ಮನಸ್ಸಿದೆಯಾ, ಸಾಧಿಸುವ ಮಾರ್ಗವೂ ನಮ್ಮ ಮುಂದೆ ಹಲವಾರಿದೆ. ಸಾಧನೆಯ ವಿಚಾರದಲ್ಲಿ ಮಹಿಳೆ, ಪುರುಷ ಎಂಬ ಲಿಂಗ ಅಸಮಾನತೆ, ವಯಸ್ಸು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಶ್ರಮ, ಛಲಕ್ಕೆ ಫಲವಿದೆ ಎಂಬುದಕ್ಕೆ ಸಾಕ್ಷಿ ಮಣಿಪುರದ ಇಂಫಾಲ್ನ 53 ವರ್ಷದ ರಿಕ್ಷಾ ಚಾಲಕಿ ಮಹಿಳೆ ಒಯ್ನಂ ಲಿಬಿ. ಪುರುಷನ ಅಡಿಯಾಳು ಮಹಿಳೆ ಎಂಬ ಮನಸ್ಥಿತಿ ಹೊಂದಿದ್ದ ಸಮಾಜದಲ್ಲಿ, ಮಹಿಳೆ ಪುರುಷನಿಗಿಂತೇನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡುವ ಮೂಲಕ ಹೇಗೆ ಬದುಕನ್ನು ಸಮರ್ಥವಾಗಿ ಕಟ್ಟಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದವರು ಲಿಬಿ.
ಕೆಲ ವರ್ಷಗಳ ಹಿಂದೆ ತಾವು ದಿನಗೂಲಿ ಮಾಡುತ್ತಿದ್ದಾಗ ಸಿಕ್ಕಿದ ಹಣದಲ್ಲಿ ಸ್ವಲ್ಪ ಸ್ವಲ್ಪವನ್ನೇ ಒಟ್ಟುಗೂಡಿಸಿಕೊಂಡು ಸೆಕೆಂಡ್ ಹ್ಯಾಂಡ್ ಆಟೋ ರಿಕ್ಷಾ ಒಂದನ್ನು ಲಿಬಿ ಖರೀದಿ ಮಾಡುತ್ತಾರೆ. ಇದಕ್ಕಾಗಿ ಅವರು 1,30,000 ರೂ. ಗಳನ್ನು ಖರ್ಚು ಮಾಡುತ್ತಾರೆ. ರಿಕ್ಷಾ ಓಡಿಸಲು 250 ರೂ. ದಿನಗೂಲಿ ನಿರ್ಧರಿಸಿ ಚಾಲಕನ ನೇಮಕವನ್ನೂ ಮಾಡುತ್ತಾರೆ. ಆದರೆ ಈ ಚಾಲಕನಿಗೆ ಸಮಯ ಪ್ರಜ್ಞೆ ಅಥವಾ ನಿಯತ್ತು ಇಲ್ಲದೇ ಇರುವುದನ್ನು ಮನಗಂಡ ಲಿಬಿ, ಆತನನ್ನು ಕೆಲಸದಿಂದ ವಜಾ ಗೊಳಿಸಿ, ಅನಂತರದ ದಿನಗಳಲ್ಲಿ ತಾವೇ ಆಟೋ ರಿಕ್ಷಾವನ್ನು ಓಡಿಸಲು ಆರಂಭ ಮಾಡುತ್ತಾರೆ.
ತಮ್ಮ ಮನೆಕೆಲಸಗಳಲ್ಲಿನ ಬಿಡುವಿನ ಸಂದರ್ಭದಲ್ಲಿ ಇವರು ರಿಕ್ಷಾ ಚಾಲಕಿಯಾಗಿ ಖುಂದ್ರಾಕ್ಪಂನಿಂದ ನಾಗಮಪಾಲ್ಗೆ ಸೇವೆ ನೀಡುತ್ತಾರೆ. ಈ ವೇಳೆ ಇವರಿಗೊಂದು ಸತ್ಯದ ಅರಿವಾಗುತ್ತದೆ. ಅದೇನೆಂದರೆ ನಮ್ಮ ಸ್ವಂತ ಆಟೋರಿಕ್ಷಾವನ್ನು ನಾವೇ ಓಡಿಸುವುದರಿಂದ ದಿನಕ್ಕೆ 700 ಕ್ಕೂ ಹೆಚ್ಚು ಹಣವನ್ನು ಉಳಿಕೆ ಮಾಡುಬಹುದೆಂದು ಅರಿತ ಇವರು ಹೆಚ್ಚು ಶ್ರಮ ವಹಿಸಿ ದುಡಿದು ಬದುಕನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳುತ್ತಾರೆ. ಇದಾಗಿ ಕೆಲವು ಸಮಯದ ಬಳಿಕ ಸಾಲ ಪಡೆದು ಇವರು ಹೊಸ ಆಟೋರಿಕ್ಷಾ ಖರೀದಿಸಿ, ಅದರಲ್ಲಿ ಮತ್ತಷ್ಟು ಶ್ರಮ ವಹಿಸಿ, ಬೆವರು ಸುರಿಸಿ ಬದುಕು ಕಟ್ಟಿಕೊಳ್ಳುತ್ತಾರೆ. ಆ ಮೂಲಕ ಅವರನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುವಂತೆ ಮಾಡುತ್ತಾರೆ.
