ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆಯ ಅನುಭವವನ್ನು ಹಂಚಿಕೊಳ್ಳುವ ಬಗ್ಗೆ ನೀಡಿದ ಪ್ರಸ್ತಾಪವನ್ನು ಭಾರತ ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ ನಿರಾಕರಿಸಿದೆ ಎಂದು ವರದಿಯಾಗಿದೆ. ಭಾರತವು ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ನೀಡಿರುವ ಆರ್ಥಿಕ ಉತ್ತೇಜನ ಪ್ಯಾಕೇಜ್ ಗಾತ್ರವು ಪಾಕಿಸ್ಥಾನದ ಜಿಡಿಪಿಯಷ್ಟೇ ದೊಡ್ಡದಾಗಿದೆ ಎಂದು ಭಾರತ ಖಾನ್ ಅವರಿಗೆ ನೆನಪಿಸಿಕೊಟ್ಟಿದೆ.
ಟ್ವಿಟ್ ಮಾಡಿದ್ದ ಇಮ್ರಾಖ್ ಖಾನ್, “ಕೋವಿಡ್-19ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಪಾಕಿಸ್ಥಾನ ಸರ್ಕಾರವು ಒಂಬತ್ತು ವಾರಗಳಲ್ಲಿ 120 ಬಿಲಿಯನ್ ರೂಪಾಯಿಗಳನ್ನು 10 ಮಿಲಿಯನ್ ಕುಟುಂಬಗಳಿಗೆ ಪಾರದರ್ಶಕ ರೀತಿಯಲ್ಲಿ ಯಶಸ್ವಿಯಾಗಿ ವರ್ಗಾವಣೆ ಮಾಡಿದೆ. ಭಾರತಕ್ಕೆ ಸಹಾಯ ಮಾಡಲು ಈ ನಗದು ವರ್ಗಾವಣೆ ಯೋಜನೆಯ ಅನುಭವವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ನಮ್ಮ ಯೋಜನೆಯ ವ್ಯಾಪ್ತಿ ಮತ್ತು ಪಾರದರ್ಶಕತೆಯನ್ನು ವಿಶ್ವ ಮಟ್ಟದಲ್ಲಿ ಪ್ರಶಂಸಿಸಲಾಗಿದೆ” ಎಂದಿದ್ದರು.
ಭಾರತದಲ್ಲಿ ಬಡ ಜನರು ಬಡತನದ ವಿರುದ್ಧ ಹೋರಾಡುತ್ತಿರುವ ಬಗೆಗಿನ ವರದಿಗಳ ಹಿನ್ನಲೆಯಲ್ಲಿ ಈ ಸಲಹೆಯನ್ನು ನೀಡಿದ್ದಾಗಿ ಅವರು ಹೇಳಿದ್ದಾರೆ.
ಖಾನ್ ಅವರ ಸಲಹೆಗೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, “ಪಾಕಿಸ್ಥಾನವು ತನ್ನ ಸ್ವಂತ ಜನರ ಬದಲು ದೇಶದ ಹೊರಗಿನ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಮಾಡುವುದಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಸ್ಪಷ್ಟವಾಗಿ, ಇಮ್ರಾನ್ ಖಾನ್ ಅವರಿಗೆ ಹೊಸ ಸಲಹೆಗಾರರು ಮತ್ತು ಉತ್ತಮ ಮಾಹಿತಿಯ ಅಗತ್ಯವಿದೆ” ಎಂದಿದ್ದಾರೆ.
“ಅವರ ಸಾಲದ ಸಮಸ್ಯೆ (ಜಿಡಿಪಿಯ ಸುಮಾರು 90 ಪ್ರತಿಶತ) ಮತ್ತು ಸಾಲ ಪುನರ್ ರಚನೆಗಾಗಿ ಅವರು ಎಷ್ಟು ಒತ್ತಡ ಹೇರಿದ್ದಾರೆಂಬುದು ನಮಗೆಲ್ಲರಿಗೂ ತಿಳಿದಿದೆ. ಭಾರತವು ಆರ್ಥಿಕ ಪ್ರಚೋದಕ ಪ್ಯಾಕೇಜ್ ಅನ್ನು ಹೊರ ತಂದಿದೆ ಮತ್ತು ಅದು ಪಾಕಿಸ್ಥಾನದ ವಾರ್ಷಿಕ ಜಿಡಿಪಿಯಷ್ಟು ದೊಡ್ಡದಾಗಿದೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ” ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ದುಷ್ಪರಿಣಾಮವನ್ನು ಎದುರಿಸಲು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ವಿವಿಧ ಪ್ರಮುಖ ಕ್ಷೇತ್ರಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.