ಹೈದರಾಬಾದ್: ಕೋವಿಡ್ 19 ಭಾರತದಲ್ಲಿ ಅಟ್ಟಹಾಸ ಮೆರೆಯಲು ಆರಂಭಿಸಿದ ನಂತರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಐಐಟಿ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮಾಡುತ್ತಲೇ ಬಂದಿದೆ. ಇದೀಗ ಹೈದರಾಬಾದ್ ಐಐಟಿ ಸಂಶೋಧಕರು ಕೇವಲ 20 ನೇ ನಿಮಿಷದಲ್ಲಿ ಕೊರೋನಾ ಟೆಸ್ಟ್ ಮಾಡಿ ಫಲಿತಾಂಶ ನೀಡುವ ಟೆಸ್ಟಿಂಗ್ ಕಿಟ್ ಒಂದನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರ ತಂಡ, ಈ ಕಿಟ್ ಕಡಿಮೆ ಅವಧಿಯಲ್ಲಿ ಉತ್ತಮ ಫಲಿತಾಂಶ ನೀಡುವುದಾಗಿಯೂ ತಿಳಿಸಿದ್ದಾರೆ. ಇದು ಸದ್ಯ ಕೋವಿಡ್ ಟೆಸ್ಟಿಂಗ್ನಲ್ಲಿ ಬಳಕೆ ಮಾಡುವ ಆರ್ಟಿ-ಪಿಸಿಆರ್ ವಿಧಾನವನ್ನು ಅನುಸರಿಸಿ ಕಾರ್ಯ ನಿರ್ವಹಿಸುವುದಿಲ್ಲ. ಬದಲಾಗಿ ಇದರಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಬೇರೆಯದೇ ಆಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದು ಸೋಂಕಿನ ಸಾಮಾನ್ಯ ಲಕ್ಷಣ ಹೊಂದಿರುವ ಮತ್ತು ಲಕ್ಷಣಗಳೇ ಇಲ್ಲದೆ ಸೋಂಕಿನಿಂದ ಬಳಲುವ ರೋಗಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ರೋಗಿಯಿಂದ ರೋಗ ಪರೀಕ್ಷೆಗೆ ಬೇಕಾದ ಗಂಟಲು ದ್ರವ ಸಂಗ್ರಹಿಸಿ, ಕೇವಲ 20 ನಿಮಿಷಗಳ ಕಾಲದಲ್ಲಿ ಸೋಂಕಿದೆಯೋ ಇಲ್ಲವೋ ಎಂಬ ನಿಖರ ಫಲಿತಾಂಶ ವನ್ನು ಇದು ನೀಡುತ್ತದೆ. ಇದು ಪೋರ್ಟೆಬಲ್ ಆಗಿದ್ದು, ಸೋಂಕಿತರಿರುವಲ್ಲಿಗೇ ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸುವುದು ಸಾಧ್ಯ. ಇದರಲ್ಲಿ ನಡೆಸುವ ಪರೀಕ್ಷೆಯ ಬೆಲೆ 550 ರೂ. ಮಾತ್ರ ಆಗಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಈ ಕಿಟ್ ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾದಲ್ಲಿ ಇದರಲ್ಲಿ ಮಾಡುವ ಪರೀಕ್ಷಾ ದರ ಮತ್ತಷ್ಟು ಕಡಿಮೆಯಾಗಬಹುದು ಎಂಬ ಭರವಸೆಯನ್ನೂ ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಇದರ ಬಳಕೆಯ ಅನುಮತಿಗಾಗಿ ಈಗಾಗಲೇ ಐಐಟಿ ಪೇಟೆಂಟ್ ಸಹ ಸಲ್ಲಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ. ಅಲ್ಲದೆ ಹೈದರಾಬಾದ್ನ ಇಎಸ್ಐಸಿ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಕಿಟ್ನ ಪ್ರಯೋಗಾರ್ಥ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಸಂಶೋಧನಾ ತಂಡ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.