ಲಾಕ್ಡೌನ್ ಸಂದರ್ಭದಲ್ಲಿ ಲಿಬಿ ಅವರು ಮಹತ್ವದ ಕಾರ್ಯವೊಂದನ್ನು ಮಾಡುವ ಮೂಲಕ ಪ್ರಶಂಸೆ ಪಡೆದುಕೊಂಡಿದ್ದಾರೆ. ಆಂಬ್ಯುಲೆನ್ಸ್ ಅಥವಾ ಇನ್ನಾವುದೇ ವಾಹನ ಚಾಲಕರು ಕೊರೋನಾ ಚಿಕಿತ್ಸೆ ಪಡೆದು ಮನೆಗೆ ತೆರಳುವ ಬಾಲಕಿಯನ್ನು ಮನೆಗೆ ತಲುಪಿಸಲು ಮುಂದಾಗದಾಗ, ಲಿಬಿ ಅವರೇ ಆ ಬಾಲಕಿ ಮತ್ತಾಕೆಯ ಪೋಷಕರನ್ನು ತಮ್ಮ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಕಾಮ್ಜಾಂಗ್ಗೆ ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾರೆ. ತಾವಿರುವ ಊರಿನಿಂದ ಸುಮಾರು ಏಳೆಂಟು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾದ ಊರಿಗೆ ಮಾನವೀಯತೆ ದೃಷ್ಟಿಯಿಂದ ಹೊರಡುತ್ತಾರೆ.
ಇಳಿವಯಸ್ಸಿನಲ್ಲಿ ಮಹಿಳೆ ಯಾವುದಕ್ಕೂ ಕಡಿಮೆಯಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಅಗಾಧವಾದ ಛಲದೊಂದಿಗೆ ಕೊರೋನಾದಿಂಚ ಚೇತರಿಸಿಕೊಂಡ ಬಾಲಕಿಯನ್ನು ಕಠಿಣ ರಸ್ತೆಯಲ್ಲಿಯೂ ಮನೆ ಸೇರಿಸಲು ಹರಸಾಹಸ ಪಡುತ್ತಾರೆ. ದಾರಿ ಮಧ್ಯೆ ಅಲ್ಲಲ್ಲಿ ಪೊಲೀಸರು ಇವರನ್ನು ತಡೆದು ನಿಲ್ಲಿಸುತ್ತಾರೆ. ಅವರಿಗೆ ಎಲ್ಲಾ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟು, ಅವರಿಂದಲೂ ಪ್ರೋತ್ಸಾಹ, ಸಹಕಾರವನ್ನು ಪಡೆಯುವ ಲಿಬಿ ಕೊನೆಗೂ ಹುಡುಗಿಯನ್ನು ಮತ್ತು ಆಕೆಯ ಕುಟುಂಬವನ್ನು ಜೋಪಾನವಾಗಿ ಮನೆ ಸೇರಿಸುತ್ತಾರೆ.
