ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳಕ್ಕಾಗಿ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕರೋನವೈರಸ್ ಸಾಂಕ್ರಾಮಿಕ ಮತ್ತು ವಲಸೆ ಕಾರ್ಮಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾದ ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.
ಶಾ ಅವರ ವರ್ಚುವಲ್ ರ್ಯಾಲಿ ಬಿಜೆಪಿಯ “ಆತ್ಮನಿರ್ಭಾರ ಭಾರತ್” ಅಭಿಯಾನದ ಭಾಗವಾಗಿದೆ. ಕೆಲವು ದಿನಗಳ ಹಿಂದೆ ಬಿಜೆಪಿಯು, ಕಳೆದ ಒಂಬತ್ತು ವರ್ಷಗಳಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ “ಒಂಬತ್ತು ಅಂಶಗಳ ಚಾರ್ಜ್ಶೀಟ್” ಬಿಡುಗಡೆ ಮಾಡಿತ್ತು. ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ಸ್ವರೂಪದಲ್ಲಿ ಪ್ರತಿಭಟನೆಯನ್ನು ನಡೆಸಿರುವ ಬಿಜೆಪಿ ‘ಆರ್ ನೋಯಿ ಮಮತಾ’ (ಇನ್ನು ಮುಂದೆ ಮಮತಾ ಆಡಳಿತ ಇಲ್ಲ) ಎಂಬ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದೆ.
ಮೆಗಾ ಆನ್ಲೈನ್ ಕಾರ್ಯಕ್ರಮವನ್ನು ಘೋಷಿಸಿದ್ದ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರು ಸೋಮವಾರ, ಈ ರ್ಯಾಲಿಯು ಪಶ್ಚಿಮಬಂಗಾಳ ರಾಜ್ಯದಲ್ಲಿ ರಾಜಕೀಯ ಬದಲಾವಣೆಯನ್ನು ಆರಂಭಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇದು ನಮಗೆ ಮೊದಲನೇಯದು ಮತ್ತು ನಮ್ಮ ಪಕ್ಷವು ಭಾಗವಹಿಸುವವರ ಸಂಖ್ಯೆಯಲ್ಲಿ ವಿಶ್ವ ದಾಖಲೆಯನ್ನು ಸ್ಥಾಪಿಸುತ್ತದೆ” ಎಂದಿದ್ದಾರೆ.
ಬಿಜೆಪಿ ನಾಯಕರ ಪ್ರಕಾರ, ಪಶ್ಚಿಮ ಬಂಗಾಳದಾದ್ಯಂತ ಸುಮಾರು 1 ಕೋಟಿ ಜನರು ಆನ್ಲೈನ್ನಲ್ಲಿ ವರ್ಚುವಲ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಇದನ್ನು ರಾಜ್ಯದಾದ್ಯಂತ 78,000 ಬೂತ್ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ರ್ಯಾಲಿ ಕೋಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ಪ್ರಾರಂಭವಾಗಲಿದ್ದು, ಘೋಷ್ ಪಕ್ಷದ ಕಚೇರಿಯಿಂದ ರ್ಯಾಲಿಯನ್ನು ಪ್ರಾರಂಭಿಸಲಿದ್ದಾರೆ. ಘೋಷ್ ಅವರ ಭಾಷಣದ ನಂತರ, ಶಾ ತಮ್ಮ ಭಾಷಣವನ್ನು ನವದೆಹಲಿಯಿಂದ ಪ್ರಾರಂಭಿಸಲಿದ್ದಾರೆ. ಮಾಜಿ ಬಿಜೆಪಿ ಮುಖ್ಯಸ್ಥರು ಸುಮಾರು 1,000 ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲಿದ್ದಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ ಕೆಲವೇ ದಿನಗಳ ನಂತರ ಶಾ ಅವರು ವರ್ಚುವಲ್ ರ್ಯಾಲಿ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.