಉತ್ಪಾದನೆಗೊಳ್ಳುತ್ತಿರುವಂತಹ ಸುಮಾರು 3000 ವಸ್ತುಗಳ ಪಟ್ಟಿಯನ್ನು ಸಿಎಐಟಿ ಮಾಡಿದೆ. ಚೀನಾದಿಂದ ಆಮದುಗೊಂಡ ಇಂತಹ ವಸ್ತುಗಳನ್ನು ಬಹಿಷ್ಕರಿಸುವುದಾಗಿ ಅದು ಹೇಳಿದೆ. ಭಾರತದ ಜನರಿಗೆ ಚೀನಾದ ವಸ್ತುಗಳನ್ನು ಬಳಕೆ ಮಾಡದೆ ಬದುಕುವುದು ಅಸಾಧ್ಯ ಎಂಬ ಚೀನಾ ಹೇಳಿಕೆಗೆ ತಕ್ಕ ತಿರುಗೇಟು ನೀಡುವ ಸಲುವಾಗಿ ಸಿಎಐಟಿ ಈ ಕ್ರಮಕ್ಕೆ ಮುಂದಾಗಿದೆ.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶೀ, ಸ್ವಾವಲಂಬಿ ಭಾರತ, ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿಯೂ ಈ ಅಭಿಯಾನ ಪೂರಕವಾಗಿ ಕೆಲಸ ಮಾಡಲಿದೆ. ದೇಶದ ಸ್ವಾಭಿಮಾನಕ್ಕೆ ಚೀನಾ ಏಟು ನೀಡುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿಯೂ ಮೂಲಗಳು ಅಧಿಕೃತ ಮಾಹಿತಿ ನೀಡಿದೆ.
ಭಾರತದಲ್ಲಿ 7 ಕೋಟಿಗಳಷ್ಟು ವ್ಯಾಪಾರಿಗಳಿದ್ದಾರೆ. ಈ ಒಕ್ಕೂಟದಲ್ಲಿ 40 ಸಾವಿರಕ್ಕೂ ಹೆಚ್ಚು ವ್ಯಾಪಾರಿ ಸಂಘಟನೆಗಳು ಸದಸ್ಯರಾಗಿವೆ. ಈ ಎಲ್ಲರಿಂದಲೂ ಚೀನೀ ವಸ್ತುಗಳನ್ನು ಬಹಿಷ್ಕರಿಸುವ, ಆಮದು ನಿಲ್ಲಿಸುವ ಯೋಜನೆಗೆ ಸಹಕಾರ ಸಿಕ್ಕರೆ, ಸ್ವದೇಶೀ ಆಂದೋಲನ, ಆತ್ಮ ನಿರ್ಭರ ಭಾರತಕ್ಕೆ ಮಹತ್ತರ ಜಯ ಸಿಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಆಂದೋಲನಕ್ಕೆ ‘ಭಾರತೀಯ ವಸ್ತು ನಮ್ಮ ಹೆಮ್ಮೆ’ ಎಂದು ಹೆಸರಿಡಲಾಗಿದ್ದು, ಆ ಮೂಲಕ ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ ನೀಡಲಾಗುವುದಾಗಿಯೂ ವ್ಯಾಪಾರಿಗಳ ಸಂಘ ಮಾಹಿತಿ ನೀಡಿದೆ.
ಚೀನಾ ಭಾರತದ ಮೇಲೆ ವಿನಾ ಕಾರಣ ಕಾಲ್ಕೆರೆದು ಜಗಳ ಮಾಡುತ್ತಿದ್ದು, ಅದರ ಸೊಕ್ಕಡಗಿಸುವ ನಿಟ್ಟಿನಲ್ಲಿಯೂ ಈ ಅಭಿಯಾನ ಭಾರತಕ್ಕೆ ಸಹಾಯ ಮಾಡಲಿದೆ. ಈ ಯೋಜನೆಯ ಮೊದಲನೇ ಹಂತವಾಗಿ ಸಿದ್ಧ ವಸ್ತುಗಳ ಆಮದಿಗೆ ಕಡಿವಾಣ ಹಾಕಲಾಗುತ್ತದೆ. ಬಳಿಕ ಕಚ್ಛಾ ವಸ್ತುಗಳು, ಬಿಡಿ ಭಾಗಗಳ ಆಮದು ಸೇರಿದಂತೆ ಇನ್ನಿತರ ವಸ್ತುಗಳ ಆಮದು ನಿಷೇಧಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಸಂಘ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.