ಆ ಬಾಲಕಿಯದ್ದು ರೈತ ಕುಟುಂಬ. ಲಿಬಿಗಾಗಿ ಅವರ ಮನೆಯಲ್ಲಿ ಅವರೇ ಬೆಳೆದ ತರಕಾರಿಗಳನ್ನು ಬಳಸಿ ಅಡುಗೆ ಮಾಡಿ ಬಡಿಸಿ ಕೃತಜ್ಞತೆ ಸೂಚಿಸುತ್ತಾರೆ. ಅಲ್ಲದೆ ಹಿಂದೆ ಮುಂದೆ ನೋಡದೆ ಲಿಬಿಯ ಬಾಡಿಗೆ ಹಣ 5000 ರೂ. ಗಳನ್ನು ಅವರಿಗೆ ನೀಡುತ್ತಾರೆ. ಅಲ್ಲಿಂದ ಊರು ಸೇರಿದ ಲಿಬಿ ಸದ್ಯ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಹೀಗಿದ್ದರೂ ಬೇಸರಿಸಿಕೊಳ್ಳದ ಲಿಬಿ ಸದ್ಯ ಮತ್ತೊಂದು ಕನಸಿನೊಂದಿಗೆ ನಡೆಯಲಾರಂಭಿಸಿದ್ದಾರೆ. ಆ ಬಾಲಕಿಯ ರೈತ ಕುಟುಂಬದಿಂದ ಪ್ರೇರಣೆ ಪಡೆದಿರುವ ಲಿಬಿ ಬದುಕಿನಲ್ಲಿ ತಾವೂ ಒಬ್ಬ ಕೃಷಿಕೆ ಆಗಬೇಕೆಂದುಕೊಂಡಿದ್ದಾರೆ. ಇದಕ್ಕೆ ಸ್ಫೂರ್ತಿ ಕೊರೋನಾ ಪೀಡಿತ ಬಾಲಕಿಯ ಮನೆಯವರೇ ಎನ್ನುತ್ತಾರೆ. ಕ್ವಾರಂಟೈನ್ ಮುಗಿದ ನಂತರದಲ್ಲಿ ಆಟೋ ಓಡಿಸುವ ಜೊತೆಗೆ, ಅದೇ ಕೃಷಿ ಕುಟುಂಬದಿಂದ ಕೃಷಿ ಸಂಬಂಧಿ ಮಾಹಿತಿ ಪಡೆದು ಆ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವುದಾಗಿ ಲಿಬಿ ಹೇಳುತ್ತಾರೆ.
ಲಿಬಿ, 53 ವರ್ಷದ ಮಹಿಳೆ. ಯಾವ ಕೆಲಸ ಮಾಡಬೇಕಾದರೂ ಮೊದಲು ನಾವು ಮನಸ್ಸು ಮಾಡಬೇಕು. ಮನಸ್ಸಿದ್ದರೆ ವಯಸ್ಸು ಎಂಬುದು ಕೇವಲ ಸಂಖ್ಯೆಯಾಗುತ್ತದೆಯೇ ಹೊರತು, ನಮ್ಮನ್ನು ಕುಗ್ಗಿಸುವ ವಿಚಾರವಾಗುವುದಿಲ್ಲ ಎಂಬುದನ್ನು ಲಿಬಿ ತಮ್ಮ ಕೆಲಸಗಳ ಮೂಲಕವೇ ಸಮಾಜಕ್ಕೆ ತೋರಿಸಿದ್ದಾರೆ. ಇಂತಹ ಸಾಧಕ ಮಹಿಳೆ ಲಿಬಿ ಅವರ ಜೀವನಕ್ಕೆ ಸಂಬಂಧಿಸಿದಂತೆ ಮೀನಾ ಲಂಗ್ಜಾಮ್ ಅವರು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿದ್ದಾರೆ. ಈ ಚಿತ್ರ 2015 ರಲ್ಲಿ 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಸಾಮಾಜಿಕ ಕಳಕಳಿಯ ಚಿತ್ರ, 2017 ರಲ್ಲಿ ಅತ್ಯುತ್ತಮ ಕಿರು ಚಿತ್ರ ಎಂಬ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಬದುಕುವ ಛಲವಿದ್ದವರಿಗೆ ಗುರಿ ಮಾತ್ರ ಕಣ್ಮುಂದೆ ಇರುತ್ತದೆ. ಅದನ್ನು ಸಾಧಿಸುವ ಮೂಲಕ ಇತರರಿಗೆ ಹೀಗೂ ಮಾಡಬಹುದೆಂಬುದನ್ನು ತೋರಿಸಿಕೊಡುತ್ತಾರೆ ಎಂಬುದಕ್ಕೆ ಮನೋ ಯೌವನದ ಮಹಿಳೆ ಲಿಬಿ ಸಾಕ್ಷಿ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.